ದಾವಣಗೆರೆ : ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಧರಿಸುವಂತಹ ಖಾಕಿ ಸಮವಸ್ತ್ರ ಭೂ ತಾಯಿಯ ಪ್ರತೀಕ. ಪ್ರತಿಯೊಬ್ಬರು ತಾಯಿಗಾಗಿ ಹೆಮ್ಮೆ, ಅಭಿಮಾನ, ಸೇವಾ ಮನೋಭಾವದಿಂದ ಕರ್ತವ್ಯ ನಿಭಾಯಿಸಬೇಕು ಎಂದು ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕ ಎಸ್. ರವಿ ತಿಳಿಸಿದ್ದಾರೆ.
ಶುಕ್ರವಾರ ಪೊಲೀಸ್ ಕವಾಯತ್ ಮೈದಾನದಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯಾದಿಯಾಗಿ ಸಾರ್ವಜನಿಕರೊಂದಿಗೆ ಉತ್ತಮ ವಾಗಿ ಸ್ಪಂದಿಸಬೇಕು ಎಂದು ತಿಳಿಸಿದರು.
ಪೊಲೀಸ್ ಸಿಬ್ಬಂದಿ ಚಳಿ, ಗಾಳಿ, ಮಳೆ, ಬಿಸಿಲ ನಡುವೆ ಅತೀ ಒತ್ತಡದ ನಡುವೆ ಕೆಲಸ ಮಾಡುವುದನ್ನು ನೋಡಿದಾಗ ಪೊಲೀಸರಾಗಿ ಕೆಲಸ ಮಾಡುವುದೇ ಬೇಡ ಎಂದೆನೆಸುತ್ತದೆ. ನಾವು ಧರಿಸುವಂತಹ ಖಾಕಿ ಸಮವಸ್ತ್ರ ಭೂ ತಾಯಿಯ ಪ್ರತೀಕ ಎಂಬ ಹೆಮ್ಮೆಯಿಂದ ಕೆಲಸ ಮಾಡಬೇಕು ಎಂದರು. ಪೊಲೀಸ್ ಇಲಾಖೆ ತುಂಬಾ ಕಠಿಣ ಮತ್ತು ಅಷ್ಟೇ ಅಭಿಮಾನದ ಇಲಾಖೆ. ಕೊಲೆ, ಸುಲಿಗೆ ಅನೇಕ ಕೆಟ್ಟ ಕೆಲಸ ಮಾಡುವಂತಹವರ ನಡುವೆ ತಮ್ಮ ಪಾಲಿನ ಕರ್ತವ್ಯವನ್ನ ಸಮರ್ಥವಾಗಿ ನಿಭಾಯಿಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು. ಕೆಲಸ ಮಾಡುವಾಗ ಸ್ವಲ್ಪ ಯಾಮಾರಿದರೂ ಪಾತಾಳಕ್ಕೆ ಕುಸಿಯುವ ಅಪಾಯ ಇರುತ್ತದೆ. ಹಾಗಾಗಿ ಬಹಳ ಶಿಸ್ತು, ಬದ್ಧತೆಯಿಂದ ಕರ್ತವ್ಯ ಮಾಡಬೇಕು ಎಂದು ತಿಳಿಸಿದರು.
ಪೊಲೀಸ್ ಇಲಾಖೆಯಲ್ಲಿ ಪ್ರತಿಯೊಬ್ಬರು ಸದಾ ಒತ್ತಡದಲ್ಲೇ ಕೆಲಸ ಮಾಡಬೇಕಾಗುತ್ತದೆ. ಒತ್ತಡದ ಪ್ರಭಾವದಿಂದ ದೈಹಿಕ, ಮಾನಸಿಕ ಒತ್ತಡವೂ ಹೆಚ್ಚಾಗಿರುತ್ತದೆ. ಹಾಗಾಗಿ ಪ್ರತಿಯೊಬ್ಬರು ದಿನದ ಒಂದು ಗಂಟೆ ಸಮಯವನ್ನು ಆರೋಗ್ಯಕ್ಕಾಗಿ ಮೀಸಲಿಡಬೇಕು. ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿರಬೇಕು ಎಂದು ಸಲಹೆ ನೀಡಿದರು. ಎಲ್ಲ ಇಲಾಖೆಯಂತೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವಂತಹವರು ನಿವೃತ್ತಿ ಆಗಲೇಬೇಕು. ನಿವೃತ್ತಿ ನಂತರ ಸುಮ್ಮನೆ ಖಾಲಿ ಕುಳಿತುಕೊಳ್ಳಬಾರದು. ಯಾವುದಾದರೂ ಕೆಲಸ ಮಾಡುತ್ತಲೇ ಇರಬೇಕು. ಖಾಲಿ ಕೂರುವುದರಿಂದ ದೈಹಿಕ, ಮಾನಸಿಕ ಸಮಸ್ಯೆ ಅನುಭವಿಸಬೇಕಾಗುತ್ತದೆ. ನಿವೃತ್ತಿ ನಂತರವೂ ಶಿಸ್ತು, ಉತ್ತಮ ಜೀವನ ಸಾಗಿಸಬೇಕು ಎಂದು ತಿಳಿಸಿದರು.
ಇಲಾಖೆಯಲ್ಲಿ ಕೆಲಸ ಮಾಡುವಂತಹವರ ಯೋಗ ಕ್ಷೇಮ ಬಹಳಷ್ಟು ಮುಖ್ಯ. ಸಿಬ್ಬಂದಿ ಯೋಗಕ್ಷೇಮ ವಿಚಾರಿಸುವಂತಹವರೇ ನಿಜವಾದ ಕಮಾಂಡರ್. ಸಿಬ್ಬಂದಿ ಸಂಖ್ಯೆ, ಹೆಸರು ಹಿಡಿದು ಪ್ರೀತಿಯಿಂದ ಮಾತನಾಡಿಸುವುದು ಮುಖ್ಯ. ಎಲ್ಲ ಹಿರಿಯ ಅಧಿಕಾರಿಗಳು ಅಂತಹ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪೊಲೀಸ್ ಇಲಾಖೆಯ ಪ್ರತಿ ಸಿಬ್ಬಂದಿಯ ಕಲ್ಯಾಣ ಮತ್ತು ಕ್ಷೇಮಾಭಿವೃದ್ಧಿ ಎಲ್ಲರ ಹಕ್ಕು. ನಮ್ಮ ಹಕ್ಕುಗಳ ಪ್ರತಿಪಾದಿಸುವ ಜತೆಗೆ ಕರ್ತವ್ಯ ಪಾಲನೆಯೂ ಮುಖ್ಯ. ಇತ್ತೀಚೆಗೆ ಇಲಾಖೆ ಸೇರುತ್ತಿರುವ ಕೆಲವರಲ್ಲಿ ಸೇವಾ ಮನೋಭಾವ ಕಡಿಮೆ ಆಗುತ್ತಿರುವುದು ಕಂಡು ಬರುತ್ತಿರುವುದು ಸರಿ ಅಲ್ಲ. ಪ್ರತಿಯೊಬ್ಬರು ಸೇವಾ ಮನೋಭಾವದಿಂದ ಕೆಲಸ ಮಾಡಬೇಕು. ಜನರು ನಮ್ಮ ಬಳಿ ಕಷ್ಟ, ಸಮಸ್ಯೆಯೊಂದಿಗೆ ಬಂದಾಗ ಸ್ಪಂದಿಸಬೇಕು ಎಂದು ತಿಳಿಸಿದರು.
ಕೊರೊನಾ ಮಹಾಮಾರಿ ನಮ್ಮ ಬೆನ್ನ ಹಿಂದೆ ಬಿದ್ದಿದೆ. ಮಾ.12 ರಂದು ದೇಶದಲ್ಲಿ 8 ಸಾವಿರ ಸಕ್ರಿಯ ಪ್ರಕರಣ ಇದ್ದವು. ಈಗ 70 ಸಾವಿರ ದಾಟಿದೆ. ಒಂದು ಮಾಹಿತಿ ಪ್ರಕಾರ ಜೂನ್ ಅಂತ್ಯಕ್ಕೆ ಕೊರೊನಾ ಮುಗಿಯಲಿದೆ ಎಂಬ ಮಾಹಿತಿ ಇದೆ. ಆದಷ್ಟು ಬೇಗ ಕೊರೊನಾದಿಂದ ಜಗತ್ತು ಮುಕ್ತಿ ಪಡೆಯಲಿದೆ ಎಂದರು. ನಿವೃತ್ತ ಪೊಲೀಸ್ ಉಪ ನಿರೀಕ್ಷಕ ಜಿ. ನಾಗರಾಜ್ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಸಮಧಾನ, ಸಮರ್ಪಣಾ ಮನೋಭಾವ, ಸಮಯ ಪ್ರಜ್ಞೆಯಿಂದ ಕೆಲಸ ಮಾಡಿದಾಗ ಯಶಸ್ವಿಯಾಗಿ ವೃತ್ತಿ ಜೀವನ ಸಾಗಲಿದೆ. ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಸಮಸ್ಯೆ ಎಂದು ಭಾವಿಸದೆ ಅವಕಾಶ ಎಂದು ಕೆಲಸ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ ಪ್ರಾಸ್ತಾವಿಕ ಮಾತುಗಳಾಡಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ರಾಜೀವ್ ವಂದಿಸಿದರು.