ಬೆಂಗಳೂರು: ರಾಜ್ಯದಲ್ಲಿ ಶಾಸಕರ ರಾಜೀನಾಮೆಯಿಂದ ತೆರವಾಗಿರುವ ಮೂರು ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ (By Election) ಘೋಷಿಸಲಾಗಿದೆ. ಕೇಂದ್ರ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಮಂಗಳವಾರ (ಅ.15) ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭಾ ಚುನಾವಣೆಯ ಜೊತೆಗೆ ರಾಜ್ಯದ ಉಪ ಚುನಾವಣೆಯ ಬಗ್ಗೆಯೂ ಘೋಷಣೆ ಮಾಡಿದರು.
ರಾಜ್ಯದ ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿ ವಿಧಾನಸಭೆ ಕ್ಷೇತ್ರಗಳಿಗೆ ಈ ಬಾರಿ ಉಪ ಚುನಾವಣೆ ನಡೆಯಲಿದೆ. ಇದರ ಮತದಾನ ನವೆಂಬರ್ 13ರಂದು ನಡೆಯಲಿದೆ. ಚುನಾವಣಾ ಫಲಿತಾಂಶವು ನವೆಂಬರ್ 23ರಂದು ಘೋಷಣೆಯಾಗಲಿದೆ.
ಅ.25ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, ಅ.28ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಾಸ್ ಪಡೆಯಲು ಅ.30 ಕೊನೆಯ ದಿನಾಂಕವಾಗಿದೆ.
ಚನ್ನಪಟ್ಟಣದಲ್ಲಿ ಶಾಸಕರಾಗಿದ್ದ ಎಚ್ ಡಿ ಕುಮಾರಸ್ವಾಮಿ, ಶಿಗ್ಗಾಂವಿಯಲ್ಲಿ ಶಾಸಕರಾಗಿದ್ದ ಬಸವರಾಜ ಬೊಮ್ಮಾಯಿ ಮತ್ತು ಸಂಡೂರಿನಲ್ಲಿ ಶಾಸಕರಾಗಿದ್ದ ತುಕರಾಂ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಜಯ ಗಳಿಸಿದ್ದರು. ಹೀಗಾಗಿ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಇದೀಗ ಉಪಚುನಾವಣೆ ನಡೆಯಲಿದೆ.