Advertisement

ದಂಡುಪಾಳ್ಯ ಮಾದರಿ ದರೋಡೆಕೋರರ ಬಂಧನ

03:20 PM Aug 05, 2018 | Team Udayavani |

ಬೆಂಗಳೂರು: ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ, ದಂಡುಪಾಳ್ಯ ತಂಡದ ಮಾದರಿಯಲ್ಲಿ ದರೋಡೆ ಮಾಡುತ್ತಿದ್ದ ಐವರು ಯುವಕರನ್ನು ಭಾರತೀನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಶಿವಾಜಿನಗರ ನಿವಾಸಿಗಳಾದ ಫಾರೂಕ್‌ (24), ನದೀಮ್‌ ಖಾನ್‌ (22), ನದೀಮ್‌ ಅಹಮ್ಮದ್‌ (21), ರತನ್‌ (20) ಮತ್ತು ಜವಾದ್‌ ಅಲಿ (21) ಬಂಧಿತರು. ಇವರಿಂದ 2 ಚಿನ್ನದ ಸರಗಳು, ವಿವಿಧ ಕಂಪನಿಯ 14 ವಾಚ್‌ಗಳು, ಒಂದು ಕ್ಯಾಮೆರಾ ವಶಕ್ಕೆ ಪಡೆಯಲಾಗಿದೆ.

ಆರೋಪಿಗಳು ಆ.1ರ ನಸುಕಿನಲ್ಲಿ ಭಾರತೀನಗರದ ಬಂಬೂ ಬಜಾರ್‌ ಪೆಟ್ರೋಲ್‌ ಬಂಕ್‌ ಬಳಿ ದರೋಡೆಗೆ ಸಂಚು ರೂಪಿಸಿದ್ದರು. ಈ ಮಾಹಿತಿ ಪಡೆದ ಠಾಣೆಯ ಪಿಎಸ್‌ಐ ನಯನಾ ಮತ್ತು ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣ ಹಾಗೂ ಜಂಬೂ ಬಜಾರ್‌ ರಸ್ತೆಯಲ್ಲಿ ಒಬ್ಬಂಟಿಯಾಗಿ ಸಂಚರಿಸುವ ಸಾರ್ವಜನಿಕರನ್ನು ಮಾರಕಾಸ್ತ್ರಗಳು ಹಾಗೂ ಕಣ್ಣಿಗೆ ಖಾರದ ಪುಡಿ ಎರಚಿ ದರೋಡೆಗೆ ಸಂಚು ರೂಪಿಸಿದ್ದರು. ಈ ವೇಳೆ ಆರೋಪಿಗಳಿಂದ ದೊಣ್ಣೆ, ರಾಡ್‌, ಖಾರದ ಪುಡಿ ಪ್ಯಾಕೆಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಇದೇ ವೇಳೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ ಎಸಗಿದ್ದ ದರೋಡೆ ಪ್ರಕರಣದ ಕುರಿತು ಮಾಹಿತಿ ನೀಡಿದ್ದರು.ಆರೋಪಿಗಳೆಲ್ಲರೂ ಸ್ನೇಹಿತರಾಗಿದ್ದು, ಹಣ ಸಂಪಾದಿಸಿ ಮೋಜಿನ ಜೀವನ ನಡೆಸಲು ಕೃತ್ಯವೆಸಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ದಂಡುಪಾಳ್ಯ ಮಾದರಿ ದರೋಡೆ: ಬಂಧಿತರು ಆರೋಪಿಗಳು ಜುನ್‌ 25ರಂದು ಹೆಣ್ಣೂರು ಠಾಣಾ ವ್ಯಾಪ್ತಿಯ ಎಚ್‌ಬಿಆರ್‌ ಲೇಔಟ್‌ನ 5ನೇ ಬ್ಲಾಕ್‌ ಮುಖ್ಯರಸ್ತೆಯಲ್ಲಿರುವ ಸಾಯಿಸುಮಾ ಅಪಾರ್ಟ್‌ಮೆಂಟ್‌ನ ಜೋನಾಥನ್‌ ಥಾಮಸ್‌ ಎಂಬುವರ ಮನೆಯಲ್ಲಿ ದಂಡುಪಾಳ್ಯ ಗ್ಯಾಂಗ್‌ ಮಾದರಿಯಲ್ಲಿ ದರೋಡೆ ಮಾಡಿದ್ದರು.

ಆರೋಪಿಗಳ ಪೈಕಿ ಒಬ್ಬ ಜೋನಾಥನ್‌ ಥಾಮಸ್‌ ಮನೆಗೆ ಹೋಗಿ ಕಾಲಿಂಗ್‌ ಬೆಲ್‌ ಒತ್ತಿದ್ದಾನೆ. ಆಗ ಮನೆಯಲ್ಲಿದ್ದ ಇವರು ಹೊರಗಡೆ ಹೋಗಿದ್ದ ಪತ್ನಿ ಬಂದಿರಬೇಕೆಂದು ಬಾಗಿಲು ತೆರೆದಾಗ ಆರೋಪಿ ಕುಡಿಯಲು ನೀರು ಕೇಳಿದ್ದಾನೆ. ನೀರು ತರಲು ಜೋನಾಥನ್‌ ಅಡುಗೆ ಕೋಣೆಗೆ ಹೋದಾಗ ಇತರೆ ಆರೋಪಿಗಳು ಮನೆಯೊಳಗೆ ಪ್ರವೇಶಿಸಿ ಚಾಕು ತೋರಿಸಿ ಬೆದರಿಕೆ ಹಾಕಿದ್ದಾರೆ.

ಬಳಿಕ 2 ಚಿನ್ನದ ಸರಗಳು, 1,500 ರೂ. ನಗದು ಹಾಗೂ ಕಬೋರ್ಡ್‌ನಲ್ಲಿದ್ದ ವಿವಿಧ ಕಂಪನಿಯ 14 ವಾಚ್‌ಗಳು, ಒಂದು ಕ್ಯಾಮೆರಾ ಹಾಗೂ ಇತರೆ ವಸ್ತುಗಳನ್ನು ದರೋಡೆ ಮಾಡಿದ್ದರು. ಈ ಸಂಬಂಧ ಜೋನಾಥನ್‌ ಥಾಮಸ್‌ ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next