Advertisement

ಜನರಲ್ಲಿ ದೇವರ ಕಂಡ ದಾಸಿಮಯ್ಯ

04:15 PM Mar 23, 2018 | |

ಬೀದರ: ದೇವರ ದಾಸಿಮಯ್ಯ ಅವರು ಜನಸಾಮಾನ್ಯರಲ್ಲಿ ದೇವರನ್ನು ಕಂಡಿರುವ ವಿಶಾಲ ಚಿಂತಕರು ಮತ್ತು ಶ್ರೇಷ್ಠ ವಚನಕಾರರಾಗಿದ್ದರು ಎಂದು ಭಾತಂಬ್ರಾದ ಜಗದ್ಗುರು ಶ್ರೀ ಶಿವಯೋಗಿಶ್ವರ ಮಹಾಸ್ವಾಮಿಗಳು ಹೇಳಿದರು.

Advertisement

ನಗರದ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದ ಅವರು, ದೇವರ ದಾಸಿಮಯ್ಯ ಅವರು ಸುರಪುರ ತಾಲೂಕಿನ ಮುದನೂರು ಗ್ರಾಮದಲ್ಲಿ ರಾಮಯ್ಯ ಮತ್ತು ಶಂಕರದೇವಿ ಎನ್ನುವ ದಂಪತಿಯ ಪುತ್ರರಾಗಿ ಜನಿಸಿ ದೊಡ್ಡ ವಚನಕಾರರಾಗಿ ಬೆಳೆದವರು. ಇವರು ಎಲ್ಲಾ ವಚನಕಾರರಿಗಿಂತ ಭಿನ್ನರಾಗಿದ್ದು, ಅವರ ವಚನಗಳಲ್ಲಿ ಬಡವರು, ಶ್ರಮಿಕರು ಮತ್ತು ನೊಂದವರ ತುಡಿತವನ್ನು ಕಾಣಬಹುದು ಎಂದು ಹೇಳಿದರು.

ಆಹಾರ ಕೊಡುವ ರೈತ ಮತ್ತು ಬಟ್ಟೆ ಪೂರೈಸುವ ನೇಕರಾರರು ಶ್ರೇಷ್ಠ ಕಾಯಕ ಜೀವಿಗಳಾಗಿದ್ದಾರೆ ಎಂದು ಪ್ರತಿಪಾದಿಸುವ ಅವರು, ಉತ್ತಮ ನಡೆ-ನುಡಿ ಹೊಂದಿರಬೇಕು. ಸಜ್ಜನರ ಸಹವಾಸ ಬೆಳೆಸಬೇಕು. ಪ್ರಾಣಿ ಬಲಿ, ಮದ್ಯಪಾನ, ಮಾದಕ ವಸ್ತುಗಳ ಸೇವನೆ ಬಿಡಬೇಕು. ಮಾಂಸಾಹಾರ ಬಿಟ್ಟು ಸಾತ್ವಿಕ ಆಹಾರ ಸೇವಿಸಬೇಕು ಎಂದು ಬೋಧಿಸಿದ್ದರು ಎಂದು ಹೇಳಿದರು.

ಶಾಸಕ ರಹೀಮ ಖಾನ್‌ ಮಾತನಾಡಿ, ನಮ್ಮಲ್ಲಿನ ಮಹನಿಯರು ಸಮಾಜಕ್ಕೆ ನೀಡಿರುವ ಕೊಡುಗೆಗಳು ಮತ್ತು ಜೀವನ ಜೀವನ ಸಿದ್ಧಾಂತಗಳನ್ನು ಜನಸಾಮಾನ್ಯರಿಗೆ ತಿಳಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಜಯಂತಿಗಳನ್ನು ಆಚರಿಸಲಾಗುತ್ತಿದೆ. ಸಾರ್ವಜನಿಕರು ಮಹನಿಯರ ತತ್ವಗಳನ್ನು ಅನುಸರಿಸಬೇಕು ಎಂದು ತಿಳಿಸಿದರು.

ಜಿಪಂ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಮಾತನಾಡಿ, ದೇವರ ದಾಸಿಮಯ್ಯ ಅವರು ಮಹಾನ್‌ ವಚನಕಾರರಾಗಿದ್ದು, ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಜಯಂತಿಗೆ ಅರ್ಥ ಬರುತ್ತದೆ ಎಂದರು.
 
ನಗರಸಭೆ ಅಧ್ಯಕ್ಷೆ ಶಾಲಿನಿ ಚಿಂತಾಮಣಿ ಮಾತನಾಡಿ, ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಬೇಕಿದೆ. ಉತ್ತಮ ಪರಿಸರಕ್ಕಾಗಿ ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಒಂದೊಂದು ಗಿಡ ನೆಡಲು ಮುಂದಾಗಬೇಕು. ಸಾಧ್ಯವಾದಷ್ಟು ಪ್ಲಾಸ್ಟಿಕ್‌ ಬಳಕೆ ನಿಲ್ಲಿಸಬೇಕು ಎಂದು ಸಲಹೆ ನೀಡಿದರು.

Advertisement

ಸಹಾಯಕ ಆಯುಕ್ತ ಶಿವಕುಮಾರ ಶೀಲವಂತ, ರಾಚಪ್ಪ, ಸಮಾಜದ ಅಧ್ಯಕ್ಷ ಸೋಮಶೇಖರ ಅಮಲಾಪುರ, ಪಾಂಡುರಂಗ ಸಪಾರೆ, ನಗರಸಭೆ ಸದಸ್ಯ ದೀಪಕ ಹಾಗೂ ಇತರರು ಉಪಸ್ಥಿತರಿದ್ದರು. ಪ್ರಾಂಶುಪಾಲ ಚನ್ನಬಸವ ಹೇಡೆ ನಿರೂಪಿಸಿದರು. ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ ಸ್ವಾಗತಿಸಿದರು.

ಇದಕ್ಕೂ ಮುನ್ನ ನಗರದಲ್ಲಿ ದೇವರ ದಾಸಿಮಯ್ಯ ಅವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಜಿಪಂ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ಜಿಲ್ಲಾಧಿಕಾರಿ ಕಚೇರಿಯಿಂದ ಹೊರಟು ಪ್ರಮುಖ ರಸ್ತೆಗಳ ಮೂಲಕ ಜಿಲ್ಲಾ ರಂಗಮಂದಿರಕ್ಕೆ ತೆರಳಿ ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ಮುಖವಾಡ ವೇಷಧಾರಿಗಳು, ಲಂಬಾಣಿ ಕುಣಿತ ಗಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next