ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣ ಕುರಿತು ಕೋರ್ಟ್‌ಗೆ ಸಲ್ಲಿಕೆಯಾಗಿರುವ ಚಾರ್ಜ್‌ಶೀಟ್ ನಲ್ಲಿ ಪ್ರತ್ಯಕ್ಷ, ಪರೋಕ್ಷವಾಗಿ ಸಾಕ್ಷಿಗಳು ನೀಡಿರುವ ಹೇಳಿಕೆಗಳನ್ನು ಕೇಳಿ ದಂಗಾಗಿರುವ ಆರೋಪಿ ದರ್ಶನ್ ಮಂಗಳವಾರದ ಬೆಳಗಿನ ಉಪಾಹಾರವನ್ನೇ ಸೇವಿಸಲಿಲ್ಲ ಎನ್ನಲಾಗಿದೆ.
ಕೋರ್ಟ್‌ಗೆ ಸಲ್ಲಿಕೆಯಾಗಿರುವ ಚಾರ್ಜ್‌ಶೀಟ್‌ನಲ್ಲಿ 30 ಸಾಕ್ಷಿಗಳು ಪರೋಕ್ಷವಾಗಿ, ಮೂವರು ಪ್ರತ್ಯಕ್ಷವಾಗಿ ಹೇಳಿಕೆಗಳನ್ನು ನೀಡಿದ್ದು, ಇದನ್ನು ಕೇಳಿದ ದರ್ಶನ್ ಆತಂಕಕ್ಕೊಳಗಾಗಿದ್ದಾನೆ. ಜಾಮೀನು ಸಿಗುತ್ತದೋ, ಇಲ್ಲವೋ ಎಂದು ಪರದಾಡುತ್ತಿದ್ದಾನೆನ್ನಲಾಗಿದೆ.
ಕುಟುಂಬದ ಸದಸ್ಯರೊಂದಿಗೆ ದೂರವಾಣಿಯಲ್ಲಿ ಮಾತನಾಡ ಬಹುದಾದ ಪ್ರಿಸನ್ ಕಾಲ್ ಸಿಸ್ಟಮ್ ಅನ್ನು ಹೈ ಸೆಕ್ಯುರಿಟಿ ಸೆಲ್‌ನಲ್ಲೇ ಮಂಗಳವಾರ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾಗಿತ್ತು. ಅದರ ಮೂಲಕ ದರ್ಶನ್ ಕುಟುಂಬದ ಸದಸ್ಯರೊಂದಿಗೆ ಮಾತನಾಡಿದ್ದಾನೆ.
ರೇಣುಕಾಸ್ವಾಮಿ ಅಪಹರಣದ
ವೇಳೆ ತುಮಕೂರಲ್ಲೂ ಪಾರ್ಟಿ
ತುಮಕೂರು: ರೇಣುಕಾಸ್ವಾಮಿ ಕೊಲೆ ಆರೋಪಿಗಳು ಆತನನ್ನು ಚಿತ್ರದುರ್ಗದಿಂದ ಅಪಹರಿಸಿ ಬೆಂಗಳೂರಿಗೆ ಕರೆದೊಯ್ಯವ ವೇಳೆ ತುಮಕೂರಿಗೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದ ರಂಗಾಪುರದ ಲಕ್ಷ್ಮೀ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮಾಡಿರುವ ಮಾಹಿತಿ ಬೆಳಕಿಗೆ ಬಂದಿದೆ.
ಆರೋಪಿಗಳಾದ ರಾಘವೇಂದ್ರ, ಜಗದೀಶ್, ಅನುಕುಮಾರ್ ಪಾರ್ಟಿ ಮಾಡಿ ರೇಣುಕಾಸ್ವಾಮಿಯಿಂದಲೇ ಫೋನ್ ಪೇ ಮೂಲಕ 700 ರೂ. ಬಿಲ್ ಕೊಡಿಸಿದ್ದರು. ದಾರಿ ಮಧ್ಯೆ ಆತನ ಚಿನ್ನದ ಸರ, ವಾಚ್, ಉಂಗುರ, ಕರಡಿಗೆಯನ್ನು ಸುಲಿಗೆ ಮಾಡಿ ಹಲ್ಲೆ ಮಾಡಿದ್ದರು ಎಂಬ ಮಾಹಿತಿ ತಿಳಿದುಬಂದಿದೆ. ಬಾರ್‌ನಲ್ಲಿ ಮದ್ಯ ಖರೀದಿಸಿದ್ದು, ಟೋಲ್‌ನಲ್ಲಿ ಹಣ ಪಾವತಿಸಿರುವ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ.