ಶ್ರೀನಗರ: “ದಂಗಲ್’ ಖ್ಯಾತಿಯ ನಟಿ, ರಾಷ್ಟ್ರೀಯ ಪ್ರಶಸ್ತಿ ವಿಜೇತೆ ಝೈರಾ ವಾಸಿಂ ರವಿವಾರ ಏಕಾಏಕಿ ಅಭಿನಯ ಲೋಕಕ್ಕೆ ವಿದಾಯ ಹೇಳುತ್ತಿರುವುದಾಗಿ ಘೋಷಿಸುವ ಮೂಲಕ, ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
“ನಾನು ಈ ಕ್ಷೇತ್ರಕ್ಕೆ ಸರಿಯಾಗಿ ಹೊಂದುತ್ತೇ ನಾದರೂ, ನಾನು ಇಲ್ಲಿಗೆ ಸೇರಿದವಳಲ್ಲ’ ಎಂದು ಫೇಸ್‌ಬುಕ್‌ನಲ್ಲಿ ತಿಳಿಸಿರುವ ಕಾಶ್ಮೀರ ಮೂಲದ ಝೈರಾ ನಟನಾ ಕ್ಷೇತ್ರದಿಂದ ದೂರ ಸರಿಯುವ ಘೋಷಣೆ ಮಾಡಿದ್ದಾರೆ. ಧಾರ್ಮಿಕ ಕಾರಣಗಳಿಂದಾಗಿ ಈ ನಿರ್ಧಾರ ಕೈಗೊಂಡಿರುವುದಾಗಿಯೂ ಆಕೆ ತಿಳಿಸಿದ್ದಾರೆ.
“5 ವರ್ಷಗಳ ಹಿಂದೆ ನಾನು ಕೈಗೊಂಡ ನಿರ್ಧಾರವು ನನ್ನ ಬದುಕನ್ನೇ ಬದಲಿಸಿತು. ಬಾಲಿವುಡ್ ಕ್ಷೇತ್ರಕ್ಕೆ ಪ್ರವೇಶಿಸಿದಂತೆ ನನಗೆ ಅವಕಾಶಗಳು, ಜನಪ್ರಿಯತೆಯ ಬಾಗಿಲು ತೆರೆದವು. ಆದರೆ, ನಾನು ಆಗಬೇಕೆಂದು ಬಯಸಿದ್ದು ಅದಲ್ಲ ಎಂಬುದು ನನಗೀಗ ಅರ್ಥವಾಗಿದೆ. ಇಲ್ಲಿ ಎಲ್ಲರೂ ನನಗೆ ಪ್ರೀತಿ, ಬೆಂಬಲ ನೀಡಿದರು. ಆದರೆ, ನಾನು ಗೊತ್ತಿಧ್ದೋ, ಗೊತ್ತಿಲ್ಲದೆಯೋ ಧಾರ್ಮಿಕ ಶ್ರದ್ಧೆ(ಈಮಾನ್)ಯನ್ನು ನಿರ್ಲಕ್ಷಿಸತೊಡಗಿದೆ. ನನ್ನ ಧರ್ಮದೊಂದಿಗಿನ ನನ್ನ ಸಂಬಂಧಕ್ಕೆ ಅಪಾಯ ಉಂಟಾಗಿದೆ ಎಂಬುದು ಈಗ ಗೊತ್ತಾಗಿದೆ. ಹೀಗಾಗಿ, ನಟನಾ ಕ್ಷೇತ್ರದಿಂದ ದೂರವುಳಿಯಲು ನಿರ್ಧರಿಸಿ ದ್ದೇನೆ’ ಎಂದು 18ರ ಹರೆಯದ ಝೈರಾ ಬರೆದುಕೊಂಡಿದ್ದಾರೆ.
ಪ್ರಶ್ನಿಸಲು ನಾವ್ಯಾರು?: ಝೈರಾ ನಿರ್ಧಾರಕ್ಕೆ ಬೆಂಬಲ ಸೂಚಿಸಿರುವ ಜಮ್ಮು-ಕಾಶ್ಮೀರ ಮಾಜಿ ಸಿಎಂ ಒಮರ್ ಅಬ್ದುಲ್ಲಾ, “ಆಕೆಯ ಆಯ್ಕೆ ಬಗ್ಗೆ ಪ್ರಶ್ನಿಸಲು ನಾವ್ಯಾರು? ಇದು ಅವಳ ಬದುಕು. ಅವಳಿಗಿಷ್ಟ ಬಂದಂತೆ ಬದುಕುವ ಹಕ್ಕು ಆಕೆಗಿದೆ. ಒಳ್ಳೆಯದಾಗಲಿ ಎಂದಷ್ಟೇ ಹೇಳುತ್ತೇನೆ. ಒಟ್ಟಿನಲ್ಲಿ ಅವಳ ನಿರ್ಧಾರವು ಅವಳಿಗೆ ಸಂತೋಷ ಕೊಟ್ಟರೆ ಸಾಕು’ ಎಂದು ಟ್ವೀಟ್ ಮಾಡಿದ್ದಾರೆ.