Advertisement

ಸಾವಿನಲ್ಲೂ ಅಪ್ಪನ ಪ್ರೀತಿ ಜಯಿಸಿದ ಮಗಳು!

10:49 AM Aug 27, 2018 | Team Udayavani |

ಸುಬ್ರಹ್ಮಣ್ಯ: ‘ನನ್ನ ಸಾವಿಗೆ ನಾನೇ ಕಾರಣ. ನನಗೆ ನನ್ನ ಪಪ್ಪ ಕಷ್ಟ ಪಡುವುದನ್ನು ನೋಡಲು ಆಗುತ್ತಿಲ್ಲ. ಪಪ್ಪ ಅಂದರೆ ನನ್ನ ಜೀವ. ನಂಗೆ ಹೆಲ್ತ್‌ ಪ್ರಾಬ್ಲಿಂ ಇತ್ತು. ನಾನು ಸಾಯೋ ನಿರ್ಧಾರ ಕೈಗೊಂಡೆ. ನಾನು ಕಲಿತ ಎಲ್ಲ ಶಾಲೆ, ಕಾಲೇಜುಗಳಿಗೆ ಸೋಮವಾರ ಒಂದು ದಿನದ ರಜೆ ಕೊಡಿ. ಅದೇ ನನ್ನ ಕೊನೆ ಆಸೆ ಮತ್ತು ನೆಮ್ಮದಿ.’

Advertisement

– ಶನಿವಾರ ಆತ್ಮಹತ್ಯೆ ಮಾಡಿಕೊಂಡ ಶ್ರೀ ಸುಬ್ರಹ್ಮಣ್ಯ ಮಹಾವಿದ್ಯಾಲಯದ ದ್ವಿತೀಯ ಬಿಬಿಎಂ ವಿದ್ಯಾರ್ಥಿನಿ ಅನಿತಾ ಎಚ್‌. ಬರೆದಿಟ್ಟ ಭಾವನಾತ್ಮಕ ಡೆತ್‌ನೋಟ್‌ ಇದು. ಹೆತ್ತವರೊಂದಿಗೆ ಸಂಬಂಧಿಕರು, ಸಹಪಾಠಿಗಳು, ಉಪನ್ಯಾಸಕರಿಗೂ ಆಕೆ ನೋವು ಉಳಿಸಿ ಹೋಗಿದ್ದಾಳೆ.

ಎಡಮಂಗಲ ಗ್ರಾಮದ ಹೇಮಲ ಕೋಟೆಗದ್ದೆ ನಿವಾಸಿ ಗಣೇಶ-ವಿಶಾಲಾಕ್ಷಿ ಅವರ ಇಬ್ಬರು ಪುತ್ರಿಯರಲ್ಲಿ ಅನಿತಾ ಕಿರಿಯವಳು. ಬಡತನವಿದ್ದರೂ ಮಕ್ಕಳು ಶಿಕ್ಷಣ ವಂಚಿತರಾಗಬಾರದು ಎಂದು ಹೆತ್ತವರು ಇಬ್ಬರನ್ನೂ ಓದಿಸಿದ್ದಾರೆ. ಹಿರಿಯ ಮಗಳು ಈಗಷ್ಟೇ ಕಲಿಕೆ ಮುಗಿಸಿ, ಕೆಲಸಕ್ಕೆ ಹೋಗುತ್ತಿದ್ದಾಳೆ. ಅನಿತಾ ಪ್ರತಿಭಾನ್ವಿತೆ ಎನ್ನುವುದನ್ನು ಕ್ಯಾಂಪಸ್‌ ಒಕ್ಕೊರಲಿನಿಂದ ಹೇಳುತ್ತದೆ. ಸಹಪಾಠಿಗಳು ಆಕೆಯ ಕುರಿತು ಅಭಿಮಾನದ ಮಾತನಾಡುತ್ತಾರೆ. ಕೊನೆಯ ದಿನವೂ ಕಾಲೇಜು ಆವರಣದಲ್ಲಿ ಖುಷಿಯಿಂದ ಓಡಾಡಿದ್ದಳು. ನೋವನ್ನು ಯಾರಲ್ಲೂ ಹೇಳದೆ ತಾನೇ ಅನುಭವಿಸುತ್ತಿದ್ದಳು. ಆದರೆ, ಈ ಆಘಾತ ಮರೆಯಲು ಗೆಳತಿಯರಿಗೆ, ಉಪನ್ಯಾಸಕರಿಗೆ ಸಾಧ್ಯವಾಗುತ್ತಿಲ್ಲ. ಆತ್ಮೀಯವಾಗಿ ಮಾತನಾಡಿ ಹೋದವಳು ಹೀಗೇಕೆ ಮಾಡಿಕೊಂಡಳ್ಳೋ ಎಂದು ಸ್ನೇಹಿತೆ ಸ್ವಾತಿ ಇಚಿಲಂಪಾಡಿ ಕಣ್ಣೀರು ಮಿಡಿದಳು.

ನಾಟಕದಲ್ಲಿ ಪಾತ್ರ
ಓದಿನಲ್ಲಿ ಮುಂದಿದ್ದ ಅನಿತಾ ಪ್ರತಿ ಬಾರಿಯೂ ಪರೀಕ್ಷೆಯಲ್ಲೂ ಉತ್ತಮ ಅಂಕಗಳನ್ನು ಪಡೆದಿದ್ದಳು. ಈ ಹಿಂದಿನ ವರ್ಷದಲ್ಲೂ ಶೇ. 72 ಅಂಕ ಗಳಿಸಿದ್ದಳು. ಕಲೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಮುಂಚೂಣಿಯಲ್ಲಿ ಇರುತ್ತಿದ್ದಳು. ಕಾಲೇಜಿನ ಸಾಂಸ್ಕೃತಿಕ ರಂಗಘಟಕ ಕುಸುಮ ಸಾರಂಗ ನಾಟಕ ತಂಡದ ಸದಸ್ಯೆಯಾಗಿದ್ದು, ಇತ್ತೀಚೆಗೆ ಪ್ರದರ್ಶನಗೊಂಡ ಧಾರಾಶಿಕೊ ನಾಟಕದಲ್ಲಿ ಬಾಬರನ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿ, ಮೆಚ್ಚುಗೆ ಗಳಿಸಿದ್ದಳು.

ಆಕೆಯನ್ನು ಅನಾರೋಗ್ಯ ಬಾಧಿಸುತ್ತಿತ್ತು. ಕೂಲಿ ಕೆಲಸ ಮಾಡುತ್ತಲೇ ಹೆತ್ತವರು ಶಕ್ತಿ ಮೀರಿ ಚಿಕಿತ್ಸೆ ಕೊಡಿಸುತ್ತಿದ್ದರು. ಸಾವಿರಾರು ರೂ. ವ್ಯಯಿಸಿದ್ದರು. ಇನ್ನೂ ಚಿಕಿತ್ಸೆಗೆ ಖರ್ಚು ಮಾಡುವುದು ಹೆತ್ತವರಿಗೆ ಕಷ್ಟ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಅಪ್ಪನಿಗೆ ನೋವು ಕೊಡುವುದು ಬೇಡ ಎಂದು ಸಾವಿನಂತಹ ಕಠಿನ ನಿರ್ಧಾರ ತೆಗೆದುಕೊಂಡಳು. ಸಾವು ಮನುಷ್ಯನ ಕೊನೆಯ ಸೋಲು. ತನ್ನ ನಿರ್ಧಾರದ ಬಗ್ಗೆ ಸಣ್ಣ ಸುಳಿವನ್ನೂ ನೀಡದೆ ಆಕೆ ಹಿಂದಿನ ರಾತ್ರಿಯೂ ಅಪ್ಪ, ಅಕ್ಕನೊಂದಿಗೆ ಚೆನ್ನಾಗಿಯೇ ಮಾತನಾಡಿದ್ದಳು. ಕುಟುಂಬವೀಗ ಆಘಾತಗೊಂಡು ರೋದಿಸುತ್ತಿದೆ.

Advertisement

ಇಂದು ಕಾಲೇಜಿಗೆ ರಜೆ
ಅನಿತಾ ಪ್ರತಿಭಾನ್ವಿತೆ. ಬಹುಮುಖ ಪ್ರತಿಭೆ. ಅವಳ ಸಾವು ದುಃಖ ತಂದಿದೆ. ಆಕೆಯ ಕೊನೆಯ ಆಸೆಯಂತೆ ಸೋಮವಾರ ಕೆಎಸ್‌ಎಸ್‌ ಕಾಲೇಜಿನಲ್ಲಿ ಆಕೆಯ ಗೌರವಾರ್ಥ ನುಡಿನಮನ ಸಲ್ಲಿಸಿ, ಸಂಸ್ಥೆಗೆ ರಜೆ ನೀಡಲು ಕಾಲೇಜು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ| ರಂಗಯ್ಯ ಶೆಟ್ಟಿಗಾರ್‌ ತಿಳಿಸಿದ್ದಾರೆ.

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next