Advertisement

ಕೊರೊನಾ ನಿಯಂತ್ರಣಕ್ಕೆ ಜನರ ಸಹಭಾಗಿತ್ವ ಮುಖ್ಯ

09:29 PM Jun 07, 2021 | Team Udayavani |

ದಾವಣಗೆರೆ: ಕೊರೊನಾ ನಿಯಂತ್ರಣಕ್ಕೆ ಸಾರ್ವಜನಿಕರ ಸಹಭಾಗಿತ್ವ ಅತಿ ಮುಖ್ಯ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

Advertisement

ಭಾನುವಾರ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಕೊಡುಗೆಯಾಗಿ ನೀಡಿರುವ 10 ಆಕ್ಸಿಜನ್‌ ಕಾನ್ಸಂಟ್ರೇಟರ್‌ಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊರೊನಾ ನಿಯಂತ್ರಣ ಒಳಗೊಂಡಂತೆ ಎಲ್ಲವನ್ನೂ ಸರ್ಕಾರವೇ ಮಾಡುವುದಕ್ಕೆ ಆಗುವುದಿಲ್ಲ. ಸಾರ್ವಜನಿಕರ ಸಹಭಾಗಿತ್ವವೂ ಮುಖ್ಯ ಎಂದರು.

ಸಿದ್ಧಗಂಗಾ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಆಮ್ಲಜನಕ ಸಾಂದ್ರಕಗಳನ್ನು ಕೊಡುಗೆಯಾಗಿ ನೀಡಿರುವುದು ದಾವಣಗೆರೆ ಇತಿಹಾಸದಲ್ಲೇ ಅಚ್ಚಳಿಯದೆ ಉಳಿಯುವಂತಹ ಮಾನವೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಾನು ಬೇರೆ ಬೇರೆ ಜಿಲ್ಲೆಯಲ್ಲಿ ಕೆಲಸ ಮಾಡಿದ್ದೇನೆ. ದಾವಣಗೆರೆಯ ಜನರು ಸದಾ ಸೇವೆಯಲ್ಲಿ ಮುಂದಿದ್ದಾರೆ.

ದಾವಣಗೆರೆಯ ಜನತೆ ದಾನ ಮಾಡುವ, ಸಮಾಜಕ್ಕೆ ಸ್ಪಂದಿಸುವ ಮನೋಭಾವವನ್ನು ಬೇರೆಲ್ಲೂ ನೋಡಲಿಲ್ಲ. ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಸಹ ಸದಾ ಸಮಾಜದ ಕಷ್ಟಗಳಿಗೆ ಸ್ಪಂದಿಸುತ್ತಾ ಸಮಾಜಮುಖೀಯಾಗಿ ಸೇವೆ ಸಲ್ಲಿಸುತ್ತಿದೆ. ಭೂಕಂಪ, ಅತಿವೃಷ್ಟಿಯ ಸಂದರ್ಭದಲ್ಲಿ ದೇಣಿಗೆ ನೀಡಿದೆ. ಕಳೆದ ವರ್ಷ ಕೊರೊನಾ ಆಹಾರದ ಕಿಟ್‌ಗಳನ್ನು ನೀಡಿ ತನ್ನ ಪರಂಪರೆ ಉಳಿಸಿಕೊಂಡಿದೆ. ಈಗ ಅತ್ಯವಶ್ಯಕವಾಗಿ ಬೇಕಾಗಿರುವ ಆಮ್ಲಜನಕ ಸಾಂದ್ರಕ ನೀಡಲಾಗುತ್ತಿದೆ. ಕಾನ್ಸಂಟ್ರೇಟರ್‌ ಕೊಡುಗೆಯಾಗಿ ನೀಡಿರುವ ಎಲ್ಲಾ ಹಿರಿಯ ವಿದ್ಯಾರ್ಥಿಗಳು ಜಿಲ್ಲಾಡಳಿತದ ಪರವಾಗಿ ಅಭಿನಂದನಾರ್ಹರು ಎಂದು ತಿಳಿಸಿದರು.

ಕೆಲವರು ಆಕ್ಸಿಜನ್‌ ಸಿಲಿಂಡರ್‌ಗಳನ್ನು ಮನೆಯಲ್ಲಿಟ್ಟುಕೊಂಡಿರುತ್ತಾರೆ. ಸರ್ಕಾರದಿಂದ ಅದಕ್ಕೆ ಅನುಮತಿ ಇಲ್ಲ. ಆಮ್ಲಜನಕ ಸಾಂದ್ರಕಗಳನ್ನು ಬಳಕೆ ಮಾಡಬಹುದು. ಉಳ್ಳವರು ಆಮ್ಲಜನಕ ಸಾಂದ್ರಕಗಳ ಖರೀದಿ ಮಾಡಬಹುದು. ಆದರೆ ಇತರೆಯವರಿಗೆ ಕಷ್ಟ. ಅಂತಹವರಿಗೆ ನೆರವಾಗಲು ಕಾನ್ಸಂಟ್ರೇಟರ್‌ಗಳನ್ನು ನೀಡುತ್ತಿರುವುದು ಉತ್ತಮ ಕಾರ್ಯ ಎಂದರು.

Advertisement

ಮೇಯರ್‌ ಎಸ್‌.ಟಿ. ವೀರೇಶ್‌ ಮಾತನಾಡಿ, ಕೊರೊನಾದಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಎಲ್ಲರೂ ಸಹಕರಿಸುತ್ತಿದ್ದಾರೆ. ಸಿದ್ಧಗಂಗಾ ವಿದ್ಯಾಸಂಸ್ಥೆ ಜಿಲ್ಲೆಯ ಮತ್ತು ರಾಷ್ಟ್ರೀಯ ವಿಪತ್ತುಗಳ ಸಂದರ್ಭದಲ್ಲಿ ಸದಾ ಕೈ ಜೋಡಿಸುತ್ತಾ ಬಂದಿದೆ. ಸಂಕಷ್ಟದ ಸಂದರ್ಭದಲ್ಲಿ ಪ್ರತಿಯೊಬ್ಬರು ಸಾಮಾಜಿಕ ಜವಾಬ್ದಾರಿಯೊಂದಿಗೆ ಸೇವೆ ಸಲ್ಲಿಸಬೇಕು ಎಂದು ಮನವಿ ಮಾಡಿದರು.

ಪ್ರಾಸ್ತಾವಿಕ ಮಾತುಗಳಾಡಿದ ಸಂಸ್ಥೆಯ ನಿರ್ದೇಶಕ ಡಾ| ಡಿ.ಎಸ್‌. ಜಯಂತ್‌, ಕೋವಿಡ್‌ ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರವೂ ಕೆಲವೊಮ್ಮೆ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಆಕ್ಸಿಮೀಟರ್‌ ನಲ್ಲಿ 90ಕ್ಕಿಂತ ಕಡಿಮೆಯಾದಾಗ ಉಸಿರಾಟ ಸಮಸ್ಯೆಯಿಂದ ಬಳಲುತ್ತಾರೆ. ತಕ್ಷಣ ಆಮ್ಲಜನಕದ ಪೂರೈಕೆ ಆಗಬೇಕು. ಅಂತಹ ರೋಗಿಗಳಿಗೆ ಆಕ್ಸಿಜನ್‌ ಸಾಂದ್ರಕಗಳು ಜೀವರಕ್ಷಕವಾಗಿರುತ್ತವೆ ಎಂದು ಹೇಳಿದರು.

ಸಂಸ್ಥೆಯ ಕರೆಗೆ ಓಗೊಟ್ಟು ತಮ್ಮ ಸಹಾಯ ಹಸ್ತ ಚಾಚಿದ ದೇಶ-ವಿದೇಶಗಳಲ್ಲಿ ನೆಲೆಸಿರುವ ಹಿರಿಯ ವಿದ್ಯಾರ್ಥಿಗಳು ಕೇವಲ ಮೂರು ದಿನಗಳಲ್ಲಿ ನೆರವಿನ ಮಹಾಪೂರ ಹರಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಸಂಸ್ಥೆಯ ಅಧ್ಯಕ್ಷ ಪ್ರಶಾಂತ್‌, ಕಾರ್ಯದರ್ಶಿ ಹೇಮಂತ್‌, ಮುಖ್ಯಸ್ಥೆ ಜಸ್ಟಿನ್‌ ಡಿಸೌಜ, ಹಿರಿಯ ವಿದ್ಯಾರ್ಥಿಗಳಾದ ಸಾಮ್ರಾಟ್‌, ರಾಮಮನೋಹರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next