Advertisement

ಜನರ ಸಮಸ್ಯೆಗೆ ಸ್ಪಂದಿಸದಿದ್ರೆ ನಿರ್ದಾಕ್ಷಿಣ್ಯ ಕ್ರಮ

05:34 PM Apr 26, 2021 | Team Udayavani |

ಹೊನ್ನಾಳಿ: ಜನರ ಜೀವ ಮತ್ತು ಜೀವನಕ್ಕೆ ತೊಂದರೆಯಾಗದಂತೆ ಪಿಡಿಒಗಳು ಕಾರ್ಯ ನಿರ್ವಹಿಸಬೇಕು. ನಿರ್ಲಕ್ಷಿಸಿದರೆ ನಿರ್ದಾಕ್ಷಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್‌ ಬಸನಗೌಡ ಕೋಟೂರ ಹೇಳಿದರು. ಪಟ್ಟಣದ ತಾಲೂಕು ಪಂಚಾಯತ್‌ ಸಾಮರ್ಥ್ಯಸೌಧದಲ್ಲಿ ನಡೆದ ಪಿಡಿಒಗಳ ತುರ್ತು ಸಭೆಯಲ್ಲಿ ಅವರು ಮಾತನಾಡಿದರು.

Advertisement

ಈಗಾಗಲೇ ಕೊರೊನಾ ಎರಡನೇ ಅಲೆ ತೀವ್ರವಾಗಿ ಹರಡುತ್ತಿದೆ. ಪಟ್ಟಣದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹಳ್ಳಿಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗದಂತೆ ಗ್ರಾಪಂ ಮಟ್ಟದಲ್ಲಿ ಕೊರೊನಾ ಟಾಸ್ಕ್ಫೋರ್ಸ್‌ ಸಮಿತಿ ರಚಿಸಿ ಜಾಗೃತಿ ಮೂಡಿಸಬೇಕೆಂದರು. ಗ್ರಾಪಂ ವ್ಯಾಪ್ತಿಯೊಳಗೆ ಯಾವುದೇ ರಾಜಕೀಯ, ಧಾರ್ಮಿಕ ಸಭೆ-ಸಮಾರಂಭಗಳು, ಜಾತ್ರಾ ಮಹೋತ್ಸವಗಳು ನಡೆಯದಂತೆ ಎಚ್ಚರ ವಹಿಸಬೇಕು. ಹಳ್ಳಿಗಳಲ್ಲಿ ಜಗಲಿ, ದೇವಸ್ಥಾನದ ಕಟ್ಟೆಗಳ ಮೇಲೆ ಜನದಟ್ಟಣೆ ಆಗದಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.

ಮದುವೆಗೆ 50 ಜನ, ಅಂತ್ಯಸಂಸ್ಕಾರಕ್ಕೆ ಕೇವಲ 20 ಜನರಿರುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ದರ್ಗಾಗಳಲ್ಲಿ ಮೌಲ್ವಿಯೊಬ್ಬರನ್ನು ಹೊರತುಪಡಿಸಿ ನಮಾಜ್‌ ಮಾಡಲು ಯಾರಿಗೂ ಅವಕಾಶವಿರುವುದಿಲ್ಲ. ನಿಗದಿತ ಸಮಯಕ್ಕನುಗುಣವಾಗಿ ಕೋವಿಡ್‌ ನಿಯಂತ್ರಣದ ಜೊತೆಗೆ ಗ್ರಾಪಂ ಕೆಲಸಗಳ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕು. ಮಾಸ್ಕ್ ಹಾಕದವರಿಗೆ ಕೋವಿಡ್‌ ನಿಯಮ ಉಲ್ಲಂಘನೆ ಮಾಡುವವರಿಗೆ ಯಾರು ಹೆಚ್ಚಾಗಿ ದಂಡ ವಿಧಿಸುತ್ತಾರೋ ಅಂತಹ ಪಿಡಿಒಗಳಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು.

ಪ್ರತಿ ದಿನ ಇಒ ಜೊತೆಗೆ ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಸಮಾಲೋಚನೆ ನಡೆಸುತ್ತೇನೆ. ಪ್ರತಿ ದಿನ ತಾಲೂಕಿನ ಎಲ್ಲಾ ಹಳ್ಳಿಗಳಲ್ಲಿನ ವಿದ್ಯಮಾನದ ಬಗ್ಗೆ ವರದಿಯನ್ನು ತರಿಸಿಕೊಳ್ಳುತ್ತಿದ್ದು, ಪಿಡಿಒಗಳು ಎಚ್ಚರದಿಂದಿರಬೇಕೆಂದು ತಿಳಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ| ಕೆಂಚಪ್ಪ ಮಾತನಾಡಿ, ಕೋವಿಡ್‌ ವ್ಯಾಕ್ಸಿನ್‌ ಲಸಿಕೆ ನೀಡಲು ಎಲ್ಲಾ ಹಳ್ಳಿಗಳಿಗೆ ಈಗಾಗಲೇ ಕ್ರಿಯಾ ಯೋಜನೆ ರೂಪಿಸಲಾಗಿದೆ. 45 ವರ್ಷ ಮೇಲ್ಪಟ್ಟವರು ಸ್ವಯಂಪ್ರೇರಿತರಾಗಿ ಲಸಿಕೆ ಪಡೆಯುವಂತೆ ಪಿಡಿಒಗಳು ಆರೋಗ್ಯ ಇಲಾಖೆ ಸಿಬ್ಬಂದಿಯೊಂದಿಗೆ ಸಹಕರಿಸಬೇಕು. ಪಿಡಿಒಗಳು ವ್ಯಾಕ್ಸಿನೇಶನ್‌ ಪಡೆದಿರುವವರ, ಕೊರೊನಾ ಸೋಂಕಿತರ, ಗಂಟಲು ಮತ್ತು ಮೂಗಿನ ದ್ರಾವಣ ನೀಡಿದವರ ಹಾಗೂ ಕೊರೊನಾ ಸೋಂಕಿತರೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಮಾಹಿತಿಯನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಸೂಚಿಸಿದರು.

Advertisement

ತಾಪಂ ಇಒ ಗಂಗಾಧರಮೂರ್ತಿ ಮಾತನಾಡಿ, ಬೆಂಗಳೂರು ಸೇರಿದಂತೆ ಬೇರೆ ಕಡೆಗಳಿಂದ ಬಂದವರ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಅನುಮಾನಾಸ್ಪದ ವ್ಯಕ್ತಿಗಳಿದ್ದರೆ ಅವರನ್ನು ಕೋವಿಡ್‌ ಟೆಸ್ಟ್‌ಗೊಳಪಡಿಸಬೇಕು. ಎಲ್ಲಾ ಇಲಾಖೆಗಳಿಗೆ ಸಹಕಾರ ನೀಡಿ ಕೊರೊನಾ ಹರಡದಂತೆ ಎಚ್ಚರವಹಿಸಬೇಕೆಂದು ಸಲಹೆ ನೀಡಿದರು.

ಗ್ರಾಮೀಣ ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ಎಚ್‌.ವಿ. ರಾಘವೇಂದ್ರ, ತಾಪಂ ವ್ಯವಸ್ಥಾಪಕ ಶಂಭುಲಿಂಗ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next