ದಾವಣಗೆರೆ: ಚನ್ನಗಿರಿ ತಾಲೂಕಿನ ಸೂಳೆಕೆರೆ ಸರ್ವೆ ಹಾಗೂ ಒತ್ತುವರಿ ತೆರವು ವಿಚಾರವಾಗಿ ಕರ್ನಾಟಕ ನೀರಾವರಿ ನಿಗಮ, ಕಂದಾಯ ಇಲಾಖೆ ಹಾಗೂ ತಾಲೂಕಾಡಳಿತದಿಂದ ನಡೆದಿರುವ ಅವ್ಯವಹಾರ ಹಾಗೂ ಭ್ರಷ್ಟಾಚಾರ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ ಎಂದು ಖಡ್ಗ ಸಂಘದ ಅಧ್ಯಕ್ಷ ರಘು ಬಿ.ಆರ್. ತಿಳಿಸಿದರು.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಡ್ಗ ಸಂಘ ಕಳೆದ ಮೂರು ವರ್ಷಗಳಿಂದ ಸೂಳೆಕೆರೆ ಉಳಿವಿಗಾಗಿ ಹೋರಾಟ ಮಾಡುತ್ತ ಬಂದಿದೆ. ಈ ಕುರಿತು ನೀಡಿದ ಯಾವುದೇ ದೂರಿಗೆ ಜಿಲ್ಲಾಡಳಿತ, ತಾಲೂಕಾಡಳಿತ ಸೂಕ್ತವಾಗಿ ಸ್ಪಂದಿಸಿಲ್ಲ. ಹೀಗಾಗಿ ಈಗ ಲೋಕಾಯುಕ್ತ ಕಚೇರಿ ಮೆಟ್ಟಿಲು ಹತ್ತಲಾಗಿದೆ ಎಂದರು. ಸೂಳೆಕೆರೆ ಸರ್ವೆ ಕಾರ್ಯ ಹಾಗೂ ಒತ್ತುವರಿ ತೆರವು ಕಾರ್ಯಕ್ಕೆ ಸಂಬಂಧಿಸಿ ಪ್ರಧಾನಮಂತ್ರಿ ಕಾರ್ಯಾಲಯ, ಮುಖ್ಯಮಂತ್ರಿ ಕಾರ್ಯಾಲಯ, ಜಿಲ್ಲಾಡಳಿತಗಳಿಂದ ಹಲವಾರು ಬಾರಿ ಕ್ರಮ ಕೈಗೊಳ್ಳುವಂತೆ ಕರ್ನಾಟಕ ನೀರಾವರಿ ನಿಗಮಕ್ಕೆ ಸೂಚನೆ ಬಂದಿದ್ದರೂ ಅಧಿಕಾರಿಗಳು ಪ್ರಭಾವಿಗಳ ಆಮಿಷ, ಪ್ರಭಾವಕ್ಕೊಳಗಾಗಿ ಕರ್ತವ್ಯದಿಂದ ನುಣಿಚಿಕೊಳ್ಳಲು ಪತ್ರ ವ್ಯವಹಾರ ಮಾಡಿದ್ದಾರೆಯೇ ಹೊರತು ಜವಾಬ್ದಾರಿಯುತವಾಗಿ ಕೆಲಸ ಮಾಡಿಲ್ಲ. ಇದು ನಿಗಮಕ್ಕೆ ಕೆರೆ ಬಗೆಗಿನ ನಿರಾಸಕ್ತಿಗೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.
ಕರ್ನಾಟಕ ನೀರಾವರಿ ನಿಗಮದ ದಾಖಲೆ ಪ್ರಕಾರ ಸೂಳೆಕೆರೆ ಒಟ್ಟು ವಿಸೀ¤ರ್ಣ 2650 ಹೆಕ್ಕೇರ್ (6548.293 ಎಕರೆ) ಎಂದು ತಿಳಿಸಿದ್ದಾರೆ. ಆದರೆ ಚನ್ನಗಿರಿ ಕಂದಾಯ ಇಲಾಖೆ ಮಾಹಿತಿ ಪ್ರಕಾರ ಸೂಳೆಕೆರೆಯ ವಿಸೀ¤ರ್ಣ 5447 ಎಕರೆ. ಉಳಿದ 1101 ಎಕರೆ ಕೆರೆಯ ಜಾಗವನ್ನು ಯಾವ ಇಲಾಖೆಯ ಸುಪರ್ದಿಗೂ ತೆಗೆದುಕೊಂಡಿಲ್ಲ. ಇಲ್ಲಿ ಅವ್ಯವಹಾರ, ಭ್ರಷ್ಟಾಚಾರ ನಡೆದಿರುವುದು ಸ್ಪಷ್ಟವಾಗುತ್ತದೆ. ಈ ಕುರಿತು ಸಮಗ್ರ ತನಿಖೆ ನಡೆಸಿ ಸೂಳೆಕೆರೆಯ 1101 ಎಕರೆ ಜಾಗವನ್ನು ಕೆರೆಗೇ ಸೇರಿಸಬೇಕು ಎಂದು ಲೋಕಾಯುಕ್ತಕ್ಕೆ ಕೇಳಿಕೊಳ್ಳಲಾಗಿದೆ ಎಂದರು. ಈ ಹಿಂದಿನ ಜಿಲ್ಲಾಧಿಕಾರಿಯವರು ಕೆರೆ ಸುತ್ತಲಿನ ಗಾಮಗಳ ಕಂದಾಯ ಭೂಮಿ ಸರ್ವೆ ಮಾಡಿ ಗಡಿ ಗುರುತಿಸಿದರೆ ಉಳಿದ ಜಾಗವೆಲ್ಲ ಕೆರೆಯದ್ದು ಎಂಬುದು ಗೊತ್ತಾಗುತ್ತದೆ ಎಂದು ಸೂಚಿಸಿದ್ದರು.
ಆದರೆ ಆ ಕಾರ್ಯ ಅನುಷ್ಠಾನಗೊಳಿಸಿಲ್ಲ. 11 ಲಕ್ಷ ರೂ. ವ್ಯಯಿಸಿ ಖಾಸಗಿಯವರಿಂದ ಕೆರೆ ಸರ್ವೆ ಮಾಡಿಸಲಾಗಿದೆ. ಆದರೆ ಕೆರೆಯ ಮೂಲ ವಿಸೀ¤ರ್ಣ ಎಷ್ಟಿತ್ತು, ಈಗ ಎಷ್ಟಿದೆ ಎಂಬ ಬಗ್ಗೆ ವರದಿಯಲ್ಲಿ ಸ್ಪಷ್ಟತೆ ಇಲ್ಲ. ಇಲ್ಲಿಯೂ ಕೆರೆಯ ಮೂಲ ವಿಸೀ¤ರ್ಣವನ್ನೇ ತಿರುಚುವ ಕಾರ್ಯ ನಡೆದಿದೆ. ಇದರಲ್ಲಿ ಶಾಮೀಲಾದ ಅಧಿಕಾರಿಗಳನ್ನು ಗುರುತಿಸಿ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಹೇಳಿದರು.
ರಕ್ಷಣೆ ಕೊಡಿ: ಸೂಳೆಕೆರೆ ಸರ್ವೆ ಕಾರ್ಯ ಹಾಗೂ ಒತ್ತುವರಿ ತೆರವು ಕಾರ್ಯಕ್ಕೆ ಸಂಬಂಧಿಸಿ ಹೋರಾಟ ಮಾಡುತ್ತಿರುವ ಖಡ್ಗ ಸಂಘದ ಪದಾಧಿಕಾರಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ, ಪೋನ್ ಕರೆಗಳ ಮೂಲಕ ಬೆದರಿಕೆಗಳೂ ಬಂದಿವೆ. ಈ ವಿಚಾರವಾಗಿ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸಂಘದ ಪದಾಧಿಕಾರಿಗಳಿಗೆ ಪೊಲೀಸ್ ಇಲಾಖೆ ಸೂಕ್ತ ರಕ್ಷಣೆ ನೀಡಬೇಕು ಎಂದು ರಘು ಕೋರಿದರು. ಖಡ್ಗ ಸಂಘಟನೆಯ ಚಂದ್ರಹಾಸ ಲಿಂಗದಹಳ್ಳಿ ಸುದ್ದಿಗೋಷ್ಠಿಯಲ್ಲಿದ್ದರು.