Advertisement

Dandeli: ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ರಕ್ಷಣೆ

12:45 PM Aug 20, 2023 | Team Udayavani |

ದಾಂಡೇಲಿ: ನಗರದ ಕುಳಗಿ ಸೇತುವೆಯಿಂದ ಕಾಳಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯನ್ನು ಪೊಲೀಸರು, ಜಂಗಲ್ ಲಾಡ್ಜಸ್ ಸಿಬ್ಬಂದಿಗಳು ಮತ್ತು ಸ್ಥಳೀಯರ ಸಹಕಾರದಲ್ಲಿ ರಕ್ಷಿಸಿದ ಘಟನೆ ಆ.19ರ ಶನಿವಾರ ತಡರಾತ್ರಿ ನಡೆದಿದೆ.

Advertisement

ಸ್ಥಳೀಯ ಮಾರುತಿ ನಗರದ ನಿವಾಸಿ ಸ್ಯಾಮುವೆಲ್ ದೇವದಾನಂ ಡೊಕ್ಕ ಎಂಬಾತ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.

ಈತ ಶನಿವಾರ ರಾತ್ರಿ 9 ಗಂಟೆಗೆ ಕುಳಗಿ ರಸ್ತೆಯಲ್ಲಿರುವ ಸೇತುವೆಯಿಂದ ಕಾಳಿ ನದಿಗೆ ಹಾರಿದ್ದಾನೆ. ನದಿಗೆ ಹಾರುತ್ತಿರುವ ಸಮಯದಲ್ಲಿ ಅಲ್ಲೇ ಇದ್ದ ಅಂಬೇವಾಡಿಯ ನಿವಾಸಿ ಸ್ಯಾಮುವೆಲ್ ಎಂಬವರು ಕೈಯಲ್ಲಿ ಹಿಡಿದು ರಕ್ಷಣೆ ಮಾಡಲು ಪ್ರಯತ್ನಿಸಿದರೂ ಅದು ಫಲ ನೀಡಿರಲಿಲ್ಲ.

ನದಿಗೆ ಹಾರಿದ್ದ ಸ್ಯಾಮುವೆಲ್ ದೇವದಾನಂ ಡೊಕ್ಕ ನದಿಗೆ ಹಾರಿದವನೇ ಈಜಾಡಿ ಮುಂದೆ ಹೋಗಿದ್ದಾನೆ. ನದಿಗೆ ಹಾರಿದ ಘಟನೆ ನಡೆದ ತಕ್ಷಣ ನಗರ ಪೊಲೀಸ್ ಠಾಣೆಯ ಪಿಎಸ್ಐ ಐ.ಆರ್.ಗಡ್ಡೇಕರ್ ಅವರ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕಾಗಮಿಸಿತು.

ಇಷ್ಟೊತ್ತಿಗಾಗುವಾಗಲೇ ನದಿಗೆ ಹಾರಿದ್ದ ಸ್ಯಾಮುವೆಲ್ ದೇವದಾನಂ ಡೊಕ್ಕ ನದಿ ಮಧ್ಯದಲ್ಲಿ ಇರುವ ನಡುಗಡ್ಡೆ ಪ್ರದೇಶದಲ್ಲಿ ನಿಂತು ರಕ್ಷಣೆಗಾಗಿ ಕಿರುಚಾಡಿದ್ದಾನೆ. ಈ ಸಮಯದಲ್ಲಿ ಪಿಎಸ್ಐ ಐ.ಆರ್.ಗಡ್ಡೇಕರ್ ಅವರು ಜಂಗಲ್ ಲಾಡ್ಜಸ್ ನವರಿಗೆ ಕರೆ ಮಾಡಿ ಸಿಬ್ಬಂದಿ ಸಮೇತ ತೆಪ್ಪವನ್ನು ಕಳುಹಿಸಿಕೊಡುವಂತೆ ವಿನಂತಿಸಿದ್ದರು.

Advertisement

ಆತ ನಡುಗಡ್ಡೆಯಲ್ಲಿ ನಿಂತಿದ್ದ ಹತ್ತಿರದ ಪ್ರದೇಶವಾದ ವನವಾಸಿ ಕೇಂದ್ರದತ್ತ ತೆರಳಿ, ಟಾರ್ಚಿನ ಬೆಳಕನ್ನು ನೀಡಿ, ಆತನಿಗೆ ಧೈರ್ಯ ತುಂಬಲಾಯ್ತು. ಕೆಲವೇ ಸಮಯದಲ್ಲಿ ಜಂಗಲ್ ಲಾಡ್ಜಸ್ ನಿಂದ ಮೂವರು ಸಿಬ್ಬಂದಿಗಳ ಜೊತೆ ಸ್ಥಳೀಯರು ಸೇರಿ ತೆಪ್ಪದಲ್ಲಿ ಆತನಿದ್ದ ನಡುಗಡ್ಡೆ ಸ್ಥಳಕ್ಕೆ ತೆರಳಿ ಆತನನ್ನು ರಕ್ಷಣೆ ಮಾಡಲಾಯ್ತು. ನದಿಯಿಂದ ಕರೆ ತಂದ ಬಳಿಕ ಆತನನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಗಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಈ ಸಂದರ್ಭದಲ್ಲಿ ಸಿಪಿಐ ಭೀಮಣ್ಣ.ಎಂ.ಸೂರಿ ಪಿಎಸ್ಐ ಗಳಾದ ಐ.ಆರ್. ಗಡ್ಡೇಕರ್, ಕೃಷ್ಣೆ ಗೌಡ, ಜಗದೀಶ್ ಹಾಗೂ ಪೊಲೀಸ್ ಸಿಬ್ಬಂದಿಗಳು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ನದಿಗೆ ಹಾರಿದ್ದ ವಿಷಯ ಕಾಡ್ಗಿಚ್ಚಿನಂತೆ ಹಬ್ಬಿದ್ದ ಪರಿಣಾಮವಾಗಿ ನದಿ ತೀರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. 10ನೇ ತರಗತಿಯಲ್ಲಿ ಕಲಿಯುತ್ತಿದ್ದ ಈತನ ಮಗಳು ಇತ್ತೀಚೆಗಷ್ಟೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಗಳ ಸಾವಿನಿಂದ ನೊಂದಿದ್ದ ಈತ ಆತ್ಮಹತ್ಯೆಗೆ ಯತ್ನಿಸಿರಬಹುದೆಂದು ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next