Advertisement

ಭಾಯಾಗಡದಲ್ಲಿ ಸಂತ ಸೇವಾಲಾಲ ಜಯಂತ್ಯುತ್ಸವ ಸಂಭ್ರಮ

03:17 PM Feb 15, 2021 | Team Udayavani |

ದಾವಣಗೆರೆ: ಸಂತ ಸೇವಾಲಾಲರ 282ನೇ ಜಯಂತ್ಯುತ್ಸವ ಹಾಗೂ ಜಾತ್ರಾ ಮಹೋತ್ಸವ ಭಾನುವಾರ ಸೇವಾಲಾಲರ ಜನ್ಮ ಸ್ಥಾನ
ಸೂರಗೊಂಡನಕೊಪ್ಪದ ಭಾಯಾಗಡದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ-ಭಕ್ತಿಯಿಂದ ನಡೆಯಿತು.

Advertisement

ಬೆಳಗ್ಗೆ ದೂದಿಯಾ ತಳಾವ್‌ ತೀರ್ಥದೊಂದಿಗೆ ಶ್ರೀ ಮರಿಯಮ್ಮ ಮತ್ತು ಸಂತ ಸೇವಾಲಾಲ ಮಹಾರಾಜರ ಮಹಾಭಿಷೇಕ, ವಿಶೇಷ ಅಲಂಕಾರ ಪೂಜೆ ನಡೆಯಿತು. ರಾಜ್ಯ ಹಾಗೂ ಹೊರರಾಜ್ಯಗಳಿಂದ ಬಿಳಿಬಟ್ಟೆ, ರುಮಾಲು ಹಾಗೂ ಕೇಸರಿ ಶಲ್ಯ ಧರಿಸಿದ ಸಾವಿರಾರು ಮಾಲಾಧಾರಿಗಳು ಆಗಮಿಸಿ, ವಿವಿಧ ಧಾರ್ಮಿಕ ಪ್ರಕ್ರಿಯೆಲ್ಲಿ ಪಾಲ್ಗೊಂಡರು.

ಎರಡನೇ ಶಬರಿಮಲೆ ಎಂದೇ ಹೆಸರಾದ ಕ್ಷೇತ್ರಕ್ಕೆ ಭಕ್ತರು ತಲೆ ಮೇಲೆ ಹರಕೆ ಸಾಮಗ್ರಿ ಹೊತ್ತು ಬಂದಿದ್ದರು. ಮಹಿಳೆಯರು ತಮ್ಮ ಜನಾಂಗದ
ವಿಶೇಷ ಉಡುಗೆ ತೊಟ್ಟಿದ್ದರು. ಹಾದಿಯ ಉದ್ದಕ್ಕೂ ಭಜನೆ ಮಾಡುತ್ತಾ ಸಾಗಿದ್ದರು. ಹಲವರು ನೃತ್ಯ ಮಾಡುತ್ತ, ಬರಿಗಾಲಿನಲ್ಲಿಯೇ ನೂರಾರು ಕಿ.ಮೀ ನಡೆದು ಸೇವಾಲಾಲರ ಜನ್ಮಭೂಮಿಗೆ ಬಂದಿದ್ದು ವಿಶೇಷ. ಸಾವಿರಾರು ಜನರು ಬೈಕ್‌, ಟ್ರಾಕ್ಟರ್‌, ಲಾರಿಗಳಲ್ಲಿ ಕುಟುಂಬ ಸಹಿತ
ಜಾತ್ರೆಗೆ ಆಗಮಿಸಿದ್ದರು. ಮಹಿಳೆಯರು ತಮ್ಮ ಸಮುದಾಯದ ವಿಶೇಷ ಉಡುಗೆ ತೊಟ್ಟು ಜಾತ್ರಾ ಸಂಭ್ರಮದಲ್ಲಿ ಭಾಗಿಯಾದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕೊರೊನಾ ಕಾರಣದಿಂದ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು. ಜಾತ್ರೆ ನಿಮಿತ್ತ ಬೆಳಗ್ಗೆ ವಿಶೇಷವಾಗಿ ಸಮುದಾಯದ ಕುರಿತು ವಿಚಾರಗೋಷ್ಠಿ ನಡೆದು ನಾಡಿನ ಖ್ಯಾತ ಚಿಂತಕರು, ಸಾಹಿತಿಗಳು, ಸಮಾಜ ಸುಧಾರಕರು, ಕಾನೂನು ತಜ್ಞರು, ಹೋರಾಟಗಾರರು ಭಾಗವಹಿಸಿ ವಿಚಾರ ಮಂಡಿಸಿದರು. ಜಯಂತ್ಯುತ್ಸವದ ವೇದಿಕೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್‌.
ಯಡಿಯೂರಪ್ಪ ಚಾಲನೆ ನೀಡಿ, ಪ್ರತಿವರ್ಷದ ಜಯಂತ್ಯುತ್ಸವ ಕಾರ್ಯಕ್ರಮಕ್ಕಾಗಿಯೇ ನಿರ್ಮಿಸಿದ ಶಾಶ್ವತ ಸಭಾಮಂಟಪವನ್ನು
ಲೋಕಾರ್ಪಣೆ ಮಾಡಿದರು. ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಸಂತ ಸೇವಾಲಾಲರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಾಸಕ ರೇಣುಕಾಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಸಚಿವರಾದ ಪ್ರಭು ಚೌವ್ಹಾಣ, ಆರ್‌.ಶಂಕರ್‌, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್‌ ಹಾಗೂ ಅನೇಕ ಗಣ್ಯರು ಭಾಗವಹಿಸಿದ್ದರು.

Advertisement

ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಸಂತ ಸೇವಾಲಾಲ ಜನ್ಮ ಸ್ಥಾನ ಮಹಾಮಠ ಸಮಿತಿ ಮತ್ತು ಜಿಲ್ಲಾಡಳಿತ ಸಹಯೋಗದೊಂದಿಗೆ ಜಾತ್ರಾ ಮಹೋತ್ಸವಕ್ಕೆ ಬಂದ ಭಕ್ತರಿಗೆ ದಾಸೋಹ, ಕುಡಿಯುವ ನೀರಿನ ವ್ಯವಸ್ಥೆ, ವಸತಿ ವ್ಯವಸ್ಥೆ ಮಾಡಲಾಗಿತ್ತು. ಸಮಾಜ ಕಲ್ಯಾಣ ಇಲಾಖೆ,
ಜಿಲ್ಲಾಡಳಿತ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಸಂತ ಸೇವಾಲಾಲ್‌ ಕ್ಷೇತ್ರ ಅಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾನ ಹಾಗೂ ಸೂರಗೊಂಡನಕೊಪ್ಪದ ಸಂತ ಸೇವಾಲಾಲ್‌ ಜನ್ಮಸ್ಥಾನ ಮಹಾಮಠ ಸಮಿತಿ ಸಂಯುಕ್ತಾಶ್ರಾಯದಲ್ಲಿ ಜಾತ್ರಾ ಕಾರ್ಯಕ್ರಮ
ನಡೆಯಿತು.

ಓದಿ : ಬಿಪಿಎಲ್ ಮಾನದಂಡಗಳಲ್ಲಿ ಬದಲಾವಣೆ ಇಲ್ಲ: ಉಮೇಶ್ ಕತ್ತಿ ಸ್ಪಷ್ಟನೆ

Advertisement

Udayavani is now on Telegram. Click here to join our channel and stay updated with the latest news.

Next