ಭಾರತದ ಸ್ವಾತಂತ್ರ್ಯ ಇತಿಹಾಸದಲ್ಲಿ ಬರುವ ದಂಡಿ ಸತ್ಯಾಗ್ರಹದ ಬಗ್ಗೆ ಅನೇಕರು ಕೇಳಿರುತ್ತೀರಿ. ಈಗ ಇದೇ ದಂಡಿ ಸತ್ಯಾಗ್ರಹದ ಕಥೆ “ದಂಡಿ’ ಎಂಬ ಹೆಸರಿನಲ್ಲಿ ಸಿನಿಮಾವಾಗಿ ತೆರೆಗೆ ಬರುತ್ತಿದೆ. “ದಂಡಿ’ ಚಿತ್ರ ಲೇಖಕ ಡಾ. ರಾಜಶೇಖರ್ ಮಠಪತಿ ಅವರ ಕಾದಂಬರಿ ಆಧಾರಿತವಾಗಿದ್ದು, “ಕಲ್ಯಾಣಿ ಪ್ರೊಡಕ್ಷನ್’ ಬ್ಯಾನರ್‌ನಲ್ಲಿ ಮಹಾದೇವಯ್ಯ, ಉಷಾರಾಣಿ ಎಸ್. ಸಿ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ವಿಶಾಲ್ ರಾಜ್ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.
ಸದ್ದಿಲ್ಲದೆ ತಯಾರಾದ “ದಂಡಿ’ ಸಿನಿಮಾ, ಇತ್ತೀಚೆಗೆ ನಡೆದ 13ನೇ “ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ, ಶೀಘ್ರದಲ್ಲಿಯೇ “ದಂಡಿ’ಯನ್ನು ಪ್ರೇಕ್ಷಕರ ಮುಂದೆ ತರಲು ಯೋಜಿಸಿದೆ. ಅದರ ಮೊದಲ ಭಾಗವಾಗಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಚಿತ್ರದ ಹಾಡುಗಳನ್ನು ಬಿಡುಗಡೆಗೊಳಿ ಸಲಾಯಿತು. ಆದಿಚುಂಚನಗಿರಿ ಮಠದ ಸೌಮ್ಯನಾಥ ಸ್ವಾಮಿಜಿ “ದಂಡಿ’ ಚಿತ್ರದ ಹಾಡುಗಳನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ವಿಶಾಲ್ ರಾಜ್, “1904-42 ರ ನಡುವೆ ನಡೆಯುವ ಒಟ್ಟು 5 ಸ್ವಾತಂತ್ರ್ಯ ಚಳುವಳಿಗಳ ಕಥೆಯನ್ನು ಇಟ್ಟುಕೊಂಡು “ದಂಡಿ’ ಸಿನಿಮಾ ಮಾಡಲಾಗಿದೆ. ಪ್ರಮುಖವಾಗಿ ಉಪ್ಪಿನ ಸತ್ಯಾಗ್ರಹವನ್ನು ಕೇಂದ್ರವಾಗಿರಿಸಿ ಸಿನಿಮಾ ಸಾಗುತ್ತದೆ. ಅಂದು “ದಂಡಿ’ ಗಾಂಧೀಜಿ ಅವರ ಪ್ರೇರಣೆಯಿಂದ ನಡೆದಂತೆ ಸತ್ಯಾಗ್ರಹ ಉತ್ತರಕನ್ನಡ ಕರಾವಳಿ ಪ್ರದೇಶಗಳಲ್ಲೂ ನಡೆದಿತ್ತು. 1904 ರಿಂದ 42ರ ನಡುವಿನ ಘಟನೆಗಳು, ಆಗಿನ ಜನ-ಜೀವನ, ಪ್ರಾದೇಶಿಕ ವೈವಿಧ್ಯತೆ ಎಲ್ಲವನ್ನು ಹುಡುಕುತ್ತ ಹೋಗುವ ಸಿನಿಮಾ ಇಂದು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದೆ’ ಎಂದರು.
“ದಂಡಿ’ ಚಿತ್ರದಲ್ಲಿ ನಟ ಸುಚೇಂದ್ರ ಪ್ರಸಾದ್, ತಾರಾ ಅನುರಾಧಾ, ಯುವಾನ್ ದೇವ್, ಶಾಲಿನಿ ಭಟ್, ಲತೀಫ್ ಖಾನ್ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ದೇಶದ ಇತಿಹಾಸದ ಅಸ್ಪಷ್ಟ ದಾಖಲೀಕರಣದ ಶಾಪ ಅನೇಕ ತಲೆಮಾರುಗಳನ್ನು ಭಾದಿಸುತ್ತಿದೆ. ಸಿನಿಮಾ ಎಂಬ ಪ್ರಭಾವಿ ಮಾಧ್ಯಮ ಮೂಲಕ ಆ ಸರಿ ತಪ್ಪುಗಳನ್ನು ತಿಳಿಸುವುದೇ “ದಂಡಿ’. ಇದು ಕೇವಲ ಸಿನಿಮಾ ಮಾತ್ರವಲ್ಲದೆ ಒಂದು ಐತಿಹಾಸಿಕ ಕಲಾ ಪ್ರಸ್ತುತಿಯಾಗಿದೆ’ ಎಂಬುದು ನಟ ಸುಚೇಂದ್ರ ಪ್ರಸಾದ್ ಮಾತು.
“ದಂಡಿ’ ಚಿತ್ರದ ಹಾಡುಗಳಿಗೆ ರಮೇಶ್ ಕೃಷ್ಣ ಸಂಗೀತವಿದ್ದು, ವೆಂಕಟೇಶ್ ಆರ್ ಛಾಯಾಗ್ರಹಣವಿದೆ. “ದಂಡಿ’ ಚಿತ್ರದ ಶೀರ್ಷಿಕೆಗೆ “ಸಮುದ್ರದ ಎಡೆಗೆ ಸಾ-ವಿರದ ಹೆಜ್ಜೆಗಳು’ ಎಂಬ ವಿಶಿಷ್ಟ ಅಡಿಬರಹವಿದೆ.