ದಾವಣಗೆರೆ: ಆರನೇ ವೇತನ ಆಯೋಗದ ಶಿಫಾರಸು ಜಾರಿ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ಸಂಸ್ಥೆ ನೌಕರರು ನಡೆಸುತ್ತಿರುವ ಮುಷ್ಕರ ಬೆಂಬಲಿಸಿ ಕುಟುಂಬ ಸದಸ್ಯರು ಸಿಐಟಿಯು, ರಾಜ್ಯ ರೈತ ಸಂಘ (ಕೋಡಿಹಳ್ಳಿ ಚಂದ್ರಶೇಖರ್ ಬಣ), ರಸ್ತೆ ಸಾರಿಗೆ ನೌಕರರ ಒಕ್ಕೂಟದ ನೇತೃತ್ವದಲ್ಲಿ ಸೋಮವಾರ ನಗರದ ಶಿವಯೋಗಿ ಮಂದಿರ ಆವರಣದಲ್ಲಿ ತಟ್ಟೆ ಲೋಟ ಬಡಿಯುವ ಚಳವಳಿ ನಡೆಸಿದರು.
ಶಿವಯೋಗಿ ಮಂದಿರ ಆವರಣದಲ್ಲಿ ಚಳವಳಿ ನಡೆಸಿದ ನಂತರ ಜಿಲ್ಲಾಧಿ ಕಾರಿ ಕಚೇರಿಗೆ ಮನವಿ ಸಲ್ಲಿಸಲು ತೆರಳಲು ಮುಂದಾದಾಗ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ. ಆಗ ಪೊಲೀಸರೊಂದಿಗೆ ವಾಗ್ವಾದ ನಡೆಯಿತು. ಜಿಲ್ಲಾಧಿ ಕಾರಿ ಇಲ್ಲವೇ ಉಪವಿಭಾಗಾ ಧಿಕಾರಿ ಸ್ಥಳಕ್ಕೆ ಅಗಮಿಸಿ ಮನವಿ ಸ್ವೀಕರಿಸಬೇಕು ಎಂದು ಪಟ್ಟು ಹಿಡಿದರು. ಕೊನೆಗೆ ಉಪವಿಭಾಗಾಧಿ ಕಾರಿ ಕಚೇರಿ ತಹಶೀಲ್ದಾರರು ಸ್ಥಳಕ್ಕೆ ಅಗಮಿಸಿ ಮನವಿ ಸ್ವೀಕರಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಚಳವಳಿಕಾರರು, ಸಾರ್ವಜನಿಕ ಉಪಯುಕ್ತ ಸೇವೆಯಾಗಿರುವ ಸಾರಿಗೆ ಸಂಸ್ಥೆಯ ನೌಕರರನ್ನು ಸಾರ್ವಜನಿಕ ಕೆಲಸದಲ್ಲಿರುವರು ಎಂದು ಮಾನ್ಯತೆ ಮಾಡಲಿಲ್ಲ. ನ್ಯಾಯಯುತ ಬೇಡಿಕೆಗಳನ್ನು ಸೌಹಾರ್ದಯುತವಾಗಿ ಮಾತುಕತೆಯ ಮೂಲಕ ಇತ್ಯರ್ಥ ಮಾಡಲು ಮುಂದಾಗುವುದು ಮಾತ್ರ ಪ್ರಜಾಸತ್ತ ನಡೆಯಾಗುತ್ತದೆ. ಆದರೆ ಸರ್ಕಾರ ಬೇಡಿಕೆಗಳನ್ನು ಈಡೇರಿಸುವ ಬದಲು ಕಾನೂನು ಬದ್ಧ ಮುಷ್ಕರವನ್ನು ನಿಷೇಧ ಮಾಡಿರುವ ಕ್ರಮವನ್ನು ಸಿಐಟಿಯು ತೀವ್ರವಾಗಿ ಖಂಡಿಸುತ್ತದೆ. ಕೂಡಲೇ ಬಂ ಧಿತ ಮುಖಂಡರನ್ನು ಬಿಡುಗಡೆ ಮಾಡಬೇಕು ಮತ್ತು ಹೋರಾಟ ನಿರತ ಮುಖಂಡರೊಂದಿಗೆ ಮಾತುಕತೆ ನಡೆಸಬೇಕು ಎಂದು ಒತ್ತಾಯಿಸಿದರು.
ಕಳೆದ ಬಾರಿ ಮುಷ್ಕರದ ಸಂದರ್ಭದಲ್ಲಿ ಸರ್ಕಾರ ನೀಡಿದ್ದ ಭರವಸೆಗಳನ್ನು ಈಡೇರಿಸಲಿಲ್ಲ. ನೌಕರರು ಕಾನೂನು ಬದ್ಧವಾಗಿ ಮುಷ್ಕರದ ತಿಳಿವಳಿಕೆ ಪತ್ರ ನೀಡಿದ ದಿನದಿಂದ ಮುಷ್ಕರ ಪ್ರಾರಂಭವಾಗುವವರೆಗಿನ ಅವಧಿ ಯಲ್ಲಿ ಸಮರ್ಪಕವಾಗಿ ಮಾತುಕತೆ ನಡೆಸಬೇಕಿತ್ತು. ಮುಷ್ಕರ ಪ್ರಾರಂಭವಾಗುವ ಮೊದಲೇ ಅವರ ಸಮಸ್ಯೆಗಳನ್ನು ಇತ್ಯರ್ಥ ಮಾಡಲು ಸರ್ಕಾರ ವಿಫಲವಾಗಿದೆ ಎಂದು ದೂರಿದರು.
ಸಾರ್ವಜನಿಕ ಉಪಯುಕ್ತ ಸೇವೆಯಲ್ಲಿತೊಡಗಿರುವ ನೌಕರರು ನೀಡಿದ ಮುಷ್ಕರ ನೋಟಿಸಿಗೆ ಮಾನ್ಯತೆ ನೀಡದೆ ಕಾನೂನಲ್ಲಿನ ಅವಕಾಶ ಬಳಸಿಕೊಂಡು ನ್ಯಾಯಯುತ ಮುಷ್ಕರವನ್ನು ನಿಷೇಧ ಮಾಡಿರುವ ಕ್ರಮ ಸರಿಯಲ್ಲ. ಇದು ಸರ್ಕಾರದ ನಿರ್ಲಕ್ಷé ಧೋರಣೆಯ ಪ್ರತೀಕ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೈಗಾರಿಕಾ ವಿವಾದಗಳ ಕಾಯ್ದೆ 1947ರ ಸೆಕ್ಷನ್ 10(ಬಿ) ಅನ್ವಯ ಹೋರಾಟದಲ್ಲಿರುವರ ಸೇವಾ ನಿಯಮಗಳ ರಕ್ಷಣೆ ಹಾಗೂ ಮಧ್ಯಂತರ ಪರಿಹಾರ ನೀಡಬೇಕಾಗಿರುವುದನ್ನು ಸರ್ಕಾರ ಪರಿಗಣಿಸಿಲ್ಲ. ಶೋಷಣೆಗೆ ಒಳಗಾಗಿರುವ ನೌಕರರಿಗೆ ಯಾವುದೇ ತಾತ್ಕಾಲಿಕ ಪರಿಹಾರ ನೀಡದೆ, ಆತ್ಮವಿಶ್ವಾಸ ತುಂಬುವ ಯಾವುದೇ ಮಧ್ಯಂತರ ಪರಿಹಾರ ನೀಡದೆ ಮುಷ್ಕರ ನಿಷೇಧ ಮಾಡಿ ಆದೇಶ ಹೊರಡಿಸಿರುವುದು ರಾಜ್ಯ ಸರ್ಕಾರದ ಹೊಣೆಗೇಡಿತನ ಎಂದು ಆರೋಪಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಚ್. ಆನಂದರಾಜ್, ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಒಕ್ಕೂಟದ ಪದಾಧಿಕಾರಿಗಳು, ಮುಷ್ಕರ ನಿರತರ ಕುಟುಂಬ ಸದಸ್ಯರು ಇತರರು ಇದ್ದರು.