Advertisement

“ವೈಚಾರಿಕತೆಯ ಚಿಲುಮೆ ದಾಸ ಸಾಹಿತ್ಯ”

03:44 PM Sep 13, 2022 | Team Udayavani |

ಬೀದರ: ಜ್ಞಾನ ಭಕ್ತಿ ವೈರಾಗ್ಯಗಳ ಧುರಿಣರಾದ ದಾಸರು, ವೈಚಾರಿಕತೆ ಬಗ್ಗೆ ಸ್ಪಷ್ಟವಾದ ನಿಲುವನ್ನು ಹೊಂದಿದ್ದರು. ಹರಿದಾಸ ಸಾಹಿತ್ಯದಲ್ಲಿ ವೈಚಾರಿಕತೆ ತುಂಬಿ ತುಳುಕುತ್ತಿದೆ. ತಾಂತ್ರಿಕ, ವ್ಯವಹಾರಿಕ, ಅತ್ಯಾಧುನಿಕ ಲೋಕದಲ್ಲಿ ಹರಿದಾಸರ ಎರಡೇ ಸಾಲುಗಳು ಆಧುನಿಕ ಘೋಷ ವಾಕ್ಯಗಳಾಗಿವೆ ಎಂದು ಸೇಡಂನ ದಾಸ ಸಾಹಿತ್ಯ ವಿದ್ವಾಂಸ ಡಾ| ವಾಸುದೇವ ಅಗ್ನಿಹೋತ್ರಿ ನುಡಿದರು.

Advertisement

ಅಖೀಲ ಭಾರತ ದಾಸ ಸಾಹಿತ್ಯ ಪರಿಷತ್‌ ವತಿಯಿಂದ ನಗರದ ಕರುನಾಡು ಸಾಂಸ್ಕೃತಿಕ ಭವನದಲ್ಲಿ ಡಾ| ರೇಣುಕಾದೇವಿ ಎಂ ಸ್ವಾಮಿರವರ “ದಾಸ ಸಾಹಿತ್ಯದಲ್ಲಿ ವೈಚಾರಿಕತೆ’ ಕೃತಿ ಅವಲೋಕನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹರಿದಾಸ ಸಾಹಿತ್ಯವು ವೈಚಾರಿಕ ನೆಲೆಯಲ್ಲಿ ಬಂದಿರುವುದರಿಂದ ಶಾಶ್ವತವಾಗಿ ಉಳಿದಿದೆ. ಜ್ಞಾನ, ವಿಜ್ಞಾನ, ತಂತ್ರಜ್ಞಾನ, ಆರ್ಥಿಕತೆ, ನೈತಿಕತೆ , ಪರಿಸರ ಎಲ್ಲವೂ ಒಳಗೊಂಡಂತೆ ಮನುಕುಲದ ಹಿತ ಸಹಿತವಾದ ವೈಚಾರಿಕತೆಯ ಚಿಲುಮೆಯೇ ದಾಸ ಸಾಹಿತ್ಯ. ಅಚ್ಚಗನ್ನಡದಲ್ಲಿ ನಿಚ್ಚ ನೆನೆಯುವ, ಹಚ್ಚು ಹಸುರಾದ ನುಡಿಗಳು ಇದರಲ್ಲಿದೆ ಎಂದರು.

ಸಹಾಯಕ ಪ್ರಾಧ್ಯಾಪಕ ಡಾ| ಸುನಿತಾ ಕೂಡ್ಲಿಕರ್‌ ಅವರು ಕೃತಿ ಅವಲೋಕನ ಮಾಡುತ್ತಾ ಮಾನವನ ಅಜ್ಞಾನ, ಅಂಧಾಕಾರ ಅಳಸಿ, ದೇಹ, ಮನಸ್ಸು, ಆತ್ಮಗಳಲ್ಲಿಯ ಕೆಟ್ಟ ಭಾವನೆಗಳನ್ನು ಹೊಗಲಾಡಿಸಿ, ಲೋಕದ ಅಂಕುಡೊಂಕುಗಳನ್ನು ತಿದ್ದಿ, ವರ್ಗ ಭೇದ ರಹಿತದ ಹೊಸ ಸಮಾಜವನ್ನು ಕಟ್ಟಲು ಹಿರಿದಾಸರು ವೈಚಾರಿಕತೆ ಹೊನಲು ಹರಿಸಿದ್ದಾರೆ. ಇಂತಹ ದಾಸರ ಸಮಗ್ರ ಚಿಂತನೆಗಳ ಸಾರವನ್ನು ದಾಸ ಸಾಹಿತ್ಯದಲ್ಲಿ ವೈಚಾರಿಕತೆ ಗ್ರಂಥದಲ್ಲಿ ಹುದುಗಿವೆ ಎಂದು ಹೇಳಿದರು.

ಸಾಹಿತಿ ಡಾ| ರೇಣುಕಾದೇವಿ ಎಂ ಸ್ವಾಮಿ ಮಾತನಾಡಿ, ಜನ ಸಾಮಾನ್ಯರನ್ನು ಉನ್ನತ ಜೀವನದತ್ತ ಪ್ರೇರೇಪಿಸಿ, ಜಾತಿ, ಮತ, ಪಂಥಗಳನ್ನು ಮೀರಿ ಲೋಕದ ಮಧ್ಯ ನಿಂತು ಮಾನವೀಯ ಮೌಲ್ಯಗಳುನ್ನು ಹರಿದಾಸರು ನೀಡಿದ್ದಾರೆ ಎಂದು ನುಡಿದರು.

ದಾಸ ಸಾಹಿತ್ಯ ಪರಿಷತ್‌ ರಾಷ್ಟ್ರೀಯ ಅಧ್ಯಕ್ಷ ಡಾ| ರವೀಂದ್ರ ಲಂಜವಾಡಕರ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ರವೀಂದ್ರ ಚಟ್ನಳ್ಳಿ, ಪ್ರೌಢಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ ಬಿರಾದಾರ ಇದ್ದರು. ಮಹೇಶ ಮೈಲೂರಕರ್‌ ಕೀರ್ತನೆ ಗಾಯನ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next