ಮೈಸೂರು: ಸೆ.30ರಿಂದ ಅ.4ರವರೆಗೆ ಜೀವಣ್ಣರಾಯನ ಕಟ್ಟೆ ಮೈದಾನದಲ್ಲಿ ಮಹಿಳಾ ಮತ್ತು ಮಕ್ಕಳ ದಸರಾ ನಡೆಯಲಿದ್ದು, 5 ದಿನಗಳ ಕಾಲ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಉಪ ಸಮಿತಿಯ ಉಪ ವಿಶೇಷಾಧಿಕಾರಿ ಡಾ.ಪ್ರೇಮ್‌ಕುಮಾರ್ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 30ರಂದು ಬೆಳಗ್ಗೆ 7.30 ರಿಂದ 9.30ರವರೆಗೆ ಅಂಬಾವಿಲಾಸ ಅರಮನೆ ಮುಂಭಾಗ ರಂಗೋಲಿ ಚಿತ್ತಾರ ಕಾರ್ಯಕ್ರಮ ನಡೆಯಲಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು. ಬೆಳಗ್ಗೆ 11ಗಂಟೆಗೆ ಜೆ.ಕೆ.ಮೈದಾನದಲ್ಲಿ ಮಹಿಳಾ ದಸರಾ ಉದ್ಯಮ ಸಂಭ್ರಮ, ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳು ಹಾಗೂ ಮಹಿಳಾ ಉದ್ಯಮಿಗಳು ತಯಾರಿಸಿದ ವಸ್ತುಗಳ ಪ್ರದರ್ಶನ, ಮಾರಾಟ ಮೇಳವನ್ನು ಸಚಿವರು ಉದ್ಘಾಟಿಸಲಿದ್ದಾರೆ ಎಂದರು.
ಅ.2ರಂದು ಅಂಗನವಾಡಿ ಮಕ್ಕಳಿಂದ ಚಿಣ್ಣರ ದಸರಾ ಹಾಗೂ ವೇಷಭೂಷಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, 3ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿಶೇಷಚೇತನ ಮಕ್ಕಳಿಂದ ಪ್ರತಿಭಾ ಪ್ರದರ್ಶನ, 4ರಂದು ಕಿರುತೆರೆಯ ಒಗ್ಗರಣೆ ಡಬ್ಬಿ ಕಾರ್ಯಕ್ರಮ ಖ್ಯಾತಿಯ ಮುರಳಿ ನೇತೃತ್ವದಲ್ಲಿ ಸವಿರುಚಿ ಒಲೆ ರಹಿತ ಅಡುಗೆ ಸ್ಪರ್ಧೆ, ಚುಟುಕು ಹಾಸ್ಯ ಸ್ಪರ್ಧೆ ಹಾಗೂ ದಂಪತಿಗಳ ಸ್ಪರ್ಧೆ ನಡೆಯಲಿದೆ ಎಂದರು.
ಅ.5ರಂದು ಮೈಸೂರಿನಲ್ಲಿ ಚಿತ್ರಸಂತೆ: ಮೈಸೂರು ದಸರಾ ಮಹೋತ್ಸವ ಅಂಗವಾಗಿ ಜಿಲ್ಲಾಡಳಿತದ ಸಹಯೋಗದೊಂದಿಗೆ ಪ್ರವಾಸೋದ್ಯಮ ಇಲಾಖೆ ವತಿಯಿಂದ ಅ.5ರಂದು ಬೆಳಗ್ಗೆ 8ಗಂಟೆಗೆ ಚಿತ್ರಸಂತೆ ಕಾರ್ಯಕ್ರಮವನ್ನು ಮೈಸೂರಿನ ಕೃಷ್ಣರಾಜ ಬುಲೇವಾರ್ಡ್ ರಸ್ತೆಯಲ್ಲಿ ಆಯೋಜಿಸಲಾಗಿದೆ.
ಆಸಕ್ತರು ಅ.2 ರವರೆಗೆ ಸಂಜೆ 4 ಗಂಟೆಯೊಳಗೆ ಅರ್ಜಿಗಳನ್ನು ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರ ಕಚೇರಿ, 2, ಹೋಟೆಲ್ ಮಯೂರ ಹೊಯ್ಸಳ ಕಾಂಪ್ಲೆಕ್ಸ್, ಜೆಎಲ್‌ಬಿ ರಸ್ತೆ ಇಲ್ಲಿ ಸಲ್ಲಿಸುವುದು. ಚಿತ್ರಸಂತೆಯಲ್ಲಿ ಭಾಗವಹಿಸಿ ತಮ್ಮ ಕಲಾ ಪ್ರತಿಭೆ, ಕಲಾ ಪರಿಕರಗಳನ್ನು ಪ್ರದರ್ಶಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ದೂ.0821-2422096 ಅಥವಾ ಸಂಪರ್ಕಿಸಬಹುದು ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.