ಮಂಗಳೂರು: ಚಿಕ್ಕಮಗಳೂರು ಜಿಲ್ಲೆಯ ದತ್ತಪೀಠ ದಲ್ಲಿ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಡಿ.24ರಿಂದ 26ರ ವರೆಗೆ ದತ್ತಜಯಂತಿ ಉತ್ಸವ ನಡೆಯಲಿದ್ದು ಮಂಗಳೂರು ವಿಭಾಗದಿಂದ 5,000ಕ್ಕೂ ಅಧಿಕ ದತ್ತಮಾಲಾಧಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಬಜರಂಗದಳ ದಕ್ಷಿಣ ಪ್ರಾಂತ ಸಂಚಾಲಕ ಸುನಿಲ್ ಕೆ.ಆರ್. ತಿಳಿಸಿದ್ದಾರೆ.
ದತ್ತ ಜಯಂತಿ ಉತ್ಸವವನ್ನು ಪ್ರತೀ ವರ್ಷ ನಾಡ ಉತ್ಸವವನ್ನಾಗಿ ಆಚರಿಸುತ್ತ ಬಂದಿದ್ದು ಈ ಬಾರಿ ದತ್ತಪೀಠ ಮತ್ತು ಚಿಕ್ಕಮಗಳೂರು ನಗರದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಡಿ.24ರಂದು ಅನಸೂಯದೇವಿ ಪೂಜೆಯ ಅಂಗವಾಗಿ ಚಿಕ್ಕಮಗಳೂರು ನಗರದಲ್ಲಿ ಬೆಳಗ್ಗೆ 9.30ರಿಂದ ಮಹಿಳೆಯರಿಂದ ಸಂಕೀರ್ತನ ಯಾತ್ರೆ ನಡೆಯಲಿದೆ. ದತ್ತಪೀಠದಲ್ಲಿ ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಡಿ.25ರಂದು ಮಧ್ಯಾಹ್ನ ಚಿಕ್ಕಮಗಳೂರು ನಗರದಲ್ಲಿ ಬೃಹತ್ ಶೋಭಾಯಾತ್ರೆ, ಧಾರ್ಮಿಕ ಸಭೆ ನಡೆಯಲಿದೆ. ಡಿ.26ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಹಿಂದೂಗಳ ಶ್ರದ್ಧಾಕೇಂದ್ರ ವಾಗಿರುವ ದತ್ತಪೀಠದಲ್ಲಿ ಹಿಂದೂ ವೈದಿಕ ವಿಧಿವಿಧಾನದ ಮೂಲಕ ನಿತ್ಯ ತ್ರಿಕಾಲ ಪೂಜೆಗೆ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿ ಈ ವರ್ಷವೂ ಅಭಿಯಾನ ನಡೆಯಲಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.