ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ(Renukaswamy Case) ಜೈಲಿನಲ್ಲಿರುವ ನಟ ದರ್ಶನ್(Actor Darshan) ಅವರ ಜಾಮೀನು ಅರ್ಜಿಯ ವಿಚಾರಣೆ ಸೋಮವಾರ(ಸೆ.30ರಂದು) ನಡೆದಿದೆ.
ಚಿತ್ರದುರ್ಗದ ರೇಣುಕಾಸ್ವಾಮಿಯ ಹತ್ಯೆ ಪ್ರಕರಣದಲ್ಲಿ ದರ್ಶನ್ ಬಂಧನವಾಗಿ 100 ದಿನ ಕಳೆದಿದೆ. ಮೊದಲು ಪರಪ್ಪನ ಅಗ್ರಹಾರ ಆ ಬಳಿಕ ಈಗ ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಜಾಮೀನು ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ.
57ನೇ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ನಡೆದಿದೆ. ದರ್ಶನ್ ಪರ ವಕೀಲರಾದ ಸುನೀಲ್ ವಾದ ಮಂಡನೆಗೆ ಇನ್ನಷ್ಟು ಕಾಲಾವಕಾಶಬೇಕೆಂದು ನ್ಯಾಯಾಧೀಶರ ಮುಂದೆ ಹೇಳಿದ್ದಾರೆ.
ಇದನ್ನೂ ಓದಿ: Toxic Movie: ಯಶ್ ʼಟಾಕ್ಸಿಕ್ʼ ಅಖಾಡಕ್ಕೆ ಖಡಕ್ ಬ್ರಿಟೀಷ್ ನಟ ಎಂಟ್ರಿ
ಅದರಂತೆ 57ನೇ ಸಿಟಿ ಸಿವಿಲ್ ಕೋರ್ಟ್ ವಿಚಾರಣೆಯನ್ನು ಅ.4ಕ್ಕೆ ಮುಂದೂಡಿದೆ.
ಆರೋಪ ಪಟ್ಟಿ ಸಲ್ಲಿಕೆಯಾದ ಬಳಿಕ ದರ್ಶನ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಸೋಮವಾರ ದರ್ಶನ್ ಅವರಿಗೆ ಜಾಮೀನು ಸಿಗಬಹುದೆಂಬ ನಿರೀಕ್ಷೆಯಲ್ಲಿ ಅನೇಕರಿದ್ದರು. ಆದರೆ ಅವರಿಗೆಲ್ಲ ಮತ್ತೆ ನಿರಾಸೆಯಾಗಿದೆ. ಪವಿತ್ರಾ ಗೌಡ , ರವಿಶಂಕರ್ ಜಾಮೀನು ಅರ್ಜಿ ವಿಚಾರಣೆ ಅ.4ಕ್ಕೆ ಮುಂದೂಡಿಕೆಯಾಗಿದೆ.
ಇದೇ ತಿಂಗಳ 21ರಂದು ದರ್ಶನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿಗೆ ತಕರಾರು ಸಲ್ಲಿಸಲು ಎಸ್ಪಿಪಿ ಅವರು ತಡ ಮಾಡಿದ್ದ ಕಾರಣ ಎರಡು ಬಾರಿ ವಿಚಾರಣೆ ಮುಂದೂಡಿ ಸೆಪ್ಟೆಂಬರ್ 27ಕ್ಕೆ ವಿಚಾರಣೆ ನಿಗದಿಯಾಗಿತ್ತು. ಇದೀಗ ಮತ್ತೊಮ್ಮೆ ವಾದಮಂಡನೆಗೆ ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಲಾಗಿದೆ.
ಈಗಾಗಲೇ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ15 ಆರೋಪಿ ಕಾರ್ತಿಕ್, ಎ17 ಆರೋಪಿ ನಿಖಿಲ್‌ಗೆ 57ನೇ ಸಿಸಿಎಚ್ ಕೋರ್ಟ್ ಜಾಮೀನು ನೀಡಿದ್ದು, ಎ16 ಆರೋಪಿ ಕೇಶವಮೂರ್ತಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.