Advertisement

Danger Dengue; ರಾಜ್ಯದಲ್ಲಿ ಮೆಡಿಕಲ್‌ ಎಮರ್ಜೆನ್ಸಿ ಅಗತ್ಯವಿಲ್ಲ: ಸಚಿವ ದಿನೇಶ್‌

11:25 PM Jul 08, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವುದು ನಿಜ. ಆದರೆ ವೈದ್ಯಕೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡುವ ಸ್ಥಿತಿ ನಿರ್ಮಾಣವಾಗಿಲ್ಲ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸ್ಪಷ್ಟಪಡಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಡೆಂಗ್ಯೂ ನಿಯಂತ್ರಣ ವಿಚಾರದಲ್ಲಿ ಆರೋಗ್ಯ ಇಲಾಖೆ ನಿರಂತರ ನಿಗಾ ವಹಿಸುತ್ತಿದ್ದು ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಬೆಡ್‌ ಅಥವಾ ಔಷಧ ಕೊರತೆಯಿಲ್ಲ. ಡೆಂಗ್ಯೂ ಬಗ್ಗೆ ತಾಂತ್ರಿಕ ಸಲಹಾ ಸಮಿತಿಯವರೊಂದಿಗೆ ಚರ್ಚೆ ನಡೆಸಿದ್ದು ಮೆಡಿಕಲ್‌ ಎಮರ್ಜೆನ್ಸಿ ಘೋಷಿಸುವ ಅಗತ್ಯವಿಲ್ಲ ಎಂದು ಸಲಹಾ ಸಮಿತಿ ತಿಳಿಸಿದೆ ಎಂದರು.

ಫೀವರ್‌ ಕ್ಲಿನಿಕ್‌
ಮಳೆಗಾಲವಾದ್ದರಿಂದ ಇನ್ನೂ 2 ತಿಂಗಳು ಡೆಂಗ್ಯೂ ಹಾವಳಿ ಇರುತ್ತದೆ. ಜನರು ಹೆಚ್ಚು ಜಾಗೃತರಾಗಬೇಕು. ಮನೆಯ ಸುತ್ತ ನೀರು ಶೇಖರಣೆಯಾಗದಂತೆ ನೋಡಿಕೊಳ್ಳಬೇಕು. ಆರೋಗ್ಯ ಇಲಾಖೆ ಕೂಡ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಪ್ರತೀ ಶುಕ್ರವಾರ ಅಭಿಯಾನದ ರೀತಿಯಲ್ಲಿ ಈಡಿಸ್‌ ಸೊಳ್ಳೆಯ ಉತ್ಪತ್ತಿ ತಾಣಗಳನ್ನು ನಾಶಪಡಿಸಲಾಗುತ್ತಿದೆ.

ಹೆಚ್ಚು ಡೆಂಗ್ಯೂ ಪ್ರಕರಣ ಕಂಡುಬರುವ ಸ್ಥಳಗಳಲ್ಲಿ ಫೀವರ್‌ ಕ್ಲಿನಿಕ್‌ ತೆರೆದು ಟೆಸ್ಟಿಂಗ್‌ ಹೆಚ್ಚಿಸಲು ಜಿಲ್ಲಾಧಿಕಾರಿಗಳಿಗೆ ಹಾಗೂ ಸಿಇಒಗಳಿಗೆ ಸೂಚಿಸಲಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜನರು ಹೆಚ್ಚು ಜಾಗೃತರಾಗಿ ಎಚ್ಚರಿಕೆ ವಹಿಸುವುದೇ ಮುಖ್ಯ ಎಂದರು.

ಸೊಳ್ಳೆಗಿಂತ ವಿಪಕ್ಷ ನಾಯಕರ ಸುಳ್ಳುಗಳೇ ಹೆಚ್ಚು ಪ್ರಚಾರ
ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ನೇತೃತ್ವದಲ್ಲಿ ಬಿಜೆಪಿ ನಾಯಕರು ಬೆಂಗಳೂರಿನಲ್ಲಿ ಕೊಳೆಗೇರಿ ಭೇಟಿ ಕೊಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ದಿನೇಶ್‌, ಅವರು (ಅಶ್ವತ್ಥನಾರಾಯಣ) ಕೊಳೆಗೇರಿಗಳಿಗೆ ಭೇಟಿ ಕೊಡಲಿ ಬೇಡ ಎನ್ನುವುದಿಲ್ಲ. ಆದರೆ ವಿಪಕ್ಷದವರು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಡೆಂಗ್ಯೂ ನಿಯಂತ್ರಣ ವಿಚಾರದಲ್ಲಿ ಆಡಳಿತ ಪಕ್ಷಕ್ಕೆ ಸಹಕರಿಸಬೇಕು. ಆದರೆ ಡೆಂಗ್ಯೂ ಹರಡುವ ಸೊಳ್ಳೆಗಳಿಗಿಂತ ವಿಪಕ್ಷ ನಾಯಕರ ಸುಳ್ಳುಗಳು ಹೆಚ್ಚು ಹರಡುತ್ತಿವೆ ಎಂದು ಬಿಜೆಪಿ ನಾಯಕರ ಹೇಳಿಕೆಗಳನ್ನು ಟೀಕಿಸಿದರು.

Advertisement

” ಸಂಸದ ಡಾ. ಸಿ.ಎನ್‌. ಮಂಜುನಾಥ್‌ ಉತ್ತಮ ಸಲಹೆಗಳನ್ನು ನೀಡಿದ್ದಾರೆ. ನಾನು ಅವರ ಜತೆ ಮಾತನಾಡಿದ್ದೇನೆ. ಆ ರೀತಿಯ ಸಕಾರಾತ್ಮಕ ಚಿಂತನೆಗಳನ್ನು ವಿಪಕ್ಷಗಳು ಪ್ರದರ್ಶಿಸಲಿ.” – ದಿನೇಶ್‌ ಗುಂಡೂರಾವ್‌, ಆರೋಗ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next