ಹರಿಹರ: ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾಲೂಕಿನಲ್ಲಿ ಸಕಾಲಕ್ಕೆ ಸಾಮಾಜಿಕ ಭದ್ರತಾ ಯೋಜನೆಗಳ ಸೌಕರ್ಯ ಸರಿಯಾಗಿ ಸಿಗುತ್ತಿಲ್ಲ. ಅಸಹಾಯಕರು ಅನಿವಾರ್ಯವಾಗಿ ಭಿಕ್ಷೆ ಬೇಡಲು ಬೀದಿಗೆ ಬರುತ್ತಿದ್ದಾರೆ ಎಂದು ಎಂದು ತಾಲೂಕು ಪಂಚಾಯಿತಿ ಸದಸ್ಯ ಕೊಟ್ರೇಶ್ ಗೌಡ ಆಕ್ರೋಶ ವ್ಯಕ್ತಪಡಿಸಿದರು.
ತಾಪಂ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮಲೆಕ್ಕಾ ಧಿಕಾರಿಗಳು ಸೇರಿದಂತೆ
ಕಂದಾಯ ಇಲಾಖೆ ಅ ಕಾರಿಗಳು ಸರ್ಕಾರ ಅಸಹಾಯಕರಿಗೆ ನೀಡುವ ಮಾಸಿಕ ಪಿಂಚಣಿ ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಇದರಿಂದ ವಿಕಲಚೇತನ, ವೃದ್ಧಾಪ್ಯ, ವಿಧವಾ ವೇತನ ಇತ್ಯಾದಿ ಪಿಂಚಣಿ ಪಡೆಯುವವರು ಭಿಕ್ಷೆ ಬೇಡುವ ಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಭಿಕ್ಷುಕರ ಸಂಖ್ಯೆ ಮಿತಿ ಮೀರಿದೆ. ಈ ಕುರಿತು ಕೇಳಿದರೆ ಕಳೆದ ಆರು ತಿಂಗಳುಗಳಾದರೂ ಪಿಂಚಣಿ ಸಿಗದ ಕಾರಣ ಹೊಟ್ಟೆಪಾಡಿಗೆ, ಚಿಕಿತ್ಸೆ ಇತ್ಯಾದಿ ಅನಿವಾರ್ಯ ಕಾರಣಕ್ಕೆ ಭಿಕ್ಷೆ ಬೇಡುತ್ತಿದ್ದೇವೆ ಎಂದು ಹೇಳುತ್ತಾರೆ. ತಾಲೂಕಿನಲ್ಲಿ ಭಿಕ್ಷುಕರ ಪುನರ್ವಸತಿ ಕೇಂದ್ರವೂ ನಿರ್ವಹಣಾ ಸಿಬ್ಬಂದಿಗಳಿಲ್ಲದೆ ಕಾರ್ಯ ನಿರ್ವಹಿಸುತ್ತಿಲ್ಲ, ಅಧಿಕಾರಿಗಳಿಗೆ ಇದೆಲ್ಲಾ ಕಾಣುವುದಿಲ್ಲವಾ ಎಂದು ಖಾರವಾಗಿ ಪ್ರಶ್ನಿಸಿದರು.
ಗುಳದಳ್ಳಿ ಮಾಲತೇಶ್ ಮಾತನಾಡಿ, ಕೋವಿಡ್ ಲಾಕ್‌ಡೌನ್ ಕಾರಣ ಶಾಲೆಗಳಲ್ಲಿ ಪಾಠ ಪ್ರವಚನದಲ್ಲಿ ಹಿಂದುಳಿಯುವಂತಾಗಿದೆ. ಆದ್ದರಿಂದ ಭಾನುವಾರವೂ ಶಾಲೆ ನಡೆಸಬೇಕು. ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಲ್ಲಾ ಗ್ರಾಮಗಳಲ್ಲೂ ಕೊಳವೆ ಬಾವಿ ದುರಸ್ತಿಪಡಿಸುವುದು ಸೇರಿದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದರು.
ಇದೇ ಸಂದರ್ಭದಲ್ಲಿ ದೇವರಬೆಳಕರೆ ಕ್ಷೇತ್ರದ ಸದಸ್ಯ ಜೆ.ಸಿ. ಮಾಲತೇಶ್ ಅವರನ್ನು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಸಭೆಗೆ ಬಹುತೇಕ ಸದಸ್ಯರು ಗೈರಾಗಿದ್ದರು. ಹಾಜರಿದ್ದ ಬೆರಳೆಣಿಕೆ ಸದಸ್ಯರಲ್ಲೂ ಕೆಲವರು ಸಭೆಯ ಮಧ್ಯದಲ್ಲೇ ಎದ್ದು ಹೋದರು.
ತಾಪಂ ಅಧ್ಯಕ್ಷೆ ಶ್ರೀದೇವಿ ಮಂಜಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಇಒ ಗಂಗಾಧರನ್, ಉಪಾಧ್ಯಕ್ಷೆ ಶಾಂತಮ್ಮ ಜಿ., ಸದಸ್ಯರಾದ ಬಸವನಗೌಡ ಬಸೆಟರ್, ಲಕ್ಷ್ಮೀ ಮಹಾಂತೇಶ್, ಭಾಗ್ಯಲಕ್ಷ್ಮೀ, ವಿಶಾಲಾಕ್ಷಮ್ಮ ಕೊಟ್ರೇಶ್, ರತ್ನಮ್ಮ, ಬಿಇಒ ಯು. ಬಸವರಾಜಪ್ಪ, ನೋಂದಣಾಧಿಕಾರಿ ಕರಿಬಸಪ್ಪ ಗೌಡ, ತಾಲೂಕು ಆರೋಗ್ಯಾಧಿಕಾರಿ ಡಾ| ಚಂದ್ರಮೋಹನ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ರೇಖಾ, ಸಹಾಯಕ ಕೃಷಿ ನಿರ್ದೇಶಕ ಗೋವರ್ಧನ್, ಅಕ್ಷರ ದಾಸೋಹದ ನೋಟಗಾರ್ ಮತ್ತಿತರರು ಹಾಜರಿದ್ದರು.
ಓದಿ :
ವಿಟ್ಲದಲ್ಲಿ ಬೈಕ್- ಲಾರಿ ನಡುವೆ ಭೀಕರ ಅಪಘಾತ: ಓರ್ವ ಸಾವು, ಮತ್ತೋರ್ವ ಗಂಭೀರ