ಮೈಸೂರು: ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಪಾರಂಪರಿಕ ಕಟ್ಟಡಗಳ ಕುರಿತು ಜನಸಾಮಾನ್ಯರು ಹಾಗೂ ಪ್ರವಾಸಿಗರಿಗೆ ಪರಿಚಯ ಮಾಡಿಕೊಡುವ ಉದ್ದೇಶದಿಂದ ಶನಿವಾರ ಆಯೋಜಿಸಿದ್ದ ಪಾರಂಪರಿಕ ಟಾಂಗಾ ಸವಾರಿ ಗಮನ ಸೆಳೆಯಿತು.
ದಸರಾ ಮಹೋತ್ಸವದ ಅಂಗವಾಗಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಪಾರಂಪರಿಕ ಟಾಂಗಾ ಸವಾರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಗರದ ಪುರಭವನದಿಂದ ಆರಂಭಗೊಂಡ ಟಾಂಗಾ ಸವಾರಿಗೆ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಚಾಲನೆ ನೀಡಿದರು.
ಟಾಂಗಾ ಸವಾರಿಯಲ್ಲಿ ಪಾಲ್ಗೊಂಡ ದಂಪತಿಗಳಿಗೆ ಅರಿಶಿಣ, ಕುಂಕುಮ, ಹಸಿರು ಬಳೆ, ಮೈಸೂರು ಪೇಟ, ಮಲ್ಲಿಗೆ ಹೂವು, ಮೈಸೂರು ಪಾಕ್, ಮೈಸೂರು ಬದನೆ, ಮೈಸೂರು ವಿಳ್ಳೆದೇಲೆ ಇನ್ನಿತರ ವಸ್ತುಗಳಿದ್ದ ಬಾಗಿನ ನೀಡುವ ಮೂಲಕ ಟಾಂಗಾ ಸವಾರಿಗೆ ಚಾಲನೆ ನೀಡಲಾಯಿತು.
ಟಾಂಗಾ ಸವಾರಿ ಹಿನ್ನೆಲೆಯಲ್ಲಿ ಪಾರಂಪರಿಕ ಉಡುಗೆಯಲ್ಲಿ ಕಂಗೊಳಿಸುತ್ತಿದ್ದ ದಂಪತಿಗಳು, ಕುದುರೆ ಗಾಡಿಯನ್ನೇರಿ ನಗರದ ಪುರಾತನ ಕಟ್ಟಡಗಳ ಇತಿಹಾಸ, ಹಿನ್ನೆಲೆಯನ್ನು ತಿಳಿದುಕೊಂಡರು. ಒಂದು ಟಾಂಗಾದಲ್ಲಿ ಎರಡು ಜೋಡಿಗಳಂತೆ 65-70 ಜೋಡಿಗಳು ಟಾಂಗಾ ಸವಾರಿ ಮಾಡುವ ಮೂಲಕ ಪಾರಾಂಪರಿಕ ಕಟ್ಟಡ ವೀಕ್ಷಣೆ ಮಾಡಿದರು.
ಪ್ರಮುಖವಾಗಿ ಮಹಾರಾಜರು ಇಷ್ಟಪಡುವ ಶಾಪಸಂದ್ ಟಾಂಗಾ, ಸಾರೋಟ್ ಟಾಂಗಾ ಹಾಗೂ ಬಿಜಾಪುರ ಶೈಲಿಯ ಟಾಂಗಾ ಗಾಡಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವು. ಪುರಭವದಿಂದ ಪ್ರಾರಂಭವಾದ ಟಾಂಗಾ ಸವಾರಿ ಚಾಮರಾಜ ಒಡೆಯರ್ ವೃತ್ತ , ಕೆ.ಆರ್. ವೃತ್ತ, ಲ್ಯಾನ್ಸ್ ಡೌನ್ ಕಟ್ಟಡ, ಜಗನ್ಮೋಹನ್ ಅರಮನೆ, ಪರಕಾಲ ಮಠ, ಕ್ರಾಫರ್ಡ್ ಹಾಲ್ ಸೇರಿದಂತೆ ಮೈಸೂರಿನ ಮುಖ್ಯ ಬೀದಿಗಳಲ್ಲಿ ಸಂಚರಿಸಿ ಮೈಸೂರು ಮೆಡಿಕಲ್ ಕಾಲೇಜು ಹತ್ತಿರ ಸಮಾಪ್ತಿಗೊಂಡಿತು.
ಎರಡೂವರೆ ಗಂಟೆಗಳ ಕಾಲ ನಡೆದ ಟಾಂಗಾ ಸವಾರಿಯಲ್ಲಿ ನಗರದಲ್ಲಿರುವ 20ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳ ವೀಕ್ಷಣೆ ಮಾಡಿ ಮಾಹಿತಿ ಪಡೆದರು. ಇತಿಹಾಸ ಹಾಗೂ ಪುರಾತತ್ವ ತಜ್ಞರಾದ ಡಾ. ಎನ್.ಎಸ್.ರಂಗರಾಜು, ಹಿರಿಯ ಪತ್ರಕರ್ತರ ಈಚನೂರು ಕುಮಾರ್ ಅವರು ದಂಪತಿಗಳಿಗೆ ಮೈಸೂರಿನ ಪಾರಂಪರಿಕ ಕಟ್ಟಡಗಳ ಪರಿಚಯ ಮಾಡಿಕೊಟ್ಟರು.