ದಾವಣಗೆರೆ: ದಾವಣಗೆರೆಯ ಗ್ರೂಪ್ ಆಫ್ ಐರನ್ ಗೇಮ್ಸ್ , ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ಸಹಯೋಗದಲ್ಲಿ ಏ.10 ಮತ್ತು 11 ರಂದು ನಗರದ ಕುವೆಂಪು ಕನ್ನಡ ಭವನದಲ್ಲಿ ರಾಜ್ಯ ಮಟ್ಟದ ಬಾಲಕರ, ಕಿರಿಯರ, ಹಿರಿಯರ, ಪುರುಷರ, ಮಹಿಳೆಯರ ಬ್ರೆಂಚ್ ಪ್ರಸ್ ಸ್ಪರ್ಧೆ ನಡೆಯಲಿದೆ ಎಂದು ಗ್ರೂಪ್ ಆಫ್ ಐರನ್ ಗೇಮ್ಸ್ ಕಾರ್ಯದರ್ಶಿ ರಜ್ವಿ ಖಾನ್ ತಿಳಿಸಿದ್ದಾರೆ.
ರಾಜ್ಯ ಮಟ್ಟದ ಬ್ರೆಂಚ್ ಪ್ರಸ್ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ತೋರಿದ ಕ್ರೀಡಾಪಟುಗಳಿಗೆ ಅರ್ಹತೆಯ ಆಧಾರದಲ್ಲಿ ಗೋವಾದಲ್ಲಿ ಏ. 27 ರಿಂದ 30ರ ವರೆಗೆ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು. ಪುರುಷರು ಮತ್ತು ಮಹಿಳಾ ತಂಡಕ್ಕೆ ಒಟ್ಟಾರೆ 12 ಕ್ರೀಡಾಪಟುಗಳ ಆಯ್ಕೆ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶನಿವಾರ ಬೆಳಗ್ಗೆ 10ಕ್ಕೆ ಸಂಸದ ಜಿ.ಎಂ. ಸಿದ್ದೇಶ್ವರ ಸ್ಪರ್ಧೆ ಉದ್ಘಾಟಿಸುವರು. ಶಾಸಕ ಎಸ್.ಎ. ರವೀಂದ್ರನಾಥ್, ಮೇಯರ್ ಎಸ್.ಟಿ. ವೀರೇಶ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಸದಸ್ಯ ಕೆ.ಎಂ. ವೀರೇಶ್, ಮಾಜಿ ಸದಸ್ಯ ದೋಣಿ ನಿಂಗಪ್ಪ, ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ, ಪಿ.ಬಿ. ಪ್ರಕಾಶ್, ಸತೀಶ್‌ಕುಮಾರ್ ಕುದ್ರೋಳಿ, ಕೆ.ಎನ್. ಶೈಲಜಾ, ಪಿ.ಜಿ. ಪಾಂಡುರಂಗ ಭಾಗವಹಿಸುವರು.
ಏ. 11 ರಂದು ಸಂಜೆ 6ಕ್ಕೆ ನಡೆಯುವ ಸಮಾರೋಪದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ನಗರಪಾಲಿಕೆ ಮಾಜಿ ಸದಸ್ಯ ದಿನೇಶ್ ಶೆಟ್ಟಿ ಪಾಲ್ಗೊಳ್ಳುವರು. ವಿಶ್ವ ದಾಖಲೆ ನಿರ್ಮಿಸಿದ ಬಿ.ಎಚ್. ಭಾರತಿ, 8 ಬಾರಿ ರಾಷ್ಟ್ರ ಮಟ್ಟದ ಚಿನ್ನದ ಪದಕ ವಿಜೇತ ಲೋಗನಾಥ್, ರಜ್ವಿ ಖಾನ್, ಪಾಲಿಕೆ ಸದಸ್ಯ ಜೆ.ಎನ್. ಶ್ರೀನಿವಾಸ್, ಕಾಮನ್‌ವೆಲ್ತ್ ಚಾಂಪಿಯನ್‌ಗಳಾದ ವಿಶ್ವನಾಥ್ ಗಾಣಿಗ, ಪ್ರದೀಪ್ ಆಚಾರ್ಯ ಅವರನ್ನು ಸನ್ಮಾನಿಸಲಾಗುವುದು. ಕೊರೊನಾ ಮಾರ್ಗಸೂಚಿ ಅನ್ವಯ ಎರಡು ವೇದಿಕೆಯಲ್ಲಿ ಸ್ಪರ್ಧೆ ನಡೆಯಲಿವೆ ಎಂದರು.
ಗ್ರೂಪ್ ಆಫ್ ಐರನ್ ಗೇಮ್ಸ್ ಅಧ್ಯಕ್ಷ ಎಚ್. ದಾದಾಪೀರ್, ಕಾರ್ಯಾಧ್ಯಕ್ಷ ಎಂ. ಮಹೇಶ್ವರಸ್ವಾಮಿ, ಕೆ. ಗಂಗಪ್ಪ, ಎಂ.ಎಸ್. ಷಣ್ಮುಗ, ಎಚ್. ಷರೀಫ್ ಸುದ್ದಿಗೋಷ್ಠಿಯಲ್ಲಿದ್ದರು.