Advertisement

ರಸ್ತೆ ಬದಿಯಲ್ಲಿ ನಿಲ್ಲಿಸಿಟ್ಟಿದ್ದ ಟ್ರಕ್ ಗಳ ಗಾಳಿ ತೆಗೆದು ಎಚ್ಚರಿಕೆ ನೀಡಿದ ಪೊಲೀಸರು

06:39 PM Oct 05, 2021 | Team Udayavani |

ದಾಂಡೇಲಿ: ನಗರದಲ್ಲಿ ಸುಗಮ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿರುವ ಹಿನ್ನಲೆಯಲ್ಲಿ ನಗರ ಠಾಣೆಯ ಪೊಲೀಸರು ನಗರದ ಹಳಿಯಾಳ ರಸ್ತೆಯಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟ್ರಕ್ ಗಳ ಚಕ್ರದ ಗಾಳಿ ತೆಗೆದು ಎಚ್ಚರಿಕೆಯ ಸಂದೇಶವನ್ನು ರವಾನಿಸಿದ ಘಟನೆ ಮಂಗಳವಾರ ನಡೆದಿದೆ.

Advertisement

ಇಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಲು ಜಾಗ ಮಂಜೂರು ಮಾಡಿ ನೀಡಲಾಗಿದ್ದರೂ, ಈವರೇಗೆ ಟ್ರಕ್ ಟರ್ಮಿನಲ್ ಕಾಮಗಾರಿ ನಿರ್ಮಾಣ ಕಾರ್ಯ ಆರಂಭವಾಗಿಲ್ಲ.  ಆದಾಗ್ಯೂ ಮಂಜೂರಾದ ಟ್ರಕ್ ಟರ್ಮಿನಲ್ ಸ್ಥಳವನ್ನು ತಕ್ಕ ಮಟ್ಟಿಗೆ ಹೊಂದಿಸಿಕೊಂಡು ಟ್ರಕ್ ಗಳನ್ನು ನಿಲುಗಡೆ ಮಾಡಲಾಗುತ್ತಿತ್ತು. ಆದರೆ ಮಳೆಯಿಂದಾಗಿ ಸಾಕಷ್ಟು ಹೊಂಡ ಗುಂಡಿಗಳು ನಿರ್ಮಾಣವಾಗಿರುವುದರಿಂದ ಇದೀಗ ಅಲ್ಲಿ ಟ್ರಕ್ ನಿಲುಗಡೆ ಮಾಡಲು ಕಷ್ಟ ಸಾಧ್ಯದ ಸ್ಥಿತಿಯಿದೆ. ಈ ಬಗ್ಗೆ ಈಗಾಗಲೆ ನಾಗರೀಕರು ಸಾಕಷ್ಟು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.

ಈ ನಿಟ್ಟಿನಲ್ಲಿ ಅಂಬೇವಾಡಿ ಕಡೆ ಟ್ರಕ್ ಗಳನ್ನು ನಿಲಲಿಸುವಂತೆ ಸೂಚನೆ ನೀಡಲಾಗಿದ್ದರೂ, ಅಷ್ಟು ದೂರವದರೆಗೆ ಹೋಗಿ ಟ್ರಕ್ ಗಳನ್ನು ನಿಲುಗಡೆ ಮಾಡಲು ಟ್ರಕ್ ಚಾಲಕರು ಆಸಕ್ತಿ ವಹಿಸುತ್ತಿಲ್ಲ. ಇನ್ನೂ ಅಂಬೇವಾಡಿಯಲ್ಲಿ ನಿಲುಗಡೆಗೆ ಅವಕಾಶ ನೀಡಿದರೂ ಅಲ್ಲಿಯೂ ಸುಗಮ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆಯಿದೆ.

ಈ ನಿಟ್ಟಿನಲ್ಲಿ ಕಾಗದ ಕಾರ್ಖಾನೆಗೆ ಟ್ರಕ್ ಗಳು ಬರುತ್ತಿರುವುದರಿಂದ ಟ್ರಕ್ ಟರ್ಮಿನಲ್ ಕಾಮಗಾರಿ ಆರಂಭವಾಗುವವರೆಗೆ ಟ್ರಕ್ ಟರ್ಮಿನಲ್ ಜಾಗದಲ್ಲಿ ಟ್ರಕ್ ಗಳ ನಿಲುಗಡೆಗೆ ಕಾಗದ ಕಾರ್ಖಾನೆ ಸಿ.ಎಸ್.ಆರ್ ಯೋಜನೆಯ ಮೂಲಕ ಮನಸ್ಸು ಮಾಡಬೇಕಾಗಿದೆ.

ಇನ್ನೂ ಟ್ರಕ್ ಟರ್ಮಿನಲ್ ಆಗುವವರೆಗೆ ಕಾಗದ ಕಾರ್ಖಾನೆಯ ಆವರಣದೊಳಗಡೆ ಸಾಕಷ್ಟು ರಸ್ತೆಗಳು ಹಾಗೂ ಜಾಗವಿರುವುದರಿಂದ ಅಲ್ಲೆ ರಸ್ತೆ ಬದಿಯಲ್ಲಿ ಅಥವಾ ಇನ್ಯಾವುದೇ ಕಡೆಗಳಲ್ಲಿ ಟ್ರಕ್ ಗಳ ನಿಲುಗಡೆಗೆ ಅವಕಾಶ ಮಾಡಿಕೊಡಬೇಕೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ರೀತಿ ಮಾಡಿದಾಗ ಮಾತ್ರ ಕಾಗದ ಕಾರ್ಖಾನೆಗೆ ಬರುವ ಟ್ರಕ್ ಗಳಿಂದ ಸಾರ್ವಜನಿಕರಿಗೆ ಮತ್ತು ಸುಗಮ ಸಂಚಾರಕ್ಕೆ ಆಗಬಹುದಾದ ಸಮಸ್ಯೆಯನ್ನು ತಡೆಗಟ್ಟಬಹುದಾಗಿದೆ.

Advertisement

ಈ ನಿಟ್ಟಿನಲ್ಲಿ ಸಂಬಂಧಪಟ್ಟ ನಗರಾಡಳಿತ, ತಾಲೂಕಾಡಳಿತ ಕ್ರಮ ಕೈಗೊಳ್ಳಬೇಕಾಗಿದೆ.  ಇಲ್ಲವಾದಲ್ಲಿ ಯಾರೊ ಮಾಡಿದ ತಪ್ಪಿಗೆ ಟ್ರಕಿನ ಚಾಲಕರು ಶಿಕ್ಷೆ ಅನುಭವಿಸಬೇಕಾದ ಸ್ಥಿತಿ ಮತ್ತೆ ಮುಂದುವರಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next