Advertisement

ಸಂಶೋಧನೆ ಸದಾ ಹರಿಯುವ ನೀರಿದ್ದಂತೆ

03:24 PM Feb 08, 2021 | Team Udayavani |

ದಾವಣಗೆರೆ: ಸಂಶೋಧನೆ ಎಂದಿಗೂ ನಿಂತ ನೀರಲ್ಲ. ಅದು ಸದಾ ಹರಿಯುವ ನೀರು ಎಂದು ಹೊನ್ನಾಳಿಯ ಸಾಹಿತಿ ಡಾ| ಕೊಟ್ರೇಶ್‌ ಉತ್ತಂಗಿ
ಹೇಳಿದರು.

Advertisement

ಭಾನುವಾರ ನಗರದ ರೋಟರಿ ಬಾಲಭವನದಲ್ಲಿ ಜಿಲ್ಲಾ, ತಾಲೂಕು ಚುಟುಕು ಸಾಹಿತ್ಯ ಪರಿಷತ್ತು, ಕನ್ನಡ ಜಾಗೃತಿ ಕೇಂದ್ರ, ಸ್ಫೂರ್ತಿ ಪ್ರಕಾಶನ, ಭಾವಸಿರಿ ಪ್ರಕಾಶನ ಸಂಯುಕ್ತಾಶ್ರಯಲ್ಲಿ ಏರ್ಪಡಿಸಿದ್ದ ಎಸ್‌. ಮಲ್ಲಿಕಾರ್ಜುನಪ್ಪನವರ “ಅಧಿಷ್ಠಾನ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಶೋಧನೆಯ ಮೂಲಕ ಜನರಿಗೆ ಸದಾ ಹೊಸದಾದ ವಿಷಯ ಬೆಳಕಿಗೆ ತರುವಂತಾಗಬೇಕು ಎಂದು ಆಶಿಸಿದರು.

ಸಂಸ್ಕೃತದ ದಟ್ಟ ಪ್ರಭಾವದ ನಡುವೆ ಕನ್ನಡದಲ್ಲಿ “ಅನುಭಾಮಮೃತ’ ಕೃತಿ ರಚಿಸಿರುವ ಮಹಲಿಂಗ ರಂಗ ಅವರನ್ನು ಎಲ್ಲರೂ ಅವಧೂತ ಎಂದೇ ತಿಳಿದಿದ್ದಾರೆ. ಎಸ್‌. ಮಲ್ಲಿಕಾರ್ಜುನಪ್ಪನವರ “ಅಧಿಷ್ಠಾನ’ ಕೃತಿಯಲ್ಲಿ ಮಹಲಿಂಗರಂಗರು ಅವಧೂತರಾಗಿರಲಿಲ್ಲ. ಅವರ ಶಿಷ್ಯ ವರ್ಗ ಅವಧೂತರಾಗಿದ್ದರು. ಮಹಲಿಂಗರಂಗರು ಅವಧೂತರ ಗುರುಗಳಾಗಿದ್ದವರು ಎಂದು ತಿಳಿಸಲಾಗಿದೆ. ಹೀಗೆ ಸಂಶೋಧನೆ ಹೊಸತಾದ ವಿಷಯವನ್ನ ಬೆಳಕಿಗೆ ತರಬೇಕು ಎಂದು ಅಭಿಪ್ರಾಯಪಟ್ಟರು.

ಅವಧೂತರು ಎಂದರೆ ತಾವು ಉಂಡಂತಹ ಕೈಯನ್ನು ತೊಳೆದುಕೊಳ್ಳದವರು ಎಂದು ವಿಶ್ಲೇಷಣೆ ಮಾಡಲಾಗುತ್ತದೆ. ಅವಧೂತರು ತಮ್ಮ ವೈಯಕ್ತಿಕ ಸ್ವತ್ಛತೆಗಿಂತಲೂ ಸಾಮಾಜಿಕ ಸ್ವತ್ಛತೆಗೆ ಹೆಚ್ಚಿನ ಮಹತ್ವ ಕೊಡುತ್ತಿದ್ದವರು. ಸುಖಕರವಾದ ಜೀವನಕ್ಕೆ ಏನೂ ಇಲ್ಲದಿದ್ದರೂ ಉತ್ತಮ ಜೀವನ ಸಾಗಿಸಬಹುದು ಎಂಬುದನ್ನ ಜಗತ್ತಿಗೆ ತೋರಿಸಿಕೊಟ್ಟವರು. ಆದರೆ ಈಗ ಸಾಮಾಜಿಕ ಸ್ವಾಸ್ಥಕ್ಕಿಂತಲೂ ವೈಯಕ್ತಿಕತೆಗೆ ಹೆಚ್ಚು ಗಮನ
ನೀಡುವವರು, ಇನ್ನೊಬ್ಬರಿಗೆ ಹೆಚ್ಚಿನ ನೋವು ಕೊಡುವರೇ ಹೆಚ್ಚಾಗಿ ಕಂಡು ಬರುತ್ತಿದ್ದಾರೆ ಎಂದು ವಿಷಾದಿಸಿದರು.

ಮಹಲಿಂಗರಂಗರು ಕನ್ನಡವನ್ನು ಸುಲಿದ ಬಾಳೆಹಣ್ಣಿಗೆ ಹೋಲಿಸಿದ್ದಾರೆ. ಅಂದರೆ ಕನ್ನಡ ಆಷ್ಟೊಂದು ಸುಲಭವಾದುದು ಎಂಬುದನ್ನು ಪ್ರತಿಪಾದಿಸಿದ್ದಾರೆ. ಆದರೆ ಈಗಿನವರಲ್ಲಿ ಕನ್ನಡದ ಬಗ್ಗೆ ಅನಾದರ ಕಂಡು ಬರುತ್ತಿದೆ. ಕನ್ನಡದ ಮಹತ್ವವನ್ನು ತಿಳಿದುಕೊಳ್ಳುವಷ್ಟು ಸಮಯವೇ ಇಲ್ಲದವರಂತೆ ವರ್ತಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ಹರಪನಹಳ್ಳಿಯ ಸಾಹಿತಿ ಎಚ್‌. ಮಲ್ಲಿಕಾರ್ಜುನ್‌ ಮಾತನಾಡಿ, ಈಗ ವಿದ್ಯಾವಂತರು ಜಾಸ್ತಿ, ಬುದ್ಧಿವಂತರು ಕಡಿಮೆ ಎನ್ನುವ ವಾತಾವರಣ ಇದೆ. ಕೆಲವರು ಬರೆಯುವಂತಹ ಕಥೆ, ಕವನ, ಸಂಶೋಧನಾ ಗ್ರಂಥಗಳು ಹೊರ ಬರುವುದು ಬಹಳ ಕಷ್ಟ. ಸಮಸ್ಯೆಗಳ ನಡುವೆ ಬಿಡುಗಡೆ ಹೊಂದಿದರೂ ಕೊಂಡು ಓದುವರ ಸಂಖ್ಯೆ ಕಡಿಮೆ. ಸಾಹಿತ್ಯ ಕೃಷಿ ಮುಂದುವರೆಯಬೇಕಾದಲ್ಲಿ ಎಲ್ಲರಲ್ಲೂ ಕೊಂಡು ಓದುವ ಆಸಕ್ತಿ ಹೆಚ್ಚಾಗಬೇಕು ಎಂದರು.

ಕನ್ನಡ ಜಾಗೃತಿ ಕೇಂದ್ರದ ಎಸ್‌. ಮಲ್ಲಿಕಾರ್ಜುನಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಜಿ.ಎಚ್‌. ರಾಜಶೇಖರ್‌ ಗುಂಡಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೆ. ಸಿದ್ದಪ್ಪ, ಜಿ.ಎಸ್‌. ಶರಣಯ್ಯ ಇತರರು ಇದ್ದರು. ಎಸ್‌. ಉಮಾದೇವಿ ಪ್ರಾರ್ಥಿಸಿದರು. ಕೆ.ಆರ್‌. ಉಮೇಶ ಸ್ವಾಗತಿಸಿದರು.

ಬಿ.ಎಲ್‌. ಗಂಗಾಧರ ನಿಟ್ಟೂರು ನಿರೂಪಿಸಿದರು. ಶೋಭಾ ಮಂಜುನಾಥ್‌ ವಂದಿಸಿದರು. ನಂತರ ಕವಿಗೋಷ್ಠಿ ನಡೆಯಿತು.

ಓದಿ: ಇನ್ ಲೈನ್ ಸ್ಕೇಟಿಂಗ್ ನಲ್ಲಿ ಹತ್ತು ವರ್ಷದ ಪೋರಿಯ ಗಿನ್ನಿಸ್ ದಾಖಲೆ

Advertisement

Udayavani is now on Telegram. Click here to join our channel and stay updated with the latest news.

Next