Advertisement
ನಾಡಹಬ್ಬ ದಸರೆಯ ಅಂಗವಾಗಿ ಶನಿವಾರ ಆಯೋಜಿಸಿದ್ದ ಓಪನ್ ಸ್ಟ್ರೀಟ್ ಫೆಸ್ಟಿವಲ್ ಎಲ್ಲರ ಪಾಲಿಗೂ ಹಬ್ಬವಾಗಿತ್ತು. ದಸರಾ ಮಹೋತ್ಸವದ ಅಂಗವಾಗಿ ನಗರದಲ್ಲಿ ನಡೆಯುತ್ತಿರುವ ವಿವಿಧ ಕಾರ್ಯಕ್ರಮಗಳ ಜತೆಗೆ ಓಪನ್ ಸ್ಟ್ರೀಟ್ ಫೆಸ್ಟಿವಲ್ ನಾಡಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು.
Related Articles
Advertisement
ಸೈಕಲ್-ಬೈಕ್ ಸ್ಟಂಟ್: ಸ್ಟ್ರೀಟ್ ಫೆಸ್ಟಿವಲ್ ಅಂಗವಾಗಿ ನಡೆದ ಸೈಕಲ್ ಹಾಗೂ ಬೈಕ್ ಸ್ಟಂಟ್ ಎಲ್ಲರ ಆಕರ್ಷಣೆಯನ್ನು ಹೆಚ್ಚಿಸಿತು. ಭಾರೀ ಜನದಟ್ಟಣೆಯ ರಸ್ತೆಯಲ್ಲೂ ಹಲವು ಸಾಹಸಿಗರು ಬೈಕ್ ಹಾಗೂ ಸೈಕಲ್ ಸ್ಟಂಟ್ ಪ್ರದರ್ಶನ ನೀಡುತ್ತಾ ಗಮನ ಸೆಳೆದರು.
ಇನ್ನೊಂದೆಡೆ ಮರಗಾಲು ಗೊಂಬೆ, ಚಂಡೆ, ವೀರಗಾಸೆ, ಹುಲಿವೇಷಧಾರಿಗಳ ಕುಣಿತ, ಕೀಲು ಕುದುರೆ ವೇಷಾಧಾರಿಗಳು ಇದೇ ಮುಂತಾದ ಕಲಾತಂಡಗಳು ಕಾರ್ಯಕ್ರಮಕ್ಕೆ ಮೆರಗು ತಂದವು. ಪಾಲಕರ ಜತೆ ಬಂದ ಚಿಣ್ಣರು, ಪುಟ್ಟ ಪುಟ್ಟ ಮಕ್ಕಳು ತಾವೇನು ಕಡಿಮೆ ಎಂಬಂತೆ ಗೊಂಬೆಗಳನ್ನು ಆಡಿಸುತ್ತಾ ಮಕ್ಕಳು ಅವುಗಳ ಜತೆ ಹೆಜ್ಜೆ ಹಾಕಿ ಖುಷಿಪಟ್ಟವು. ಅವುಗಳೊಂದಿಗೆ ಫೋಟೋಗೆ ಪೋಸ್ ಕೂಡ ನೀಡಿದವು.
ಸೆಲ್ಫಿ ಕ್ರೇಜ್ ಜೋರು: ಸ್ಟ್ರೀಟ್ ಫೆಸ್ಟಿವಲ್ ಸಂಭ್ರಮದಲ್ಲಿ ಪಾಲ್ಗೊಂಡ ಯುವಜನತೆ ಸಾಂಸ್ಕೃತಿಕ ಮೆರಗು ಹೆಚ್ಚಿಸಿದ್ದ ಮರಗಾಲು ಗೊಂಬೆ, ಚಂಡೆ, ವೀರಗಾಸೆ, ಹುಲಿವೇಷಧಾರಿಗಳೊಂದಿಗೆ ಕುಣಿತ, ಕೀಲು ಕುದುರೆ ಕಲಾವಿದರ ಜತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ದೃಶ್ಯಗಳು ನಿರಂತರವಾಗಿ ಕಂಡು ಬಂದವು. ವಿವಿಧ ಕಾಲೇಜಿನ ವಿದ್ಯಾರ್ಥಿಗಳು ವೃತ್ತಾಕಾರವನ್ನು ರಚಿಸಿಕೊಂಡು ಕುಣಿಯುವುದಲ್ಲದೇ, ಗುಂಪು ಗುಂಪಾಗಿ ನಿಂತು ಸೆಲ್ಫಿಗೆ ವಿವಿಧ ಭಂಗಿಯಲ್ಲಿ ಪೋಸ್ ಕೊಡುತ್ತಿದ್ದ ದೃಶ್ಯಗಳು ನೋಡುಗರನ್ನು ಆಕರ್ಷಿಸುತ್ತಿದ್ದವು.
ಫೆಸ್ಟಿವಲ್ ವಿಶೇಷತೆ: ಸ್ಟ್ರೀಟ್ ಫೆಸ್ಟಿವಲ್ ಅಂಗವಾಗಿ ನಡೆದ ಹಲವು ಕಾರ್ಯಕ್ರಮಗಳು ಈ ಬಾರಿಯೂ ಬೆಳಗ್ಗಿನಿಂದ ರಾತ್ರಿವರೆಗೂ ನಡೆಯಿತು. ಮ್ಯೂಸಿಕ್ ಬ್ಯಾಂಡ್, ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರನ್ನು ಸೆಳೆದವು. ಮಕ್ಕಳ ಚಿತ್ರಕಲಾ ಶಿಬಿರ, ಸ್ಟ್ರೀಟ್ ಆರ್ಟ್, ಮಕ್ಕಳ ಆಟಿಕೆ ವಿಭಾಗಗಳನ್ನು ರೂಪಿಸಲಾಗಿತ್ತು.
ರಸ್ತೆಯ ಎರಡು ಬದಿಯಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ ವಿವಿಧ ಕಲಾ ತಂಡಗಳಿಂದ ನೃತ್ಯ, ಸಂಗೀತ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. 3ಡಿ ಆರ್ಟ್, ಚಿತ್ರಸಂತೆ, ಫೇಸ್ ಪೇಂಟಿಂಗ್, ಡ್ರಮ್ ಜಾಮ್, ಸ್ಕೇಟಿಂಗ್, ಟ್ಯಾಟೋ ಶಾಪ್, ಪೇಪರ್ ಆರ್ಟ್, ವಾಕ್ ಮ್ಯಾನ್, ರೋಡ್ ಪೇಂಟ್, 15 ಫುಡ್ ಟ್ರಕ್ ತೆರೆಯಲಾಗಿತ್ತು.
ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಆರ್ಟ್ ಎಂಬ ತಂಡ ನೃತ್ಯ ಪ್ರದರ್ಶನ ನೀಡುವುದಲ್ಲದೇ, ಪಾಲಿಕೆ ವತಿಯಿಂದಲೂ ಸ್ವತ್ಛತೆ ಕುರಿತು ಜಾಗೃತಿ ಮೂಡಿಸಲು ಮಳಿಗೆ ನಿರ್ಮಿಸಲಾಗಿತ್ತು. ಮಕ್ಕಳ ಚಿತ್ರಕಲಾ ಶಿಬಿರದಲ್ಲಿ ಪುಟಾಣಿ ಮಕ್ಕಳು ವಿವಿಧ ಚಿತ್ರಗಳನ್ನು ಬಿಡಿಸಿ ಆನಂದಿಸಿದರು.
ವೈವಿಧ್ಯಮಯ ಸ್ಟಾಲ್‌ಗಳ ಆಕರ್ಷಣೆ: ನಗರದಲ್ಲಿ ಮೂರನೇ ಬಾರಿಗೆ ನಡೆದ ಓಪನ್ ಸ್ಟ್ರೀಟ್ ಫೆಸ್ಟಿವಲ್‌ಗೆ ಭಾರೀ ಜನಮನ್ನಣೆ ಲಭಿಸಿತು. ಕಾರ್ಯಕ್ರಮದಲ್ಲಿ ಮೈಸೂರಿಗರ ಜತೆಗೆ ದಸರಾ ವೀಕ್ಷಣೆಗೆಂದು ಹೊರ ರಾಜ್ಯಗಳಿಂದ ಆಗಮಿಸಿದ್ದ ಪ್ರವಾಸಿಗರು ಪಾಲ್ಗೊಂಡಿದ್ದರು.
ಸ್ಟ್ರೀಟ್ ಫೆಸ್ಟಿವಲ್‌ನಲ್ಲಿ ಪೇಂಟಿಂಗ್, ಬಟ್ಟೆ, ಮಕ್ಕಳ ಆಟಿಕೆಗಳು, ಯುವತಿಯರ ವಸ್ತ್ರಾಲಂಕಾರದ ಸಾಮಗ್ರಿಗಳು, ಐಸ್‌ಕ್ರೀಂ, ವಿದೇಶಿ ತಿನಿಸುಗಳ ಮಳಿಗೆಗಳು ಸೇರಿದಂತೆ 90ಕ್ಕೂ ಹೆಚ್ಚು ವೈವಿಧ್ಯಮಯ ವಸ್ತುಗಳ ಮತ್ತು ತಿನಿಸುಗಳ ಸ್ಟಾಲ್‌ಗಳನ್ನು ಹಾಕಲಾಗಿತ್ತು. ಇದರಿಂದ ಫೆಸ್ಟಿವಲ್‌ನಲ್ಲಿ ಭಾಗವಹಿಸಿದವರು ಸಂಭ್ರಮದ ಕ್ಷಣಗಳನ್ನು ಕಳೆಯುವ ಜತೆಗೆ ಶಾಪಿಂಗ್ ಮಾಡುತ್ತಾ ಖುಷಿಪಟ್ಟರು.