ಲಕ್ನೋ: ಬ್ರಿಟಿಷರ ಕಾಲದಲ್ಲಿ ಭಾರತಕ್ಕೆ ಕಾಲಿಟ್ಟರೂ, ಕಾನನದ ಗಡಿ ದಾಟದೇ, ಅಭಿವೃದ್ಧಿಯ ಹಾದಿ ಕಾಣದೇ, ವಿದ್ಯುತ್ ಬೆಳಕನ್ನೇ ನೋಡದ ವಂಟಂಗಿಯ ಬುಡಕಟ್ಟು ಜನರ ಜೀವನದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಬೆಳಕಿನ ಮಂದಹಾಸ ಮೂಡಿದೆ. ಬರೋಬ್ಬರಿ 75 ವರ್ಷಗಳ ಬಳಿಕ ಈ ಜನರಿರುವ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ದೊರೆತಿದೆ.
ಉತ್ತರಪ್ರದೇಶದ ಗೊಂಡಾ ಜಿಲ್ಲೆಯ ರಾಮಗಢ ಎನ್ನುವ ಗ್ರಾಮ, ಟಿಕ್ರಿ ಅರಣ್ಯ ಶ್ರೇಣಿಯಲ್ಲಿದ್ದು, ನಗರ ಪಟ್ಟಣದಿಂದ 18 ಕಿ.ಮೀ. ದೂರವಿದೆ.
ಬ್ರಿಟಿಷರ ಅವಧಿಯಲ್ಲಿ ಅರಣ್ಯಗಳಲ್ಲಿನ ಕಾರ್ಯಾಚರಣೆ ಸಹಾಯವಾಗಲೆಂದು ವಂಟಂಗಿಯ ಎನ್ನುವ ಬುಡಕಟ್ಟು ಜನಾಂಗವನ್ನು ಕರೆತಂದು ಈ ಪ್ರದೇಶದಲ್ಲಿ ಇರಿಸಲಾಗಿದೆ. ಆ ಬಳಿಕ ಈ ಜನಾಂಗ ಇಲ್ಲಿಯೇ ನೆಲೆಯೂರಿದೆ. ಬುಡಕಟ್ಟು ಸಮುದಾಯದ ತಾಣವಾದ ಈ ಗ್ರಾಮದಲ್ಲಿ ಅಭಿವೃದ್ಧಿ ಮಾತ್ರ ಶೂನ್ಯವಾಗಿತ್ತು.
ಆದರೀಗ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಎಲ್ಲಾ ಬುಡಕಟ್ಟು ನಿವಾಸಿಗಳ ಅಭಿವೃದ್ಧಿಗೆ ಪಣತೊಟ್ಟಿದ್ದು, ಆ ಹಾದಿ ರಾಮಗಢ ಗ್ರಾಮವನ್ನೂ ತಲುಪಿದೆ. ಗ್ರಾಮದ ಅಭಿವೃದ್ಧಿಗೆ ಆಡಳಿತ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು, ರಸ್ತೆ ಸಂಪರ್ಕವೇ ಇಲ್ಲದ ಹಳ್ಳಿಗೆ ಇತ್ತೀಚೆಗೆ ರಸ್ತೆ ಸಂಪರ್ಕ ಕಲ್ಪಿಸಲಾಗಿತ್ತು. ಅರಣ್ಯ ಇಲಾಖೆಯ ಮನವಿ ಮೇರೆಗೆ ರಸ್ತೆಯಲ್ಲಿ ವಿದ್ಯುತ್ ಕಂಬಗಳನ್ನೂ ಸ್ಥಾಪಿಸಿ, ಈಗ ಇಡೀ ಗ್ರಾಮಕ್ಕೇ ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟಿದೆ. ಒಟ್ಟಾರೆ ರಾತ್ರಿವೇಳೆ ಕಾಡು ಪ್ರಾಣಿಗಳ ದಾಳಿಯಿಂದ ಬೇಸತ್ತ ಜನರು ಇನ್ನು ಸುರಕ್ಷಿತವಾಗಿರಲು ಈ ಕ್ರಮ ಸಹಾಯವಾಗಲಿದೆ ಎಂದು ಯೋಗಿ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.