ಶಿರ್ವ: ಇಲ್ಲಿನ ಮುಖ್ಯ ರಸ್ತೆಯಲ್ಲಿ ಆತ್ರಾಡಿ-ಶಿರ್ವ-ಬಜ್ಪೆ ರಾಜ್ಯ ಹೆದ್ದಾರಿ ರಸ್ತೆ ವಿಸ್ತರಣೆ ಡಾಮರು ಕಾಮಗಾರಿ ಮುಗಿದಿದ್ದು ಒಳರಸ್ತೆಯಿಂದ ಮುಖ್ಯರಸ್ತೆಗೆ ಬರುವ ರಸ್ತೆ ಬದಿಯಲ್ಲಿ ಹಾಕಲಾಗಿದ್ದ ನಾಮಫಲಕಗಳಿಂದಾಗಿ ವಾಹನ ಸವಾರರು ,ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ತೊಂದರೆಯಾಗಿದೆ.
ಅಪಾಯದ ಕರೆಗಂಟೆ
ಶಿರ್ವ ಮಂಚಕಲ್ ಪೇಟೆಯ ಮುಖ್ಯ ರಸ್ತೆಯಲ್ಲಿ ದಿನವೊಂದಕ್ಕೆ ಶಾಲಾ ವಾಹನಗಳ ಸಹಿತ ಸಾವಿರಾರು ವಾಹನಗಳು ಚಲಿಸುತ್ತಿದ್ದು ಕೂಡುರಸ್ತೆಯ ಬದಿಯಲ್ಲಿ ನಾಮಫಲಕ ಅಳವಡಿಸಲಾಗಿದೆ. ಶಿರ್ವ ಪೊಲೀಸ್ ಸ್ಟೇಷನ್ ರಸ್ತೆಯಿಂದ ಮುಖ್ಯ ರಸ್ತೆಗೆ ಬರುವಲ್ಲಿರುವ ಸ್ಟೇಷನ್‌ನ ಬೋರ್ಡ್ ಮತ್ತು ಎಂಎಸ್‌ಆರ್‌ಎಸ್ ಕಾಲೇಜು ಕ್ರಾಸ್‌ನಲ್ಲಿ ಹಾಕಲಾಗಿರುವ ಖಾಸಗಿ ಸಂಸ್ಥೆಯ ಹೋರ್ಡಿಂಗ್‌ನಿಂದಾಗಿ ಮುಖ್ಯ ರಸ್ತೆಗೆ ಪ್ರವೇಶಿಸುವಾಗ ಬೆಳ್ಮಣ್ ಕಡೆಯಿಂದ ಬರುವ ವಾಹನಗಳು ಕಾಣುವುದಿಲ್ಲ. ಇದಕ್ಕೆ ಪೂರಕವೆಂಬಂತೆ ಆಗಾಗ ಸಣ್ಣಪುಟ್ಟ ವಾಹನ ಅಪಘಾತ ಕೂಡ ಸಂಭವಿಸುತ್ತವೆ.
ಮುಖ್ಯ ರಸ್ತೆ ವಿಸ್ತರಣೆಯಿಂದಾಗಿ ರಸ್ತೆ ನೇರವಾಗಿದ್ದು ವಾಹನಗಳು ಮಿತಿ ಮೀರಿದ ವೇಗದಲ್ಲಿ ಸಾಗುತ್ತಿವೆ. ಒಳ ರಸ್ತೆಯಿಂದ ಮುಖ್ಯ ರಸ್ತೆಗೆ ಬರುವವರೆಗೆ ಎರಡೂ ಕಡೆ ಚಲಿಸುವ ವಾಹನಗಳು ಕಾಣದೆ ನಾಮಫಲಕಗಳು ಅಪಾಯಕಾರಿಯಾಗಿ ಪರಿಣಮಿಸಿದೆ. ಇಲ್ಲಿ ಹಿಂದೆ ಅಳವಡಿಸಲಾಗಿದ್ದ ಬ್ಯಾರಿಕೇಡ್‌ಗಳನ್ನು ಕೂಡಾ ತೆಗೆಯಲಾಗಿದೆ. ಸ್ಥಳೀಯಾಡಳಿತ ಎಚ್ಚೆತ್ತುಕೊಂಡು ಅಪಾಯಕಾರಿ ನಾಮಫಲಕಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬೇಕಿದೆ.