ಸ್ಟೇಟ್‌ಬ್ಯಾಂಕ್: ಸ್ಟೇಟ್ ಬ್ಯಾಂಕ್‌ನಲ್ಲಿರುವ “ಸಿಟಿ ಬಸ್ ನಿಲ್ದಾಣ’ ಅತ್ತ ಬಸ್ ನಿಲ್ದಾಣವೂ ಅಲ್ಲ, ಇತ್ತ ರಸ್ತೆಯೂ ಅಲ್ಲದ ಸ್ಥಿತಿಯಲ್ಲಿದ್ದು ಅಪಾಯಕಾರಿಯಾಗಿದೆ. “ಸಿಟಿ ಬಸ್ ನಿಲ್ದಾಣ’ವೆಂದು ಗುರು ತಿಸಲ್ಪಟ್ಟಿದ್ದರೂ ಇಲ್ಲಿ ಬಸ್‌ನಿಲ್ದಾಣಕ್ಕೆ ಬೇಕಾದ ಪ್ರಾಥಮಿಕ ಸೌಕರ್ಯಗಳಿಲ್ಲ. ಬಸ್‌ಗಳ ಯದ್ವಾತದ್ವಾ ನಿಲುಗಡೆ, ಇತರ ವಾಹನಗಳ ಓಡಾಟ, ರಸ್ತೆಯಲ್ಲಿಯೇ ವಾಹನಗಳ ಪಾರ್ಕಿಂಗ್‌ನಿಂದಾಗಿ ಪಾದಚಾರಿಗಳು ಮತ್ತು ವಾಹನಗಳ ಸುರಕ್ಷಿತ ಸಂಚಾರಕ್ಕೆ ತೊಡಕಾಗಿದೆ.
“ಸಿಟಿ ಬಸ್ ನಿಲ್ದಾಣ’ದ ಕಾಂಕ್ರೀಟ್ ಕಾಮಗಾರಿ ಒಂದು ವರ್ಷದ ಹಿಂದೆ ನಡೆದಿತ್ತು. ಆದರೆ ಅದನ್ನು ಬಸ್ ನಿಲ್ದಾಣವೆಂದು ಪರಿಗಣಿಸದೆ ರಸ್ತೆಯಂತೆಯೇ ಪರಿಗಣಿಸಿ ಕಾಮಗಾರಿ ನಡೆಸಲಾಗುತ್ತಿತ್ತು. ಫುಟ್‌ಪಾತ್ ನಿರ್ಮಾಣ ಕೂಡ ಆಗಿತ್ತು. ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಸಿಟಿ ಬಸ್ ಗಳನ್ನು ಸರ್ವೀಸ್ ಬಸ್ ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗುತ್ತಿತ್ತು. ಅಲ್ಲದೆ ಶಾಶ್ವತವಾಗಿ ಸರ್ವೀಸ್ ಬಸ್‌ನಲ್ಲಿಯೇ ನಿಲುಗಡೆ ಮಾಡುವ ಬಗ್ಗೆಯೂ ನಿರ್ಧಾರವಾಗಿತ್ತು. ಕಳೆದ ಸುಮಾರು
6 ತಿಂಗಳುಗಳಿಂದ ಮತ್ತೆ “ಸಿಟಿ ಬಸ್ ನಿಲ್ದಾಣ’ದಲ್ಲಿಯೇ ಸಿಟಿಬಸ್ ಗಳನ್ನು ನಿಲುಗಡೆ ಮಾಡಲಾಗುತ್ತಿದೆ.
ಈ ಹಿಂದೆ ಬಸ್ ನಿಲುಗಡೆ ತಾಣ ಮತ್ತು ರಸ್ತೆಗಾಗಿ ನಿಗದಿ ಮಾಡಿದ ಸ್ಥಳದ ನಡುವೆ ಡಿವೈಡರ್, ತಡಬೇಲಿ ಇತ್ತು. ಕಾಮಗಾರಿ ವೇಳೆ ಅದನ್ನು ತೆಗೆದುಹಾಕಲಾಗಿತ್ತು. ಇದೀಗ ಅಲ್ಲಿ ಕೆಲವು ಬ್ಯಾರಿಕೇಡ್‌ಗಳನ್ನು ಇಟ್ಟು ಬಸ್‌ನಿಲ್ದಾಣ ಮತ್ತು ರಸ್ತೆಯನ್ನು ಪ್ರತ್ಯೇಕಿಸಲಾಗಿದೆಯಾದರೂ ಸಮಸ್ಯೆ ಹೆಚ್ಚಾಗಿದೆ.
ರಸ್ತೆಯಲ್ಲೇ ವಾಹನ ನಿಲುಗಡೆ
ಸ್ಟೇಟ್‌ಬ್ಯಾಂಕ್‌ನ ಮೀನು ಮಾರ್ಕೆಟ್, ಮಾರ್ಕೆಟ್ ಪಕ್ಕದ ಅಂಗಡಿಗಳಿಗೆ ಬರುವವರು ಸಿಟಿ ಬಸ್ ನಿಲ್ದಾಣದ ರಸ್ತೆ ಬದಿಯಲ್ಲೇ ವಾಹನ ನಿಲುಗಡೆ ಮಾಡುತ್ತಿದ್ದಾರೆ. ಹ್ಯಾಮಿಲ್ಟನ್ ಸರ್ಕಲ್ ಕಡೆಯಿಂದ ಬರುವ ವಾಹನಗಳು ಕೂಡ ಅಧಿಕ ಇವೆ. ಇತ್ತ ಸಿಟಿ ಬಸ್‌ಗಳು ಸಂಚರಿಸುತ್ತಿರುತ್ತವೆ. ಇದರಿಂದಾಗಿ ಪಾದಚಾರಿಗಳು, ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಜ.5ರಂದು ಇದೇ ಸ್ಥಳದಲ್ಲಿ ಬಸ್ ಢಿಕ್ಕಿಯಾಗಿ ಓರ್ವ ಪಾದಚಾರಿ ಮೃತಪಟ್ಟಿದ್ದರು. ಆಗಾಗ್ಗೆ ಇಲ್ಲಿ ವಾಹನಗಳ ಢಿಕ್ಕಿ, ಚಾಲಕರು, ಸವಾರರ ಮಾತಿನ ಚಕಮಕಿ, ಪೊಲೀಸರೊಂದಿಗೆ ವಾಗ್ವಾದ ನಡೆಯುತ್ತಲೇ ಇರುತ್ತದೆ.
Related Articles
250ಕೂ ಅಧಿಕ ಬಸ್‌ಗಳ ನಿಲುಗಡೆ
ಸ್ಟೇಟ್‌ಬ್ಯಾಂಕ್‌ನ “ಸಿಟಿ ಬಸ್ ನಿಲ್ದಾಣ’ವನ್ನು ಒಟ್ಟುಸುಮಾರು 250ಕ್ಕೂ ಅಧಿಕ ಬಸ್‌ಗಳು ಬಳಕೆ ಮಾಡುತ್ತಿವೆ. ಏಕಕಾಲದಲ್ಲಿ 25ಕ್ಕೂ ಅಧಿಕ ಬಸ್ ಗಳು ನಿಲುಗಡೆಯಾಗುತ್ತವೆ. ಒಂದೊಂದು ಬಸ್ ದಿನಕ್ಕೆ ಸುಮಾರು 3-4 ಟ್ರಿಪ್ ಮಾಡುತ್ತದೆ. ಸೀಮಿತ ಸ್ಥಳಾವಕಾಶ ಇರುವುದರಿಂದ ಮತ್ತು ಬಸ್ ನಿಲುಗಡೆಗೆ ಬಸ್ ಬೇ ನಿರ್ಮಾಣವಾಗದೆ ಇರುವುದರಿಂದ ಬಸ್ ಚಾಲಕರಿಗೂ ಗೊಂದಲವುಂಟಾಗುತ್ತಿದೆ.
ಬಸ್‌ಬೇ ನಿರ್ಮಾಣಕ್ಕೆ ಸೂಚನೆ
ಸಿಟಿಬಸ್ ನಿಲ್ದಾಣದಲ್ಲಿ ಬಸ್ ಬೇ ನಿರ್ಮಾಣವಾಗದೆ ಇರುವುದರಿಂದಲೂ ಸಮಸ್ಯೆಯಾಗಿದೆ. ಹಾಗಾಗಿ ಬಸ್‌ಬೇ ನಿರ್ಮಿಸಲು ಸ್ಮಾರ್ಟ್ ಸಿಟಿಯವರಿಗೆ ಸೂಚನೆ ನೀಡಲಾಗಿದೆ. ಬಸ್ ನಿಲ್ದಾಣ ಮತ್ತು ರಸ್ತೆಯ ನಡುವೆ ಬ್ಯಾರಿಕೇಡ್ ಇಟ್ಟು ಸುಗಮ ಸಂಚಾರಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಸಂಚಾರಿ ಪೊಲೀಸರು ಕೂಡ ನಿಗಾ ವಹಿಸುತ್ತಿದ್ದಾರೆ. ಬಸ್ ಬೇ ನಿರ್ಮಾಣವಾದರೆ ಬಹುತೇಕ ಸಮಸ್ಯೆ ಪರಿಹಾರವಾಗಬಹುದು.
-ಗೀತಾ ಕುಲಕರ್ಣಿ, ಎಸಿಪಿ ಸಂಚಾರ ವಿಭಾಗ, ಮಂಗಳೂರು
ಸಂತೋಷ್ ಬೊಳ್ಳೆಟ್ಟು