Advertisement

ದ್ವಿಚಕ್ರ ವಾಹನ ಸವಾರರ ಅಪಾಯಕಾರಿ ಸಂಚಾರ

08:07 PM Nov 09, 2021 | Team Udayavani |

ಮಹಾನಗರ: ನಗರದಲ್ಲಿ ಲಾಕ್‌ಡೌನ್‌ ಅನಂತರ ದ್ವಿಚಕ್ರ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಿಳಿದಿದ್ದು, ಸಂಚಾರ ನಿಯಮಗಳ ಉಲ್ಲಂಘನೆ ಕೂಡ ಹೆಚ್ಚಾಗಿ ಕಂಡುಬರುತ್ತಿವೆ.

Advertisement

ದ್ವಿಚಕ್ರ ವಾಹನ ಸವಾರರು ಅತೀವೇಗ, ಅಜಾಗರೂಕತೆಯಿಂದ ವಾಹನ ಚಲಾ ಯಿಸುತ್ತಿರುವ ಪರಿಣಾಮ ಸ್ವತಃ ಅವರೇ ಅಪಾಯಕ್ಕೀಡಾಗುತ್ತಿರುವ ಜತೆಗೆ ಪಾದಚಾರಿ ಹಿರಿಯ ನಾಗರಿಕರು ಸಹಿತ ಇತರ ಸಾರ್ವಜನಿಕರಿಗೂ ಸಂಕಷ್ಟ ತಂದೊಡ್ಡುತ್ತಿದ್ದಾರೆ. ಪೊಲೀಸರು ವಾಹನಗಳ ದಾಖಲೆಗಳನ್ನು ಪರಿಶೀಲಿಸಿ ದಂಡ ವಿಧಿಸುವುದು ಮಾತ್ರವಲ್ಲದೆ ನಿರ್ಲಕ್ಷ್ಯದಿಂದ ವಾಹನ ಚಲಾಯಿ ಸುವವರನ್ನು ಕೂಡ ತಡೆದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ.

ನಗರದ ಪ್ರಮುಖ ರಸ್ತೆಗಳು, ಒಳ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳನ್ನು ಅತೀ ವೇಗದಲ್ಲಿ ಚಲಾಯಿಸಲಾಗುತ್ತಿದೆ. ಶಾರ್ಟ್‌ಕಟ್‌ ದಾರಿಗಳಲ್ಲಿಯೂ ಮನಬಂದಂತೆ ವಾಹನ ಓಡಿಸಲಾಗುತ್ತಿದೆ. ನಗರದ ಪ್ರಮುಖ ರಸ್ತೆಗಳು, ನಗರಕ್ಕೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿಯ ಕೆಲವೆಡೆ ವಿರುದ್ಧ ದಿಕ್ಕಿನಲ್ಲಿ ದ್ವಿಚಕ್ರವಾಹನಗಳನ್ನು ನುಗ್ಗಿಸಲಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಆತಂಕ ಸೃಷ್ಟಿಸುವ ಫುಡ್ ಡೆಲಿವರಿ ಬಾಯ್ಸ
ಕೆಲವು ಆನ್‌ಲೈನ್‌ ಫುಡ್ ಡೆಲಿವರಿ ಸಂಸ್ಥೆಗಳ ಸಿಬಂದಿ ಅಪಾಯಕಾರಿಯಾಗಿ ದ್ವಿಚಕ್ರ ವಾಹನ ಸವಾರಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದಿವೆ. ಅತ್ಯಂತ ವೇಗವಾಗಿ ಅಜಾಗರೂಕತೆಯಿಂದ ವಾಹನ ಚಲಾಯಿ ಸುವುದು, ವಾಹನ ಚಾಲನೆ ವೇಳೆ ಮೊಬೈಲ್‌ ಬಳಕೆ ಮಾಡು ತ್ತಿರುವುದು, ವನ್‌ವೇಯಲ್ಲಿ ವಿರುದ್ಧ ದಿಕ್ಕಿನಿಂದ ಸಂಚರಿಸುವುದು, ಶಾರ್ಟ್‌ಕಟ್‌ ರಸ್ತೆಗಳಲ್ಲಿ ಅಪಾಯ ಕಾರಿಯಾಗಿ ಚಲಿಸುವುದು ಸಹಿತ ವಿವಿಧ ರೀತಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವುದು ಕಂಡುಬಂದಿದೆ.

ಇದನ್ನೂ ಓದಿ:ಮೈ ನವಿರೇಳಿಸಿದ ಹೋರಿ ಬೆದರಿಸುವ ಸ್ಪರ್ಧೆ

Advertisement

ಕೆಲವರು ದ್ವಿಚಕ್ರ ವಾಹನದ ಮುಂಭಾಗ ದಲ್ಲಿಯೇ ಮೊಬೈಲ್‌ ಅನ್ನು ಫಿಕ್ಸ್‌ ಮಾಡಿಟ್ಟುಕೊಂಡು ನೋಡುತ್ತಿರುತ್ತಾರೆ. ಇನ್ನು ಕೆಲವು ಮಂದಿ ಒಂದು ಕೈಯಲ್ಲಿ ವಾಹನ ಓಡಿಸುತ್ತಾ ಇನ್ನೊಂದು ಕೈಯಲ್ಲಿ ಮೊಬೈಲ್‌ ಆಪರೇಟ್‌ ಮಾಡುತ್ತಿರುತ್ತಾರೆ. ನಿಗದಿತ ಅವಧಿಯಲ್ಲಿ ಗ್ರಾಹಕರಿಗೆ ಆರ್ಡರ್‌ ಅನ್ನು ತಲುಪಿಸುವ ಹೊಣೆ ಇರುವುದರಿಂದ ವಾಹನವನ್ನು ವೇಗವಾಗಿ ಓಡಿಸುತ್ತಾರೆ. ಒಂದುವೇಳೆ ನಿಗದಿತ ಅವಧಿಯಲ್ಲಿ ತಲುಪದಿದ್ದರೆ ಡೆಲಿವರಿ ಬಾಯ್ಸಗೆ ದುಡಿದ ಹಣವೂ ಸಿಗುವುದಿಲ್ಲ. ಹಾಗಾಗಿ ಸಾಧ್ಯವಾದಷ್ಟು ಒಳದಾರಿಗಳನ್ನು ಬಳಕೆ ಮಾಡುತ್ತಾರೆ ಎಂಬುದು ಸಾರ್ವಜನಿಕರ ದೂರು.

ಮತ್ತೆ ಹೆಚ್ಚಳ ಆತಂಕ
ಈಗಾಗಲೇ ಹಲವೆಡೆ ಯುವಕರು ಜಾಲಿ ರೈಡ್‌ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇದೀಗ ಕಾಲೇಜು ಗಳು ಆರಂಭಗೊಳ್ಳುತ್ತಿದ್ದು, ನಗರದಲ್ಲಿ ಸಹಜವಾಗಿಯೇ ಯುವಜನತೆಯ ಬೈಕ್‌, ಸ್ಕೂಟರ್‌ ಸವಾರಿ ಇನ್ನಷ್ಟು ಹೆಚ್ಚಲಿದೆ. ಬೆಳಗ್ಗೆ, ಸಂಜೆಯ ಅವಧಿಯಲ್ಲಿ ವಾಹನದಟ್ಟಣೆ ಉಂಟಾಗುವ ಸಂದರ್ಭ ದ್ವಿಚಕ್ರ ಸವಾರರು ಫ‌ುಟ್‌ಪಾತ್‌ ಏರಿ ಸಂಚರಿಸುತ್ತಿರುವುದು ಕೂಡ ಕಂಡುಬಂದಿದ್ದು, ಇಂತಹ ಚಾಲಕರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ಇನ್ನಷ್ಟು ಸಮಸ್ಯೆ ಎದುರಿಸುವಂತಾಗಲಿದೆ.

ನಿಗಾ ಹೆಚ್ಚಳ
ಅತೀ ವೇಗ ಸೇರಿದಂತೆ ಸಂಚಾರ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸುವವರ ಮೇಲೆ ಈಗಾಗಲೇ ಅಗತ್ಯ ಕ್ರಮ ತೆಗೆದು ಕೊಳ್ಳಲಾಗುತ್ತಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಕೆಲವು ಫುಡ್ ಡೆಲಿವರಿ ಬಾಯ್ಸಗಳ ದ್ವಿಚಕ್ರ ವಾಹನ ಸವಾರಿ ಬಗ್ಗೆ ಸಾರ್ವಜನಿಕರು ದೂರಿದ್ದರು. ಈಗ ಮತ್ತೆ ದೂರುಗಳು ಕೇಳಿಬಂದಿವೆ. ಇಂತಹ ವಾಹನ ಸವಾರರ ಮೇಲೆ ವಿಶೇಷ ನಿಗಾ ಇಡಲಾಗುವುದು.
-ನಟರಾಜ್‌ ಎಂ.ಎ., ಎಸಿಪಿ ಮಂಗಳೂರು ಸಂಚಾರ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next