Advertisement

ದಸರೀಘಟ್ಟದ ಶಕ್ತಿ ದೇವತೆ:  ಚೌಡೇಶ್ವರಿ ದೇವಿ 

04:00 AM Apr 15, 2017 | |

 “ಕಲ್ಪತರು ನಾಡು’ ಎಂದೇ ಹೆಸರಾದ ತಿಪಟೂರು ತಾಲ್ಲೂಕಿನ ದಸರೀಘಟ್ಟ ಕ್ಷೇತ್ರವು ಶಕ್ತಿ ದೇವತೆ ಚೌಡೇಶ್ವರಿಯ ನೆಲೆ ನಾಡು. ಇದು ತುಮಕೂರು ಜಿಲ್ಲೆಯಲ್ಲಿದೆ.

Advertisement

 ದಸರೀಘಟ್ಟ  ಕ್ಷೇತ್ರದ  ಚೌಡೇಶ್ವರಿದೇವಿಯು  ಭಕ್ತರ ಕಷ್ಟ-ನಷ್ಟಗಳಿಗೆ ತನ್ನ ಕಳಶದ ಬರವಣಿಗೆ ಮೂಲಕ ಪರಿಹಾರ ಸೂಚಿಸುತ್ತಾಳೆ ಎನ್ನುವ ನಂಬಿಕೆ ಇದೆ.  ಇಂತಹ ಶಕ್ತಿಯನ್ನು ಹೊಂದಿರುವ ಚೌಡೇಶ್ವರಿಯನ್ನು ನೋಡಲು ಹಲವೆಡೆಗಳಿಂದ ಪ್ರತಿನಿತ್ಯ ನೂರಾರು ಭಕ್ತರು ಇಲ್ಲಿಗೆ ಬರುತ್ತಾರೆ. ಅಷ್ಟೇ ಅಲ್ಲ, ವಿವಿಧ ಕ್ಷೇತ್ರಗಳ ಗಣ್ಯರೂ ಸಹ ಇಲ್ಲಿಗೆ ಭೇಟಿ ನೀಡಿ ದೇವಿಯ ದರ್ಶನಗೈದು ಪುನೀತರಾಗಿ¨ªಾರೆ.

 ತಿಪಟೂರಿನಿಂದ ಅನತಿ ದೂರದಲ್ಲಿರುವ ಈ ಕ್ಷೇತ್ರಕ್ಕೆ ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿರುವ ಸಾಲು ತೆಂಗಿನ ಮರಗಳು ತಂಪು ಗಾಳಿ ಸೂಸುತ್ತಾ, ಭಕ್ತಾಧಿಗಳಿಗೆ ಸ್ವಾಗತ ಕೋರುವುದರ ಜೊತೆಗೆ ಕ್ಷೇತ್ರಕ್ಕೆ ಭೇಟಿ ನೀಡಿರೆಂದು ಕೈ ಬೀಸಿ ಕರೆಯುತ್ತಿವೆ. 

ಸುಮಾರು ಇನ್ನೂರು ವರ್ಷಗಳ ಇತಿಹಾಸ ಹೊಂದಿರುವ ಚೌಡೇಶ್ವರಿಯ ದೇವಾಲಯ  ಸುಂದರವಾಗಿದೆ. ಪ್ರವೇಶ ದ್ವಾರದಲ್ಲಿ 78 ಅಡಿ ಎತ್ತರದ ಭವ್ಯ ರಾಜಗೋಪುರವಿದೆ. ದೇವಾಲಯದ ಗರ್ಭಗೃಹದಲ್ಲಿ ಹುತ್ತದ ಮಣ್ಣಿನಿಂದ ನಿರ್ಮಿಸಲಾಗಿರುವ ಚೌಡೇಶ್ವರಿಯ ವಿಗ್ರಹವಿದೆ. ಇಲ್ಲಿರುವ ಹುತ್ತದಲ್ಲಿ ಈ ಹಿಂದೆ ಚೌಡೇಶ್ವರಿಯು ಲೀನವಾಗಿ¨ªಾಳೆಂಬ ಪ್ರತೀತಿ ಇದೆ. ಇನ್ನು ದೇಗುಲದ ಮುಂದಿರುವ ಪುಟ್ಟ ದೇವಾಲಯದಲ್ಲಿ ಈ ಕ್ಷೇತ್ರಪಾಲಕಳಾದ ಕರಿಯಮ್ಮನ ಕಪ್ಪುಶಿಲೆಯ ಮೂರ್ತಿ ಇದೆ. ಸುಂದರವಾಗಿರುವ ಈ ಶಿಲಾಮೂರ್ತಿಗೆ ಅಭೀಷೇಕ ಮಾಡಲಾಗುತ್ತದೆ. ಆದಿಚುಂಚನಗಿರಿ ಮಠವು ಈ ಕ್ಷೇತ್ರದ ಸಂಪೂರ್ಣ ಆಡಳಿತ ಜವಬ್ದಾರಿಯನ್ನು ವಹಿಸಿಕೊಂಡಿದೆ. ಅದರ ಶಾಖಾಮಠವು ಇಲ್ಲಿದ್ದು, ದೇವಾಲಯದ ಉಸ್ತುವಾರಿ ಹೊತ್ತುಕೊಂಡಿದೆ.

ಬರೆಯುವ ಅಮ್ಮ

Advertisement

ಇಲ್ಲಿರುವ ಚೌಡೇಶ್ವರಿಯ ಉತ್ಸವಮೂರ್ತಿಯನ್ನು “ಬರೆಯುವ ಅಮ್ಮ’ ಎಂದು ಕರೆಯಲಾಗುತ್ತದೆ. ಇದು ಈ ಕ್ಷೇತ್ರದ ವಿಶೇಷ ಮತ್ತು ಕುತೂಹಲ ಸಂಗತಿಯಾಗಿದೆ. ಭಕ್ತರ ಸಮಸ್ಯೆಗಳಿಗೆ ಈ ಉತ್ಸವಮೂರ್ತಿಯು ತನ್ನ ಕಳಸದ ಬರವಣಿಗೆಯ ಮೂಲಕ ಪರಿಹಾರ ಸೂಚಿಸುತ್ತದೆ ಎನ್ನುವ ನಂಬಿಕೆ ಇದೆ.  ದೇವಿಯು ತನ್ನ ಮುಂದಿರುವ ಮಠದ ಹಲಗೆಯಲ್ಲಿ ಹರಡಿರುವ ರಾಗಿ ಹಿಟ್ಟು, ಅರಿಶಿಣ ಅಥವಾ ಅಕ್ಕಿಯಲ್ಲಿ ತನ್ನ ಕಳಶದ ತುದಿಭಾಗದಿಂದ ಅಕ್ಷರ ಮೂಡಿಸಿ ಭಕ್ತಾದಿಗಳಿಗೆ ಉತ್ತರ ಸೂಚಿಸುವುದರ ಜೊತೆಗೆ ಆಶ್ಚರ್ಯ ಮೂಡಿಸುತ್ತದೆ.

ಇದಲ್ಲದೆ ಭಕ್ತರು ತಮ್ಮ ಮನಸ್ಸಿನಲ್ಲಿ ಯಾವುದಾದರೂ ವಸ್ತುವನ್ನು ಕುರಿತು ಅಂದುಕೊಂಡರೆ ಅದನ್ನು ಉತ್ಸವಮೂರ್ತಿ ತೋರಿಸುತ್ತದೆ. ಇದೂ ಸಹ ಈ ಕ್ಷೇತ್ರದ ವಿಶೇಷ. ಭಕ್ತರ ಸಮಸ್ಯೆಗಳ ನಿವಾರಣೆಗಾಗಿ ಇಲ್ಲಿ ವಿವಿಧ ಪೂಜೆಗಳನ್ನು ನಡೆಸಲಾಗುತ್ತದೆ.

ಪ್ರತಿವರ್ಷ ವಿಜಯದಶಮಿಯಂದು ಈ ಕ್ಷೇತ್ರದಲ್ಲಿ ಮುಳ್ಳುಗದ್ದಿಗೆ ಉತ್ಸವ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ರಾಶಿಗಟ್ಟಲೆ ತಂದು ಹಾಕಿರುವ ಕಾರೆ ಮುಳ್ಳುಗಳನ್ನು ಉತ್ಸವಮೂರ್ತಿ ಹೊತ್ತವರು ತುಳಿಯುತ್ತಾರೆ. ಆದರೆ ಯಾರಿಗೂ ಏನೂ ತೊಂದರೆಯಾಗುವುದಿಲ್ಲವೆಂದು ಸ್ಥಳೀಯರು ಹೇಳುತ್ತಾರೆ.

ನವರಾತ್ರಿಯ ಒಂಭತ್ತು ದಿನ ಈ ದೇವಿಗೆ ವಿವಿಧ ಬಗೆಯ ಅಲಂಕಾರ ಮಾಡಲಾಗುತ್ತದೆ. ಅದನ್ನು ನೋಡುವುದೇ ಬಲು ಸೊಗಸು. ಯುಗಾದಿ ಕಳೆದ ಹದಿನೈದು ದಿನಕ್ಕೆ ದೇವಿಯ ಜಾತ್ರೆಯು ನಡೆಯುತ್ತದೆ.

ಕಾರೇಮುಳ್ಳಿನ ಮೇಲೆ ಭಕ್ತರ ನಡಿಗೆ !

ದೇವರಿಗಾಗಿ ಭಕ್ತರು ಎಂತಹ ಸಾಹಸಗಳಿಗೂ ಸಹ ಎದೆಗುಂದುವುದಿಲ್ಲ. ಕೆಂಡದ ಮೇಲೆ ನಡೆಯುವುದು, ಎಣ್ಣೆಯ ಮೇಲೆ ಹತ್ತುವುದು ಮುಂತಾದ ಆಚರೆಗಳ ಬಗ್ಗೆ ನಾವು ಕೇಳಿದ್ದೇವೆ. ಆದರೆ ಇಲ್ಲಿನ ಜನರು ರಾಶಿ ಹಾಕಿರುವ ಕಾರೇಮುಳ್ಳಿನ ಮೇಲೆ ಯಾವುದೇ ಭಯವಿಲ್ಲದೆ ನಡೆಯುತ್ತಾರೆ.

ಇಂತಹ ವಿಶೇಷ ಆಚರಣೆಯನ್ನು ನೋಡಬೇಕೆಂದರೆ ನೀವು  ದಸರೀಘಟ್ಟಕ್ಕೆ ಬರಬೇಕು. ಈ ಗ್ರಾಮದಲ್ಲಿ ಪ್ರತಿ ವರ್ಷ ವಿಜಯದಶಮಿಯ ದಿನದಂದು ಚೌಡೇಶ್ವರಿಯ  ಮುಳ್ಳು ಗದ್ದಿಗೆ  ಎಂಬ ಆಚರಣೆ ನಡೆಯುತ್ತದೆ.

ರಾಶಿ ಹಾಕಿದ ಕಾರೇಮುಳ್ಳುಗಳ ಮೇಲೆ ದೇವರು ಹೊತ್ತವರು ಮೊದಲು ನಡೆಯುತ್ತಾರೆ. ಆನಂತರ ಇಲ್ಲಿ ಸೇರುವ ನೂರಾರು ಭಕ್ತರು ನಡೆದು ಹೋಗಿ ಸಂಭ್ರಮ ಪಡುತ್ತಾರೆ.

ಆ ದಿನ ಈ ಗ್ರಾಮದ ಜನರು ಕಾಡಿಗೆ ತೆರಳಿ ಕಾರೇ ಮುಳ್ಳುಗಳನ್ನು ಕಡಿದು ನಾಲ್ಕು ಟ್ರಾಕ್ತ$rರ… (ಮಿನಿ ಲಾರಿ ) ತುಂಬಾ ಮುಳ್ಳುಗಳನ್ನು ತಂದು ದೇವಾಲಯದ ಆವರಣದಲ್ಲಿ ರಾಶಿ ಹಾಕುತ್ತಾರೆ. ಅನಂತರ ಈ ಮುಳ್ಳಿನ ರಾಶಿಗೆ ಅರ್ಚಕರು ಬಂದು ಪೂಜೆ ಮಾಡುತ್ತಾರೆ.

ಮುಳ್ಳಿನ ರಾಶಿಯ ನಾಲ್ಕು ದಿಕ್ಕುಗಳಿಗೆ ಪೂಜೆ ಮುಗಿದ ಬಳಿಕ ನಾಲ್ಕು ಜನ ಭಕ್ತರು ಚೌಡೇಶ್ವರಿಯ ಉತ್ಸವ ಮೂರ್ತಿಯನ್ನು ತಮ್ಮ ಹೆಗಲ ಮೇಲೆ ಹೊತ್ತು, ಆವೇಶಭರಿತವಾಗಿ ಮುಳ್ಳಿನ ರಾಶಿಯ ಮೇಲೆ ಹತ್ತಿ ನಡೆದು ಬರುತ್ತಾರೆ. ಹಾಗೇ ಬಂದ ದೇವಿಗೆ ಸ್ವಾಮೀಜಿಗಳು ಹಾರ ಹಾಕುತ್ತಾರೆ. ಆರೇಳು ಬಾರಿ ಈ ರೀತಿಯ ಸಂಪ್ರದಾಯ ಮುಂದುವರೆಯುತ್ತದೆ. ಇಲ್ಲಿನ ಮತ್ತೂಂದು ವಿಶೇಷವೆಂದರೆ ಈ ಆಚರಣೆ ಆದಿಚುಂಚನಗಿರಿ ಸ್ವಾಮೀಜಿಗಳ ಸಮ್ಮುಖದಲ್ಲಿ ನಡೆಯುತ್ತದೆ. ಇದನ್ನು ನೋಡಲು ಸಾವಿರಾರು ಜನರು ಅಂದು ಸೇರುತ್ತಾರೆ.

ದೇವಿಯನ್ನು ಹೊತ್ತವರು ಮುಳ್ಳು ತುಳಿದ ನಂತರ ಇಲ್ಲಿನ ನೂರಾರು ಭಕ್ತರು ಕಾರೇ ಮುಳ್ಳುಗಳನ್ನು ತುಳಿಯುತ್ತಾರೆ.

ಇಲ್ಲಿ ಮುಳ್ಳುಗಳ ರಾಶಿ ತುಳಿಯುವ ಜನರಿಗೆ ಇದುವರೆಗೂ ಸಹ ಯಾವುದೇ ತೊಂದರೆಯಾಗಿಲ್ಲವಂತೆ. 

 ತಲುಪುವ ಹಾದಿ.  ತಿಪಟೂರು ತಾಲೂಕು ಕೇಂದ್ರದಿಂದ ದಕ್ಷಿಣಕ್ಕೆ ಕೇವಲ ಹತ್ತು ಕಿಲೋಮೀಟರ… ದೂರದಲ್ಲಿದೆ ದಸರೀಘಟ್ಟ. ಬೆಂಗಳೂರಿನಿಂದ ಸುಮಾರು 150 ಕಿ.ಮೀ. ದೂರವಿದ್ದು, ತಿಪಟೂರಿಗೆ ಬಸ್‌ ಮತ್ತು ರೈಲುಗಳ ಸೌಲಭ್ಯವಿದೆ. ಈ ಕ್ಷೇತ್ರದಲ್ಲಿ ಭಕ್ತಾದಿಗಳಿಗೆ ಊಟದ ವ್ಯವಸ್ಥೆ ಕೂಡ ಇದೆ. 

– ದಂಡಿನಶಿವರ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next