Advertisement

ಅಕ್ರಮ ಮದ್ಯ ಮಾರಾಟ ತಡೆಗೆ ಕ್ರಮ

04:20 PM Feb 21, 2021 | Team Udayavani |

ಹೊನ್ನಾಳಿ: ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಎಸ್‌ ಸಿ-ಎಸ್‌ಟಿ ಹಿತರಕ್ಷಣಾ ಜಾಗೃತ ಸಮಿತಿ
ಸಭೆ ನಡೆಯಿತು. ತಾಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟ, ಪಟ್ಟಣದಲ್ಲಿ ಅಂಬೇಡ್ಕರ್‌ ಹಾಗೂ ಮದಕರಿ ವೃತ್ತ ನಾಮಕರಣ,
ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಬ್ಯಾಂಕುಗಳಲ್ಲಿ ಸಿಗುವ ಸಬ್ಸಿಡಿ ಕಡಿತ ಕೈಬಿಡುವುದು, ತಾಲೂಕಿನ ಸಾಸ್ವೇಹಳ್ಳಿ ಹಾಗೂ ಟಿ.ಬಿ. ವೃತ್ತದಲ್ಲಿ ಸಾರ್ವಜನಿಕ   ಶೌಚಾಲಯ ನಿರ್ಮಾಣ ಹಾಗೂ ಅವಳಿ  ತಾಲೂಕಿನಾದ್ಯಂತ ಎಲ್ಲಾ ಗ್ರಾಮಗಳಲ್ಲೂ
ಎಸ್‌ಸಿ-ಎಸ್‌ಟಿ ಸಮುದಾಯದವರಿಗೆ ಸ್ಮಶಾನ ಜಾಗ ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸಬೇಕೆಂದು ದಲಿತ ಮುಖಂಡರುಗಳು ಒತ್ತಾಯಿಸಿದರು.

Advertisement

ಸಭೆಯ ಅಧ್ಯಕ್ಷತೆ ವಹಿಸಿದ್ ತಹಶೀಲ್ದಾರ್‌ ಬಸವನಗೌಡ ಕೋಟುರು ಮಾತನಾಡಿ, ತಾಲೂಕಿನ ಯಾವ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ
ಮಾರಾಟ ಮಾಡುತ್ತಾರೋ ಅಂತವರ ವಿರುದ್ಧ ಕೂಡಲೇ ಪ್ರಕರಣ ದಾಖಲು ಮಾಡಿಕೊಳ್ಳಿ ಎಂದು ಅಬಕಾರಿ ಹಾಗೂ  ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದರು.

ಬ್ಯಾಂಕ್‌ಗಳಲ್ಲಿ ಯಾರಿಗೆ ಸಬ್ಸಿಡಿ ಕಡಿತಗೊಳಿಸಿದ್ದಾರೆ ಹಾಗೂ ಯಾವ ಕಾರಣಕ್ಕೆ ಎಂಬುದರ ಬಗ್ಗೆ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರನ್ನು ಸಂಪರ್ಕಿಸಿ ಚರ್ಚಿಸುತ್ತೇನೆ. ನಂತರ ನಿಮಗೆ ವಿಷಯ ತಿಳಿಸುತ್ತೇನೆ. ಸ್ಮಶಾನ ಇಲ್ಲದ ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗ ಮೀಸಲಿರಿಸುವುದರ
ಬಗ್ಗೆ ಪರಿಶೀಲನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಸಾಸ್ವೇಹಳ್ಳಿ ಹಾಗೂ ಟಿ.ಬಿ. ವೃತ್ತದಲ್ಲಿ ಸಾರ್ವಜನಿಕರಿಗೆ ತುರ್ತಾಗಿ ಬೇಕಾಗಿರುವ ಶೌಚಾಲಯ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ತಾಪಂ ಇಒ ಬಳಿ ಚರ್ಚಿಸುವುದಾಗಿ ತಹಶೀಲ್ದಾರರು ಭರವಸೆ ನೀಡಿದರು.

ಇತ್ತೀಚಿಗೆ ಶಾಲೆಗಳು ಹಂತ ಹಂತವಾಗಿ ಪ್ರಾರಂಭವಾಗುತ್ತಿರುವುದರಿಂದ ಮಕ್ಕಳು ಶಾಲೆಗೆ ಹೋಗಲು ತೊಂದರೆಯಾಗುತ್ತಿದೆ ಎಂಬ ದೂರಿಗೆ
ಸ್ಪಂದಿಸಿದ ತಹಸೀಲ್ದಾರರು, ಆದ್ಯತೆಮೇರೆಗೆ ಗ್ರಾಮಾಂತರ ಪ್ರದೇಶಗಳಿಗೆ  ಬಸ್‌ಗಳನ್ನು ಬಿಡುವ ಬಗ್ಗೆ ಕೆಎಸ್‌ಆರ್‌ ಟಿಸಿ ವ್ಯವಸ್ಥಾಪಕರೊಂದಿಗೆ ಚರ್ಚಿಸುತ್ತೇನೆ ಎಂದರು.

ತಾಲೂಕಿನ ಬೆನಕನಹಳ್ಳಿ ಗ್ರಾಮದ ಮಹದೇವಮ್ಮ ಎಂಬುವರು ಸಭೆಗೆ ಆಗಮಿಸಿ, ಜ. 9 ರಂದು ನಾವು ಮನೆಯಲ್ಲಿ ಇಲ್ಲದಿದ್ದಾಗ ದುಷ್ಕರ್ಮಿಗಳು  ನಮ್ಮ ಗುಡಿಸಲನ್ನು ಸುಟ್ಟು ಹಾಕಿದ್ದಾರೆ. ಈ ಬಗ್ಗೆ ಹೊನ್ನಾಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಈಗ ಮನೆ
ಇಲ್ಲದೆ ಗ್ರಾಮದ ಅಂಬೇಡ್ಕರ್‌ ಭವನದಲ್ಲಿ ವಾಸ ಮಾಡುತ್ತಿದ್ದೇನೆ. ದಯ ಮಾಡಿ ಒಂದು ಮನೆ ಕೊಡಿ ಎಂದು ಅಳಲು ತೋಡಿಕೊಂಡರು. ಮಹಿಳೆಯ ಮನವಿಗೆ ಧ್ವನಿಗೂಡಿಸಿದ ದಲಿತ ಮುಖಂಡರುಗಳು, ಕೂಡಲೇ ಮನೆ ಮಂಜೂರು ಮಾಡುವಂತೆ
ಆಗ್ರಹಿಸಿದರು. ತಹಶೀಲ್ದಾರ್‌ ಬಸವನಗೌಡ ಹಾಗೂ ತಾಪಂ ಇಒ ಗಂಗಾಧರಮೂರ್ತಿ, ಶೀಘ್ರ ಮನೆ ನೀಡಲು ವ್ಯವಸ್ಥೆ ಮಾಡುವುದಾಗಿ
ಹೇಳಿದರು.

Advertisement

ತಾಲೂಕು ಬಂಜಾರ ಸಮುದಾಯದ ಮುಖಂಡ ಜುಂಜ್ಯಾ ನಾಯ್ಕ ಮಾತನಾಡಿ, ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸಂತ ಶ್ರೇಷ್ಠ ಸೇವಾಲಾಲರ
ಭಾವಚಿತ್ರ ಹಾಕಬೇಕು ಎಂದು ಮನವಿ ಮಾಡಿದರು.

ಓದಿ : 6 ಉದ್ಯಾನಗಳಿಗೆ ಸ್ವಾತಂತ್ರ್ಯ ಯೋಧರ ಹೆಸರಿಡಲು ನಿರ್ಧಾರ

 

Advertisement

Udayavani is now on Telegram. Click here to join our channel and stay updated with the latest news.

Next