ದಾವಣಗೆರೆ: ಹರಿಹರ ತಾಲೂಕು ಚಿಕ್ಕಬಿದರಿಯ ಹಿರಿಯ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಭಾನುವಾರ ಆರೋಗ್ಯ ಇಲಾಖೆ, ತಾಲೂಕು ಪಂಚಾಯತ್ ಸಹಯೋಗದಲ್ಲಿ ವಿಶೇಷ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಶಿಬಿರಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಧಿಕಾರಿ ಮಹಾಂತೇಶ ಬೀಳಗಿ, ಚಿಕ್ಕಬಿದರಿ ಸಮೀಪದ ಡಿಸ್ಟಿಲರಿ ಕಾರ್ಖಾನೆಯಿಂದ ಹೊರಸೂಸುವ ಹಾರುಬೂದಿಯಿಂದಾಗಿ ತೀವ್ರ ತೊಂದರೆಯಾಗುತ್ತಿದೆ, ಆರೋಗ್ಯ ಸಮಸ್ಯೆ ತಲೆದೋರುತ್ತಿವೆ ಎಂದು ಗ್ರಾಮಸ್ಥರು ದೂರು ನೀಡಿದ್ದರು. ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಗ್ರಾಮಸ್ಥರ ಕೋರಿಕೆಯಂತೆ ವಿಶೇಷ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕಾರ್ಖಾನೆಯಿಂದ ಹೊರಸೂಸುವ ಹಾರುಬೂದಿ ಹಾಗೂ ತ್ಯಾಜ್ಯದಿಂದ ಗಾಳಿ, ನೀರು ಕಲುಷಿತವಾಗಿರುವ ಬಗ್ಗೆ ವರದಿ ಸಲ್ಲಿಸುವಂತೆ ಅಧಿ ಕಾರಿಗಳಿಗೆ ಸೂಚನೆ ನೀಡಲಾಗಿದೆ. ಬೆಂಗಳೂರಿನ ವಲಯ ಪರಿಸರ ಇಲಾಖಾ ಕಚೇರಿಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ. ಕಾರ್ಖಾನೆಯವರು ಮಾಲಿನ್ಯ ನಿಯಂತ್ರಣಕ್ಕಾಗಿ ನೂತನ ತಂತ್ರಜ್ಞಾನ ಅಳವಡಿಕೆಗೆ ಸೂಚಿಸಲಾಗುವುದು. ಕಾರ್ಖಾನೆಯವರೂ ಸೂಚನೆಯನ್ನು ಪಾಲಿಸುವ ವಿಶ್ವಾಸ ಇದೆ ಎಂದರು.
ಗ್ರಾಮಗಳ ನೀರಿನ ಮಾದರಿ ಸಂಗ್ರಹಿಸಿ, ಬಳಕೆಗೆ ಯೋಗ್ಯವಿರುವ ಬಗ್ಗೆ ಪರೀಕ್ಷಿಸಿ ವರದಿ ಸಲ್ಲಿಸಲು ಅ ಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಗ್ರಾಮಸ್ಥರ ರಕ್ತದ ಮಾದರಿ ಸಂಗ್ರಹಿಸಿ ವಿಶೇಷ ಪರೀಕ್ಷೆಗೆ ಒಳಪಡಿಸುವಂತೆಯೂ ಆರೋಗ್ಯ ಇಲಾಖೆ ಅ ಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಒಂದು ವೇಳೆ ಆರೋಗ್ಯ ಸಮಸ್ಯೆ ಗಂಭೀರವಾಗಿದ್ದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡುವಂತೆಯೂ ಸೂಚಿಸಲಾಗಿದೆ. ಆರೋಗ್ಯ ಇಲಾಖೆ ನೀಡುವ ವರದಿಯನ್ನಾಧರಿಸಿ ಮುಂದಿನ ಅಗತ್ಯ ಕ್ರಮ ಜರುಗಿಸಲಾಗುವುದು. ಗ್ರಾಮಸ್ಥರ ಆರೋಗ್ಯ ಕಾಪಾಡಲು ಜಿಲ್ಲಾಡಳಿತ ಬದ್ಧವಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿ ಕಾರಿ ಪದ್ಮಾ ಬಸವಂತಪ್ಪ ಮಾತನಾಡಿ, ಜಿಲ್ಲೆಯ ಕೆಲವು ಗ್ರಾಮಗಳಲ್ಲಿನ ನೀರಿನಲ್ಲಿ ಫ್ಲೋರೈಡ್ ಅಂಶ ಇರುವ ಬಗ್ಗೆ ಮಾಹಿತಿ ಬಂದಿದೆ. ಕಾರಣಗಳನ್ನು ಕಂಡುಹಿಡಿದು ನಿಯಂತ್ರಣಕ್ಕೆ ಕ್ರಮ ವಹಿಸಲಾಗಿದೆ. ಜಲಸಿರಿ ಯೋಜನೆಯಡಿ ಕೊಂಡಜ್ಜಿ ಹಾಗೂ ಸುತ್ತಮುತ್ತಲ 11 ಗ್ರಾಮಗಳಿಗೆ ಶುದ್ಧ ನೀರು ಪೂರೈಸಲು ಯೋಜನೆ ರೂಪಿಸಲಾಗಿದೆ. ಸ್ವತ್ಛ ಭಾರತ್ ಮಿಷನ್‌ನಡಿ ಮನೆ ಮನೆಯಿಂದ ಕಸ ಸಂಗ್ರಹಿಸಿ, ಪ್ಲಾಸ್ಟಿಕ್ ತೊಡೆದುಹಾಕಿ ಪರಿಸರ ಕಾಯ್ದುಕೊಳ್ಳುವುದು, ಶೌಚಾಲಯ ಬಳಸುವಂತೆ ಜಾಗೃತಿ ಮೂಡಿಸಲಾಗುವುದು. ಗ್ರಾಮಗಳಲ್ಲಿ ಗಾಳಿ, ನೀರಿನಿಂದ ಹರಡುವ ರೋಗ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾಧಿ ಕಾರಿ ಡಾ.| ಜಿ.ಡಿ. ರಾಘವನ್ ಮಾತನಾಡಿ, ಕಾರ್ಖಾನೆ ತ್ಯಾಜ್ಯ ನೀರಿನಲ್ಲಿ ಸೇರಿ, ನೀರು ಕಲುಷಿತಗೊಂಡು ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಹಾರುಬೂದಿ ಗಾಳಿಯೊಂದಿಗೆ ಬೆರೆತು ಗಾಳಿಯೂ ಕಲುಷಿತವಾಗಿರುವ ಸಾಧ್ಯತೆಗಳಿವೆ.ನೀರಿನ ಮಾದರಿ ಸಂಗ್ರಹಿಸಿ, ಬಳಕೆಗೆ ಅರ್ಹವಾಗಿದೆಯೋ, ಇಲ್ಲವೋ ಎಂಬುದನ್ನು ಪರೀಕ್ಷಿಸಿ ವರದಿ ಸಲ್ಲಿಸಲಾಗುವುದು.
ಒಂದು ವೇಳೆ ನೀರಿನಲ್ಲಿ ರಾಸಾಯನಿಕ ಮಿಶ್ರಣವಾಗಿರುವುದು ಕಂಡುಬಂದಲ್ಲಿ, ಉನ್ನತ ತಪಾಸಣೆಗೆ ಬೆಂಗಳೂರಿಗೆ ಪರೀಕ್ಷೆಗೆ ಮತ್ತೂಮ್ಮೆ ಕಳುಹಿಸಿಕೊಡಲಾಗುವುದು. ಯಾರಿಗಾದರೂ ಗಂಭೀರ ಆರೋಗ್ಯ ಸಮಸ್ಯೆ ಅಥವಾ ಒಂದೇ ತರಹದ ಆರೋಗ್ಯ ಸಮಸ್ಯೆಗಳು ಹೆಚ್ಚು ಕಂಡುಬಂದಲ್ಲಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗುವುದು. ಆರೋಗ್ಯ, ಆಶಾ ಕಾರ್ಯಕರ್ತೆಯರು ನಿರಂತರವಾಗಿ ಭೇಟಿ ನೀಡಿ
ಪರಿಶೀಲನೆ ನಡೆಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಉಪವಿಭಾಗಾ ಧಿಕಾರಿ ಡಾ| ಮಮತಾ ಹೊಸಗೌಡರ್, ಡಾ| ನಟರಾಜ್, ಡಾ| ಚಂದ್ರಮೋಹನ್ ಇತರರು ಇದ್ದರು.
ಓದಿ:
ಕೃಷಿ ಕಾಯ್ದೆ; ಮನಮೋಹನ್ ಸಿಂಗ್ ಹೇಳಿಕೆ ಉಲ್ಲೇಖಿಸಿ ಕಾಂಗ್ರೆಸ್ ಗೆ ಪ್ರಧಾನಿ ಮೋದಿ ತಿರುಗೇಟು