ದಾವಣಗೆರೆ: ಪ್ರತಿಯೊಬ್ಬ ವಿದ್ಯಾರ್ಥಿ ಮಹತ್ವಾಕಾಂಕ್ಷೆಯ ಕನಸು ಕಾಣಬೇಕು. ಮಹತ್ವಕಾಂಕ್ಷೆಯ ಕನಸು ಸಾಕಾರಗೊಳ್ಳಲು ಪರಿಶ್ರಮದ ಜೊತೆಗೆ ಸಾಧಿ ಸುವ ಛಲವನ್ನೂ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಕರೆ ನೀಡಿದರು.
ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶ ಸುಧಾರಣೆಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಬುಧವಾರ ನ್ಯಾಮತಿ ತಾಲೂಕಿನ ಬೆಳಗುತ್ತಿ-ಮಲ್ಲಿಗೇನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಏರ್ಪಡಿಸಿದ್ದ “ಕನಸು ಬಿತ್ತುವ ಕೆಲಸ-ರಾಷ್ಟ್ರ ಕಟ್ಟುವ ಕೆಲಸ’ ಶೀರ್ಷಿಕೆ ಅಡಿ ವಿದ್ಯಾರ್ಥಿಗಳೊಂದಿಗೆ ಶೈಕ್ಷಣಿಕ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗುರಿ ತಲುಪುವವರೆಗೂ ಯಾರೂ ವಿರಮಿಸಬಾರದು. ಸ್ವಾವಲಂಬನೆ, ಸ್ವಾಭಿಮಾನ, ಆತ್ಮಗೌರವ ಬೆಳೆಸಿಕೊಳ್ಳಬೇಕು. ಶ್ರದ್ಧೆ, ಸಮರ್ಪಣೆ ಹಾಗೂ ಶಿಸ್ತು ಮೈಗೂಡಿಸಿಕೊಳ್ಳಬೇಕು ಎಂದರು. ಯಾವುದೇ ಕ್ಷೇತ್ರದಲ್ಲಾಗಲಿ, ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಬೇಕು. ಪ್ರತಿಯೊಬ್ಬರಲ್ಲೂ ಅಗಾಧ ಶಕ್ತಿ ಇರುತ್ತದೆ. ಕಷ್ಟ ಪಡುವವರೇ ಜೀವನದಲ್ಲಿ ಉನ್ನತ ಸ್ಥಾನ ಪಡೆಯಲು ಸಾಧ್ಯ. 16 ರಿಂದ 22 ರೊಳಗಿನ ವಯಸ್ಸು ಕಂಡ ಕನಸನ್ನು ಸಾಕಾರಗೊಳಿಸಿಕೊಳ್ಳುವ ಪರಿಪಕ್ವವಾದ ಅವಧಿ. ಆದ್ದರಿಂದ ಯಾರೂ ಕೂಡ ಸಣ್ಣ ಮಟ್ಟದ ಕನಸು ಕಾಣಬಾರದು. ನಾವು ಕಾಣುವ ಕನಸು ನಮ್ಮನ್ನು ಮಲಗಲು ಬಿಡಬಾರದು ಎಂದರು.
ನಕಾರಾತ್ಮಕ ಭಾವನೆ ಒಳ್ಳೆಯದಲ್ಲ, ಧನಾತ್ಮಕವಾಗಿ ಚಿಂತಿಸಬೇಕು. ಕಲಿಕಾ ಮಟ್ಟದಲ್ಲಿ ಸಾಮರ್ಥ್ಯ ಕಡಿಮೆ ಇರುವವರು ಕೀಳರಿಮೆ ಹೊಂದಬಾರದು. ಜೀವನವನ್ನು ಯಾರೊಂದಿಗೂ ಹೋಲಿಕೆ ಮಾಡಿಕೊಳ್ಳಬಾರದು. ಅನೇಕ ಮಹನೀಯರು, ಸಾಧಕರು ತಮ್ಮ ಜೀವನದ ಪ್ರಾರಂಭದಲ್ಲಿ ಸೋತರೂ ನಂತರದ ದಿನಗಳಲ್ಲಿ ಮಹತ್ಸಾಧನೆ ಮಾಡುವ ಮೂಲಕ ಯಶಸ್ಸು ಕಂಡಿರುವ ಅನೇಕ ಉದಾಹರಣೆಗಳಿವೆ. ಡಾ| ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಬಡ ಕುಟುಂಬದಿಂದ ಬಂದು ಪರಿಶ್ರಮಪಟ್ಟು ಸಾಧನೆ ಮಾಡಿ ದೇಶದ ಉನ್ನತ ಸ್ಥಾನಕ್ಕೆ ಏರಿದವರು ಎಂದು ಸ್ಮರಿಸಿದರು.
ತಾವು ಬಾಲ್ಯದಲ್ಲಿ ಅನುಭವಿಸಿದ ಕಷ್ಟ, ಅವಮಾನಗಳ ಕುರಿತು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಜಿಲ್ಲಾಧಿಕಾರಿಗಳು, ತಾನು ಉನ್ನತ ಅ ಧಿಕಾರಿಯಾಗಲೇಬೇಕು ಎಂದು ಕಂಡ ಕನಸು ನನಸಾಗಿಸಲು ಪಟ್ಟ ಪರಿಶ್ರಮದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟರು. ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ ಮಾತನಾಡಿ, “ಕನಸು ಬಿತ್ತುವ ಕೆಲಸ-ರಾಷ್ಟ್ರ ಕಟ್ಟುವ ಕೆಲಸ’ ಕಾರ್ಯಕ್ರಮ ಜಿಲ್ಲಾಧಿ ಕಾರಿ ಮಹಾಂತೇಶ ಬೀಳಗಿ ಅವರ ಕನಸಿನ ಕೂಸು. ಬಹುಶಃ ಇಂತಹ ಕಾರ್ಯಕ್ರಮ ರಾಜ್ಯದ ಯಾವುದೇ ಜಿಲ್ಲೆಯಲ್ಲಿಯೂ ನಡೆದಿಲ್ಲ. ಪ್ರತಿ ವಿದ್ಯಾರ್ಥಿಯಲ್ಲಿಯೂ ಸುಪ್ತ ಪ್ರತಿಭೆಯ ಗುರುತಿಸಿ, ಬೆಳೆಸುವ ಕೆಲಸ ಶಾಲೆಯಲ್ಲಿ ಶಿಕ್ಷಕರು ಹಾಗೂ ಮನೆಯಲ್ಲಿ ಪೋಷಕರು ತಪ್ಪದೆ ಮಾಡಬೇಕು ಎಂದು ತಿಳಿಸಿದರು. ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಎಸ್.ಆರ್. ಗಂಗಪ್ಪ, ತಹಶೀಲ್ದಾರ್ ಬಸನಗೌಡ ಕೋಟೂರ್ ಅನುಭವ ಹಂಚಿಕೊಂಡರು.
ಓದಿ : ಪಂಚರಾಜ್ಯ ಚುನಾವಣೆ : ಫೇಸ್ ಬುಕ್ ಜಾಹಿರಾತು : ಅತಿ ಹೆಚ್ಚು ಖರ್ಚು ಮಾಡಿದ ಪಕ್ಷ ಯಾವುದು ?