Advertisement

ಡಾರ್ಕ್‌ ವೆಬ್‌ ಎಂಬ ಕರಾಳ ಲೋಕ!

06:15 PM Jul 09, 2018 | Harsha Rao |

ಎಲ್ಲರಿಗೂ ಗೊತ್ತಿರುವಂತೆ ಮುಕ್ತ ಮಾರುಕಟ್ಟೆಯಲ್ಲಿ ಪಿಸ್ತೂಲನ್ನಾಗಲಿ ಅಥವಾ ಒಂದು ಗ್ರಾಂ ಕೊಕೇನ್‌ ಅನ್ನೇ ಆಗಲಿ ಖರೀದಿಸುವುದು ಅಷ್ಟುಸುಲಭವಲ್ಲ. ಸರಳವೂ ಅಲ್ಲ. ಆದರೆ, ಒಂದು ಅಡ್ಡದಾರಿಯ ಅಥವಾ ಗುಪ್ತ ದಾರಿಯ ಮೂಲಕ ನಮಗೆ ಬೇಕಿರುವ ಯಾವುದೇ ವಸ್ತುವನ್ನಾದರೂಖರೀದಿಸಬಹುದು! ಹೌದು, ಕೇವಲ ಒಂದು ಮೌಸ್‌ ಕ್ಲಿಕ್‌ನಿಂದ ಈಗ ಏನನ್ನು ಬೇಕಾದರೂಖರೀದಿಸಬಹುದು! ಇದೆಲ್ಲವೂ ಸಾಧ್ಯವಾಗುವುದು ಡಾರ್ಕ್‌ವೆಬ್‌ನಿಂದ. ಡಿ ಕಾಮರ್ಸ್‌ ಅಥವಾ ಡಾರ್ಕ್‌ ವೆಬ್‌ ಎಂದು ಕರೆಯಲ್ಪಡುವ ಈ ಕತ್ತಲ ಲೋಕದ ಕುರಿತು ಇಲ್ಲಿ ವಿವರ ಮಾಹಿತಿ ಇದೆ.

Advertisement

ಅಂತರ್ಜಾಲ ಎಂದರೆ ಮಾಹಿತಿ ಕಣಜ. ಆಧುನಿಕ ಕಾಲಕ್ಕೆ ಇದೇ ಜ್ಞಾನದ ಬೆಳಕು ಅಂತ ಬಣ್ಣಿಸಲಾಗುತ್ತಿದೆ. ಒಂದು ಮಟ್ಟಕ್ಕೆ ಈ ಮಾತು ಸತ್ಯ ಕೂಡ. ಆದರೆ ನಾವು ನೀವು ನೋಡುವ ಇಂಟರ್ನೆಟ್‌ನ ಹಿಂದೆ ನಾವ್ಯಾರೂ ನೋಡದ, ನಾವು ಊಹಿಸಲು ಆಗದಷ್ಟು ಬೃಹದಾಕಾರವಾಗಿರುವ ಕರಾಳ (Dark Web) ಪ್ರಪಂಚವಿದೆ. ಸಾಮಾನ್ಯ ಬಳಕೆದಾರರು ಉಪಯೋಗಿಸುವ ಇಂಟರ್ನೆಟ್‌  ಕೇವಲ ಶೇ.4ರಷ್ಟು ಮಾತ್ರ. ಅಂತರ್ಜಾಲದ ಸುಮಾರು ಶೇ.96.ಭಾಗ ಕತ್ತಲ ಪ್ರಪಂಚದಲ್ಲಿದೆ. ಹಲವು ಪಾಸ್‌ವರ್ಡ್‌ಗಳ ಕವಲು ಹೊಂದಿರುವ ಅಂತರ್ಜಾಲ ಪ್ರಪಂಚವಿದು. ಇಲ್ಲಿರುವ ಮಾಹಿತಿ ಮತ್ತು ವ್ಯವಹಾರಗಳ ಬಗ್ಗೆ ತಿಳಿಯುತ್ತಾ ಹೋದಂತೆ ಅಚ್ಚರಿ ಮತ್ತು ಆಘಾತ ಎರಡೂ ಆಗುವ ಸಾಧ್ಯತೆಯೇ ಹೆಚ್ಚು. ಜೊತೆಗೆ, ಅಪರಾಧ ಲೋಕದ ರಾಜಧಾನಿಯಂತೆ ಇರುವ ಇಂಥ ಡಾರ್ಕ್‌ವೆಬ್‌ಗಳನ್ನು ಕೆಟ್ಟ ಕುತೂಹಲದಿಂದಲೇ ನೀವೇನಾದರೂ ಜಾಲಾಡಿದರೆ ಪೊಲೀಸರು ನಿಮ್ಮ ಮನೆ ಬಾಗಿಲು ತಟ್ಟುವುದು ಖಚಿತ.

 ಹೇಗೆ ಅಸ್ತಿತ್ವಕ್ಕೆ ಬಂತು ?
 ಇದು ಅಮೆರಿಕಾ ಸೇನೆಯ ಕೊಡುಗೆ. 1990ರ ದಶಕದಲ್ಲಿ ಮಿಲಿಟರಿ ಮಾಹಿತಿ ವಿನಿಮಯಕ್ಕೆ ಅಂತ ಟಾರ್‌ ಬ್ರೌಸರ್‌ ಮತ್ತು ಆನಿಯನ್‌ ನೆಟ್‌ವರ್ಕ್‌ ಅನ್ನು ಯುಎಸ್‌ ನೌಕಾಪಡೆಯ ಮಾಹಿತಿ ತಂತ್ರಜ್ಞಾನ ಪ್ರಯೋಗಾಲಯ ಅನ್ವೇಷಣೆ ಮಾಡಿತು. ಈ ಡಾರ್ಕ್‌ ವೆಬ್‌ನಲ್ಲಿ ಮಾಹಿತಿ ಅಥವಾ ಡಾಟಾ ಕಳುಹಿಸಿದವರು ಮತ್ತು ಡೌನ್‌ಲೋಡ್‌ ಮಾಡಿಕೊಂಡಿದ್ದವರು ಯಾರು ಅಂತ ಕಂಡು ಹಿಡಿಯಲು ಸಾಧ್ಯವಾಗುವುದಿಲ್ಲ. ಇಲ್ಲಿನ ಚಟುವಟಿಕೆಗಳನ್ನು ಪತ್ತೆ ಹಚ್ಚೋದಕ್ಕೆ ಸಾಧ್ಯವಾಗುವುದಿಲ್ಲ. ಹಾಗಿದ್ದರೆ ಮಿಲಿಟರಿಗೆ ಯಾಕೆ ಇಂತಹ ಉಸಾಬರಿ ಅಂತ ಯೋಚಿಸುತ್ತಾ ಇದ್ದರೆ, ಯುಸ್‌ ಸೇನೆ ಈ ನೆಟ್‌ವರ್ಕ್‌ ಸ್ಥಾಪಿಸಿದ ಕಾರಣವೇ ರೋಚಕ. ಒಂದು ಕಡೆ ಹಲವು ಬಗೆಯ ಮಾಹಿತಿ ದಂಡಿಯಾಗಿ ಸೇರುತ್ತಾ ಹೋದರೆ, ಅದರಲ್ಲಿ ಇರುವ ಮಿಲಿಟರಿಗೆ ಸಂಬಂಧಿಸಿದ ಗುಪ್ತ ಮಾಹಿತಿ ಯಾವುದು, ಸಾಮಾನ್ಯ ವಿಚಾರಗಳು ಯಾವುದೂ ಎಂದು ವರ್ಗೀಕರಿಸೋದು ಕಷ್ಟ. ಹಾಗಾಗಿ ಇಲ್ಲಿ ಮಾಹಿತಿ ದುರುಪಯೋಗ ಕಷ್ಟ ಸಾಧ್ಯ ಅಂತ ಅಮೇರಿಕಾದ ಸೇನಾ ವಿಭಾಗವು ಲೆಕ್ಕಾಚಾರ ಹಾಕಿತ್ತು.  

ಡೀಪ್‌ ವೆಬ್‌ ಮತ್ತು ಡಾರ್ಕ್‌ ವೆಬ್‌
 ಈ ಎರಡು ಪದಗಳು ಸಹ ಕೇವಲ ಫೇಸ್‌ಬುಕ್‌, ವ್ಯಾಟ್ಸ್‌ ಅಪ್‌,ಯೂಟ್ಯೂಬ್‌ ಈ ಮೇಲ್‌ ಬಳಸುವ ಬಳಕೆದಾರರಿಗೆ ಅಪರಿಚಿತವೇ ಆಗಿರುತ್ತದೆ. ಡೀಪ್‌ವೆಬ್‌ ಮತ್ತು ಡಾರ್ಕ್‌ವೆಬ್‌ ಎರಡೂ ಬೇರೆ ಬೇರೆ. ಡೀಪ್‌ ವೆಬ್‌ ಅಥವಾ ಡೀಪ್‌ ನೆಟ್‌  ಗೂಗಲ್‌ ರೀತಿಯ ಸರ್ಚ್‌ ಎಂಜಿನ್‌ಗಳಿಗೆ ಸಿಗಲಾರದು. ಆದರೆ ಇಂತಹ ಜಾಲತಾಣಗಳ ಹೆಸರು ತಿಳಿದವರು ಸಾಮಾನ್ಯ ಬ್ರೌಸರ್‌ ಮೂಲಕ ಸಹ ಪ್ರವೇಶ ಪಡೆಯಬಹುದು. ಆದರೆ ಡಾರ್ಕ್‌ ನೆಟ್‌ ಅಥವಾ ಡಾರ್ಕ್‌ವೆಬ್‌ಗ ಪ್ರವೇಶ ಪಡೆಯಲು ಟಾರ್‌ ಬ್ರೌಸರ್‌ ಬೇಕೇಬೇಕು. ಸಾಮಾನ್ಯವಾಗಿ ಇಂಟರ್ನೆಟ್‌ ಬಳಕೆ ಮಾಡುವಾಗ ಬಳಕೆದಾರನ ಕಂಪ್ಯೂಟರ್‌ ಅಥವಾ ಮೊಬೈಲ್‌ ಒಂದು ಐಪಿ ವಿಳಾಸ ಹೊಂದಿರುತ್ತದೆ. ದರ ಮೂಲಕವೇ ಅಂತರ್ಜಾಲದ ಇನ್ನೊಂದು ಐಪಿ ವಿಳಾಸವನ್ನು ತಲುಪುತ್ತದೆ. ಆದರೆ ಡಾರ್ಕ್‌ ವೆಬ್‌ ಹಾಗಲ್ಲ.. ಹಲವು ಪದರಗಳ ಮೂಲಕ ಹಾದು ಹೋಗುವ ಈ ನೆಟÌರ್ಕ್‌ ನಿಮ್ಮ ಇಂಟರ್ನೆಟ್‌ ವಿಳಾಸ (ಐಕ) ಮತ್ತು ವಿಪಿಎನ್‌ ಎರಡನ್ನೂ ತಿಳಿಯದಂತೆ ಮಾಡುತ್ತದೆ.

ಡಾರ್ಕ್‌ ವೆಬ್‌ನಲ್ಲಿ ಏನೇನು ನಡೆಯುತ್ತೆ?
 ಡಾರ್ಕ್‌ ವೆಬ್‌ನಲ್ಲಿ ನೀವು ಊಹಿಸಲು ಅಸಾಧ್ಯವಾಗಿರುವ ಹಲವು ವ್ಯವಹಾರಗಳು ನಡೆಯುತ್ತವೆ. ಜಾಗತಿಕ ಅಪರಾಧ ಲೋಕದ ಹೆಡ್‌ ಆಫೀಸ್‌ ರೀತಿ ಈ ಡಾರ್ಕ್‌ನೆಟ್‌ ಕಾರ್ಯ ನಿರ್ವಹಿಸುತ್ತಿದೆ. ಐಸಿಎಸ್‌ ನಂತಹ ಭಯೋತ್ಪಾದಕ ಸಂಘಟನೆಗಳು ಇಲ್ಲಿ ಬೀಟ್‌ ಕಾಯಿನ್‌ ಮೂಲಕ ತಮ್ಮ ಸಂಘಟನೆಗೆ ಹಣಸಹಾಯ ಪಡೆಯುತ್ತವೆ. ಅತ್ಯಂತ ಗುಪ್ತವಾಗಿ ಸಂಗ್ರಹಿಸಲಾಗುವ ಸರ್ಕಾರಿ ದಾಖಲೆಗಳು ಮತ್ತು ಮಾಹಿತಿ ಇಲ್ಲಿ ದುಬಾರಿ ಬೆಲೆಗೆ ಬಿಕರಿಯಾಗುತ್ತವೆ. ಹಲವು ರಾಷ್ಟ್ರಗಳಲ್ಲಿ ದಂಗೆಗಳನ್ನು ಸಂಘಟಿಸಲು ಗುಪ್ತವಾಗಿ ಅಜೆಂಡಾ ಕಾರ್ಯರೂಪಕ್ಕೆ ಇಲ್ಲೇ ಬರುತ್ತವೆ ಮತ್ತು ಮಾಹಿತಿ ರವಾನೆಯಾಗುತ್ತವೆ. ಇನ್ನು ಮಕ್ಕಳ ಅಶ್ಲೀಲ ವೀಡಿಯೋ ಫೋಟೋಗಳ ಕೊಡು ಕೊಳ್ಳುವಿಕೆ, ಕದ್ದ ಮಾಲಿನ ಕೊಡು-ಕೊಳ್ಳುವಿಕೆ, ಡ್ರಗ್ಸ್‌ ಮಾರಾಟ ದಂಧೆ, ಅಕ್ರಮ ಮಾರಕಾಸ್ತ್ರಗಳ ಮಾರಾಟ ಸಹ ಇಲ್ಲಿ ಎಗ್ಗಿಲ್ಲದೆ ನಡೆಯುತ್ತದೆ. ಹಲವು ಮ್ಯಾಚ್‌ಫಿಕ್ಸಿಂಗ್‌, ಬಾಡಿಗೆ ಹಂತಕರ ನೇಮಕ, ಬಾಡಿಗೆ ಹ್ಯಾಕರ್ಸ್‌ ಸಹ ಇಲ್ಲಿ ಮಾಮೂಲಿ.

Advertisement

 ಇನ್ನೂ ಅತ್ಯಂತ ಅಪಾಯಕಾರಿ ಅಂದರೆ ಮನುಷ್ಯನ ಮೇಲಿನ ವಿಕೃತ ಪ್ರಯೋಗಗಳು ಇಲ್ಲಿ ನಡೆಯುತ್ತವೆ. ಅಮಾಯಕರನ್ನು ಕರೆತಂದು ಲೈಂಗಿಕ ಹಿಂಸೆಯೂ ಸೇರಿದಂತೆ ಹಲವು ದೈಹಿಕ ಮತ್ತು ಮಾನಸಿಕ ವಿಕೃತಿಯ ದೃಶ್ಯ ನೋಡೋಕೆ ಅಂತ ಹಣದ ಹೊಳೆ ಹರಿಸುವ ಕ್ರೂರ ಮನಃಸ್ಥಿತಿಗಳು ಈ ಡಾರ್ಕ್‌ವೆಬ್‌ನಲ್ಲಿ ಇವೆ.

ಡಾರ್ಕ್‌ ವೆಬ್‌ನಿಂದ ಆದ ಉಪಯೋಗಗಳೇನು?
 ಇಂತಹ ಡಾರ್ಕ್‌ ವೆಬ್‌ ಮೂಲಕ ವಿಕಿಲೀಕ್ಸ್‌ ನಂತಹ ಹಲವು ಸಂಸ್ಥೆಗಳು ಸರ್ಕಾರಿ ಗುಪ್ತ ದಾಖಲೆಗಳನ್ನು ಪಡೆದು ಹಗರಣಗಳನ್ನು, ಅಕ್ರಮಗಳನ್ನು ಹೊರಗೆಡಹಿವೆ. ಪತ್ರಿಕಾ ರಂಗಕ್ಕೆ ಆಹಾರವಾಗುವ ಹಲವು ಮಾಹಿತಿ ಈ ಡಾರ್ಕ್‌ ವೆಬ್‌ಗಳಲ್ಲಿ ಸಿಗುತ್ತದೆ. ಕೆಲವೊಂದು ಸಾಮಾಜಿಕ ಸರ್ವೆಗಳನ್ನು ಈ ವೆಬ್‌ಸೈಟ್‌ಗಳ ಮೂಲಕ ಯಾವುದೇ ರಾಜಕೀಯ ಮತ್ತು ಇತರೆ ಒತ್ತಡವಿಲ್ಲದೆ ನಡೆಸಬಹುದು. ಬಹಳ ವಿರಳವಾಗಿ ಲಭ್ಯವಿರುವ ಪುಸ್ತಕಗಳು ಮತ್ತು ಮಾಹಿತಿಗಳನ್ನು, ಹಂಚಿಕೊಳ್ಳಲೂ ಬಳಕೆ ಮಾಡಬಹುದು. ಇದಲ್ಲದೇ ಸರ್ಕಾರಕ್ಕೆ ಬೇಕಾಗಿರುವ ಭಯೋತ್ಪಾದಕರ ಮತ್ತು ಶತ್ರು ರಾಷ್ಟ್ರದ ಮಾಹಿತಿಯನ್ನು ಹ್ಯಾಕ್‌ ಮಾಡಿ ಪಡೆಯಲು ಸಹ ಈ ಡಾರ್ಕ್‌ ವೆಬ್‌ನಿಂದ ಸಹಾಯವಾಗುತ್ತದೆ.

ಇದರ ಮೇಲೆ ಸರ್ಕಾರ ಕಣ್ಣಿಟ್ಟಿದೆಯಾ?
 ಡಾರ್ಕ್‌ ನೆಟ್‌ ಪ್ರವೇಶಿಸಲು ಟಾರ್‌ (ಖಟ್ಟ) ಬ್ರೌಸರ್‌ ಬಳಸಬೇಕಿರುತ್ತದೆ. ಈ ಬ್ರೌಸರ್‌ ಹಲವು ಸ್ತರಗಳ ಮೂಲಕ ಸಾಗುವುದರಿಂದ ನಿಮ್ಮ ಐಪಿ ಮತ್ತು ವಿಪಿಎನ್‌ ಮೂಲ ಹುಡುಕುವ ಸಂಪೂರ್ಣ ತಂತ್ರಜ್ಞಾನ ಇನ್ನೂ ಸರ್ಕಾರ ಅಥವಾ ಪೊಲೀಸರ ಬಳಿ ಇಲ್ಲ. ಭಾರತ ಮಾತ್ರವಲ್ಲ ಜಗತ್ತಿನ ಯಾವ ಸಂಸ್ಥೆಯೂ ಇನ್ನೂ ಈ ನಿಟ್ಟಿನಲ್ಲಿ ಸಫ‌ಲತೆ ಪಡೆದಿಲ್ಲ. ಆದರೆ ಅಮೇರಿಕಾದ ತನಿಖಾ ಸಂಸ್ಥೆ ಕೆಲುವು ಹ್ಯಾಕರ್ಸ್‌ ಜೊತೆಗೂಡಿ ಕೆಲವು ಟ್ರೋಜನ್‌ ಅಥವಾ ವೈರಸ್‌ ಅಭಿವೃದ್ಧಿಪಡಿಸಿದ್ದು, ಇದರ ಮೂಲಕ ಡಾರ್ಕ್‌ವೆಬ್‌ ಬಳಕೆದಾರರ ಜಾಡು ಹಿಡಿಯಲು ಒಂದು ಹಂತಕ್ಕೆ ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ. ಹೀಗಾಗಿ ಡಾರ್ಕ್‌ವೆಬ್‌ ಮೂಲಕ ನಾವು ಏನೇ ಮಾಡಿದರೂ ದಕ್ಕಿಸಿಕೊಳ್ಳುತ್ತೇವೆ. ಅಂತ ಹಲವು ಅಕ್ರಮಕ್ಕೆ ಕೈ ಹಾಕಿದ್ದ ಒಂದಷ್ಟು ಜನ ಕಂಬಿ ಹಿಂದೆ ಹೋಗಿದ್ದಾರೆ. ಆದರೆ ತನಿಖಾ ಸಂಸ್ಥೆಗಳು ಚಾಪೆ ಕೆಳಗೆ ದೂರಿದರೆ, ನೆಟ್‌ ಅಕ್ರಮಕೋರರು ರಂಗೋಲಿ ಕೆಳಗೆ ಜಾರುತ್ತಿದ್ದಾರೆ. ಅಂದಹಾಗೆ ದಿನ ಒಂದಕ್ಕೆ ಟಾರ್‌ ಬ್ರೌಸರ್‌ ಬಳಕೆದಾರರು ಎಷ್ಟು ಜನ ಇದ್ದಾರೆ ಜನ ಇದ್ದಾರೆ ಗೊತ್ತೆ?  ಅಂದಾಜು 3 ಲಕ್ಷ !

– ವರುಣ್‌ ಕಂಜರ್ಪಣೆ

Advertisement

Udayavani is now on Telegram. Click here to join our channel and stay updated with the latest news.

Next