ಹರಿಹರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಸೋಮವಾರ ಆರು ದಿನ ಪೂರೈಸಿದ್ದು, ಸೋಮವಾರ ನಗರದ ಕೆಎಸ್‌ಆರ್‌ಟಿಸಿ ಡಿಪೋ ಹಾಗೂ ಮಿನಿ ವಿಧಾನಸೌಧದ ಎದುರು ನೌಕರರ ಕುಟುಂಬಸ್ಥರು ತಟ್ಟೆ-ಲೋಟ ಬಡಿಯುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.
ಮಿನಿ ವಿಧಾನಸೌಧದ ಬಳಿ ಬೆಳಿಗ್ಗೆ 11 ಗಂಟೆಗೆ ಜಮಾಯಿಸಿದ ಚಾಲಕ-ನಿರ್ವಾಹಕರ ಕುಟುಂಬದ ಸದಸ್ಯರು ತಾಲೂಕು ಕಚೇರಿ ಮುಂದೆ ಕೆಲ ಹೊತ್ತು ತಟ್ಟೆ-ಲೋಟ ಬಡಿದು ಪ್ರತಿಭಟಿಸಿದರು. ನಂತರ ತಹಶೀಲ್ದಾರ್ ರಾಮಚಂದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಶೀಲಾ ಎಂ., ಕಳೆದ ಡಿಸೆಂಬರ್ ನಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸುವ ಬೇಡಿಕೆ ಹೊರತುಪಡಿಸಿ ಆರನೇ ವೇತನ ಆಯೋಗದ ಶಿಫಾರಸಿನಂತೆ ವೇತನ ನಿಗದಿ ಸೇರಿದಂತೆ ಇತರೆ ಎಂಟು ಪ್ರಮುಖ ಬೇಡಿಕೆಗಳನ್ನು ಮೂರು ತಿಂಗಳಲ್ಲಿ ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಈಗ ವೇತನ ಹೆಚ್ಚಳ ಸಾಧ್ಯವಿಲ್ಲ ಎನ್ನುವ ಮೂಲಕ ಬಡ ಕಾರ್ಮಿಕರಿಗೆ ಮೋಸ ಮಾಡಿದೆ ಎಂದು ಆರೋಪಿಸಿದರು.
ಕಾವ್ಯ ಮಾತನಾಡಿ, ಅಧಿಕಾರಿಗಳು ನಮ್ಮ ಮನೆಗೆ ಬಂದು ಹೆದರಿಸಿ ಬೆದರಿಸಿ ಕೆಲಸಕ್ಕೆ ಬರುವಂತೆ ಒತ್ತಾಯಿಸುತ್ತಿದ್ದಾರೆ. ನ್ಯಾಯಯುತ ಬೇಡಿಕೆಗೆ ಮುಷ್ಕರ ನಡೆಸುತ್ತಿರುವವರನ್ನು ಹತ್ತಿಕ್ಕಲು ವರ್ಗಾವಣೆ ಮಾಡುವುದು, ಕೆಲಸದಿಂದ ವಜಾಗೊಳಿಸುವಂತಹ ಕ್ರಮ ಕೈಗೊಂಡು ಸರ್ಕಾರ ಸೇಡು ತೀರಿಸಿಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂದಿರಾ ಮಾತನಾಡಿ, ಆರು ದಿನಗಳ ಮುಷ್ಕರ ಯಶಸ್ವಿಯಾಗಿದೆ. ಅಲ್ಲೊಂದು, ಇಲ್ಲೊಂದು ಬಸ್ ಸಂಚರಿಸುತ್ತಿದೆ ಎಂದು ಎದೆಗುಂದುವುದು ಬೇಡ. ನಮ್ಮ ನೌಕರರು ಯಾರೂ ಬಸ್ ಓಡಿಸುತ್ತಿಲ್ಲ. ಖಾಸಗಿ ಚಾಲಕರನ್ನು ಕರೆದುಕೊಂಡು ಬಂದಿದ್ದಾರೆ.
ಕೆಲಸ ಮಾಡಲು ಆಗದಂತಹ ಅಸಹಾಯಕರನ್ನು ಹೆದರಿಸಿ ಬೆದರಿಸಿ ಕೆಲಸ ಮಾಡಿಸುತ್ತಿದ್ದಾರೆ. ಮುಷ್ಕರ ಮುರಿಯಲು ಸರ್ಕಾರ ಹಲವು ಪ್ರಯತ್ನ ಮಾಡುತ್ತಿದೆ. ನೌಕರರು ಗೊಂದಲಕ್ಕೆ ಒಳಗಾಗಬಾರದು ಎಂದರು. ಪ್ರತಿಭಾ ಮಾತನಾಡಿ, ಸರ್ಕಾರ ಕೂಡಲೇ ಮಾರ್ಚ್ ತಿಂಗಳ ವೇತನ ಬಿಡುಗಡೆ ಮಾಡಬೇಕು. ವಜಾ ಹಾಗೂ ವರ್ಗಾವಣೆ ಆದೇಶಗಳನ್ನು ರದ್ದುಪಡಿಸಬೇಕು. ಇಲ್ಲದಿದ್ದರೆ ನಾವು ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಆಶಾ, ಮಧು, ಬಿಂದು, ಗೀತಾ, ನಾಗರತ್ನ, ಉಮಾರಾಣಿ, ಲಕ್ಷ್ಮೀ, ಅಕ್ಷತಾ ಸೇರಿದಂತೆ ಸಾರಿಗೆ ನೌಕರರ ನೂರಾರು ಕುಟುಂಬಸ್ಥರು ಭಾಗವಹಿಸಿದ್ದರು.