ದರ್ಶನ್ ಗರಂ ಆಗಿದ್ದಾರೆ. ಅದು ತೆಲುಗು ಚಿತ್ರರಂಗದ ವಿರುದ್ಧ. ದರ್ಶನ್ ಅವರ “ರಾಬರ್ಟ್’ ಚಿತ್ರ ಮಾರ್ಚ್ 11 ರಂದು ಬಿಡುಗಡೆಯನ್ನು ಘೋಷಿಸಿಕೊಂಡಿದೆ. ಅದು ಕನ್ನಡ ಹಾಗೂ ತೆಲುಗಿನಲ್ಲಿ. ಆದರೆ, ತೆಲುಗು ಚಿತ್ರರಂಗದಲ್ಲಿ ಮಾರ್ಚ್ 11ರಂದು “ರಾಬರ್ಟ್’ ಸಿನಿಮಾ ಬಿಡುಗಡೆಗೆ ಅವಕಾಶ ನೀಡುತ್ತಿಲ್ಲ ಎಂದು ತೆಲುಗು ಚಿತ್ರರಂಗ ಹಾಗೂ ಅಲ್ಲಿನ ವಾಣಿಜ್ಯ ಮಂಡಳಿ ವಿರುದ್ಧ ನಟ ದರ್ಶನ್ ಹಾಗೂ “ರಾಬರ್ಟ್’ ನಿರ್ಮಾಪಕ ಉಮಾಪತಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಶುಕ್ರವಾರ ದೂರು ನೀಡಿದ್ದಾರೆ.
ಅಲ್ಲಿನ ನಟರ ಸಿನಿಮಾಗಳು ಡಬ್ ಆಗಿ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿವೆ. ಆದರೆ, ನಮ್ಮ ಕನ್ನಡ ಸಿನಿಮಾಗಳಿಗೆ ಅಲ್ಲಿ ಬಿಡುಗಡೆಗೆ ಅವಕಾಶ ಕೊಡುತ್ತಿಲ್ಲ. ಕೂಡಲೇ ಮಂಡಳಿ ಮಧ್ಯ ಪ್ರವೇಶಿಸಿ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಮನವಿ ಮಾಡಿದ್ದಾರೆ.
ನಮ್ಮಲ್ಲಿ ಇರೋರು ಕನ್ನಡಾಭಿಮಾನ ಬೆಳೆಸಿಕೊಳ್ಳಬೇಕು: ವಾಣಿಜ್ಯ ಮಂಡಳಿ ಸಭೆಯಲ್ಲಿ ಮಾತನಾಡಿದ ದರ್ಶನ್, “ನಾವು ಯಾವುದೇ ಭಾಷೆಯ ಸಿನಿಮಾ ಬಂದರೂ ಅವರಿಗೆ ಅವಕಾಶ ಮಾಡಿಕೊಡುತ್ತೇವೆ. ಅವರಲ್ಲಿ ತೆಲುಗು, ತಮಿಳಿನಲ್ಲೇ ಮಾತನಾಡುತ್ತೇವೆ. ಆದರೆ ಅವರು ನಮಗೆ ಅವಕಾಶ ಕೊಡುತ್ತಿಲ್ಲ. ಮೊದಲು ನಮ್ಮಲ್ಲಿ ಇರೋರು ಕನ್ನಡಾಭಿಮಾನ ಬೆಳೆಸಿಕೊಳ್ಳಬೇಕು. ತಮಿಳು, ತೆಲುಗಿನವರಿಗೆ ಇರುವ ಭಾಷಾಭಿಮಾನ ನಮ್ಮವರಿಗೆ ಇಲ್ಲ’ ಎಂದು ನೇರವಾಗಿ ಹೇಳಿದ್ದಾರೆ.
ತಮ್ಮ ಸಿನಿಮಾ ಬಿಡುಗಡೆಗೆ ಅಡ್ಡಿಪಡಿಸುತ್ತಿರುವ ಬಗ್ಗೆ ಮಾತನಾಡಿದ ದರ್ಶನ್, “ಮಾರ್ಚ್ 11ರಂದು ಯಾವುದೋ ನಾಲ್ಕು ಸಿನಿಮಾಗಳಿವೆ. ನಿಮ್ಮ ಹೀರೋಗಳ ಸಿನಿಮಾ ಇಲ್ಲಿ ರಿಲೀಸ್ ಆದರೆ, ನಮ್ಮ ಹೀರೋಗಳಿಗೆ ತೊಂದರೆ ಆಗುತ್ತದೆ ಎಂದು ಅವರು ಹೇಳುತ್ತಾರೆ. ಹಾಗಾದರೆ ಅವರ ಹೀರೋಗಳ ಸಿನಿಮಾಗಳು ಬಿಡುಗಡೆಯಾದಾಗ ನಾವು ಆ ತೊಂದರೆ ತಗೋತ್ತಿವಿ. ಹಾಗಿರುವಾಗ ಕನ್ನಡ ಸಿನಿಮಾಗಳಿಗೆ ಯಾಕೆ ಅವಕಾಶ ಕೊಡುತ್ತಿಲ್ಲ. ಪರಭಾಷಾ ಚಿತ್ರರಂಗದವರಿಗೆ ಅವರ ಮಾರುಕಟ್ಟೆ ಕಬಳಿಸುತ್ತೇವೆ ಎಂಬ ಭಯ ಶುರುವಾಗಿದೆ. ಆರಂಭದಲ್ಲಿ ಅವರು ಒಂದೊಂದೇ ಸಿನಿಮಾ ಮೂಲಕ ಎಂಟ್ರಿ ಕೊಟ್ಟರು. ಈಗ ಅದ್ಧೂರಿಯಾಗಿ ಬಿಡುಗಡೆ ಮಾಡುತ್ತಾರೆ. ನಾವು ಹಾಗೇ ಮಾಡಬೇಕು. ನನಗೆ ಏನು ಸಮಸ್ಯೆ ಇಲ್ಲ, ನನ್ನದು 50 ಸಿನಿಮಾ ಆಯ್ತು. ಆದರೆ, ಮುಂದೆ ಬರುವ ಯಂಗ್‌ಸ್ಟಾರ್ ಕಥೆ ಏನು, ಇದು ಎಲ್ಲರೂ ಕುಳಿತು ಯೋಚನೆ ಮಾಡಬೇಕಾದ ವಿಚಾರ’ ಎಂದರು ದರ್ಶನ್.