Advertisement

ಮುಷ್ಕರದ ಬಿಸಿಗೆ ಜನ ಹೈರಾಣ

05:35 PM Apr 08, 2021 | Team Udayavani |

ದಾವಣಗೆರೆ: ಆರನೇ ವೇತನ ಆಯೋಗದ ಶಿಫಾರಸು ಜಾರಿ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ಸಂಸ್ಥೆ ನೌಕರರು ಬುಧವಾರದಿಂದ ಪ್ರಾರಂಭಿಸಿರುವ ಮುಷ್ಕರದ ಪರಿಣಾಮ ಪ್ರಯಾಣಿಕರು ತೀವ್ರ ತೊಂದರೆ ಆನುಭವಿಸಿದರು.

Advertisement

ದಾವಣಗೆರೆ ನಗರದ 2 ಡಿಪೋ, ಹರಿಹರದ 1 ಡಿಪೋದಲ್ಲಿನ 1,132 ಜನ ಚಾಲಕರು ಮತ್ತು ನಿರ್ವಾಹಕರು ಕೆಲಸದಿಂದ ದೂರವೇ ಉಳಿದ ಪರಿಣಾಮ 350 ಬಸ್‌ಗಳಲ್ಲಿ ಒಂದು ಬಸ್‌ ಸಹ ರಸ್ತೆಗೆ ಇಳಿಯಲಿಲ್ಲ. ಮುಷ್ಕರದ ನಡುವೆಯೂ ಈಶಾನ್ಯ ಸಂಸ್ಥೆಯ ಬಸ್‌ ಸಂಚಾರ ಮಾಡಿತು. ದಾವಣಗೆರೆ- ಹೈದರಬಾದ್‌ ಬಸ್‌ ಸಂಚಾರಕ್ಕೆ ಮುಂದಾಗಿದ್ದು ಕಂಡು ಬಂದಿತು. ಸಾರಿಗೆ ಸಂಸ್ಥೆ ನೌಕರರ ಮುಷ್ಕರದ ಪರಿಣಾಮ ಪ್ರಯಾಣಿಕರು ತೀವ್ರ ತೊಂದರೆ ಆನುಭವಿಸಿದರು.

ಮುಷ್ಕರದ ಬಗ್ಗೆ ಮಾಹಿತಿ ಇಲ್ಲದೇ ಇದ್ದವರು ಬಸ್‌ ನಿಲ್ದಾಣಕ್ಕೆ ಬಂದ ನಂತರ ಬಸ್‌ಗಳು ಇಲ್ಲ ಎಂಬುದು ಗೊತ್ತಾದ ನಂತರ ಬಂದ ದಾರಿಗೆ ಸುಂಕ ಇಲ್ಲ ಎಂದು ಮನೆಗೆ ವಾಪಾಸ್ಸಾದರೆ, ಇನ್ನು ಕೆಲವರು ಖಾಸಗಿ ಬಸ್‌, ಟ್ಯಾಕ್ಸಿ, ರೈಲುಗಳ ಮೊರೆ ಹೋಗಬೇಕಾಯಿತು. ಸಾರಿಗೆ ಬಸ್‌ಗಳು ರಸ್ತೆಗೆ ಇಳಿಯದ ಕಾರಣಕ್ಕೆ ಖಾಸಗಿ ಬಸ್‌, ಮ್ಯಾಕ್ಸಿಕ್ಯಾಬ್‌, ಟೆಂಪೋ ಟ್ರಾವೆಲ್‌, ಕ್ರೂಸರ್‌ ಇತರೆ ವಾಹನಗಳು ಈ ಆವಕಾಶವನ್ನು ಭರ್ಜರಿಯಾಗಿ ಬಳಸಿಕೊಂಡವು. ದಾವಣಗೆರೆ ಮಹಾನಗರ ಪಾಲಿಕೆಯಿಂದ ಹಿಡಿದು ಪಿ.ಜೆ. ವೃತ್ತದವರೆಗೆ ಖಾಸಗಿ ಬಸ್‌, ಇತರೆ ವಾಹನಗಳ ಸಾಲು ಕಂಡು ಬಂದಿತು. ಪ್ರಯಾಣಿಕರಿಗೆ ಅನಾನುಕೂಲ ಆಗಬಾರದು ಹಾಗೂ ಸಂಚಾರಕ್ಕೆ ವ್ಯತ್ಯಯ ಆಗದಂತೆ ಪರ್ಯಾಯ ವ್ಯವಸ್ಥೆಯಾಗಿ ಖಾಸಗಿ ಬಸ್‌ ಬಳಕೆ ಮಾಡಿಕೊಂಡಿದ್ದರಿಂದ ಮೊದಲ ಬಾರಿಗೆ ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳ ಸಂಚಾರ ಕಂಡು ಬಂತು. ಮಧ್ಯಾಹ್ನದ ವೇಳೆಗೆ ಖಾಸಗಿ ಬಸ್‌ಗಳಲ್ಲೂ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ನಿರ್ಮಿಸಿರುವ ತಾತ್ಕಾಲಿಕ ಬಸ್‌ ನಿಲ್ದಾಣ ಇತರೆ ದಿನಗಳಲ್ಲಿ ಜನಜಂಗುಳಿಯಿಂದ ಕೂಡಿರುತ್ತಿತ್ತು. ಮುಷ್ಕರದ ಹಿನ್ನೆಲೆಯಲ್ಲಿ ಬಸ್‌ ನಿಲ್ದಾಣ ಬಿಕೋ ಎನ್ನುತ್ತಿತ್ತು. ಅಂಗಡಿ, ಹೋಟೆಲ್‌ಗ‌ಳಲ್ಲಿ ಜನರು ಕಡಿಮೆ ಸಂಖ್ಯೆಯಲ್ಲಿ ಕಂಡು ಬಂದರು.

ಸಂಜೆ ವೇಳೆಗೆ ಬಸ್‌ ಸಂಚಾರ ಪ್ರಾರಂಭವಾಗಬಹುದು ಎಂದು ಕೆಲವರು ಹೇಳಿದ್ದರಿಂದ ಅನೇಕರು ಬಸ್‌ ನಿಲ್ದಾಣಕ್ಕೆ ಬಂದರಾದರೂ ಬಸ್‌ ಸಂಚಾರದ ಸುಳಿವೇ ಇರಲಿಲ್ಲ. ಸವದಿ ವಿರುದ್ಧ ನೌಕರರ ಆಕ್ರೋಶ: ಸಾರಿಗೆ ಸಂಸ್ಥೆ ನೌಕರರು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಬಾರಿ ಮುಷ್ಕರ ನಡೆಸಿದ ಸಂದರ್ಭದಲ್ಲಿ ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ತರುವ ಬಗ್ಗೆ ಭರವಸೆ ನೀಡಿದ್ದರು. ಆದರೆ ಕಾರ್ಯರೂಪಕ್ಕೆ ತರಲಿಲ್ಲ. ಬರುವ ವೇತನದಲ್ಲಿ ಜೀವನ ನಿರ್ವಹಣೆ ತುಂಬಾ ಕಷ್ಟವಾಗುತ್ತಿದೆ. ಮನೆ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ಇತರೆ ವೆಚ್ಚ ಭರಿಸುವುದಕ್ಕೂ ಆಗುತ್ತಿಲ್ಲ. ಆರನೇ ವೇತನ ಆಯೋಗದ ಶಿಫಾರಸು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಆರನೇ ವೇತನ ಆಯೋಗದ ಶಿಫಾರಸು ಜಾರಿ ಮಾಡಬೇಕು. ಇಲ್ಲವೇ ಸಂಘಟನೆ ಮುಖಂಡರೊಡನೆ ಚರ್ಚಿಸಿ ನಾಲ್ಕು ವರ್ಷಗಳಿಗೊಮ್ಮೆ ವೇತನ ಹೆಚ್ಚಳ ಮಾಡುವ ಷರತ್ತಿನಂತಾದರೂ ವೇತನ ಹೆಚ್ಚಳ ಮಾಡಬೇಕು. ಅಧಿಕಾರಿಗಳ ಕಿರುಕುಳ ತಪ್ಪಿಸಬೇಕು ಎಂದರು.

Advertisement

ಕೆಲವೊಮ್ಮೆ ಪ್ರಯಾಣಿಕರು ಟಿಕೆಟ್‌ ತೆಗೆದುಕೊಳ್ಳುವುದಿಲ್ಲ, ತೆಗೆದುಕೊಂಡಿದ್ದರೂ ಕಳೆದುಕೊಂಡಿರುತ್ತಾರೆ. ಟಿಕೆಟ್‌ ತಪಾಸಣೆ ಸಂದರ್ಭದಲ್ಲಿ ಟಿಕೆಟ್‌ ಇಲ್ಲದೇ ಹೋದಲ್ಲಿ ನಿರ್ವಾಹಕರಿಗೆ ದಂಡ ಹಾಕುವುದನ್ನು ಕೈ ಬಿಡಬೇಕು ಎಂದು ನೌಕರರೊಬ್ಬರು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next