ದಾಂಡೇಲಿ : ನಗರದ ಸಾರ್ವಜನಿಕ ಆಸ್ಪತ್ರೆಯ ಆಶ್ರಯದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮೊದಲನೇಯ ಕೋವಿಡ್ ಲಸಿಕೆ ನೀಡುವ ಕಾರ್ಯಕ್ಕೆ ಸೋಮವಾರ ಬೆಳಿಗ್ಗೆ ಚಾಲನೆಯನ್ನು ನೀಡಲಾಗಿದೆ.
ಬೆಳಿಗ್ಗೆ 10 ಗಂಟೆಯಿಂದ ನಾಲ್ಕು ಕೇಂದ್ರಗಳಲ್ಲಿಯೂ ಕೋವಿಡ್ ಲಸಿಕೆ ನೀಡುವ ಕಾರ್ಯ ಆರಂಭವಾಗಿದ್ದು ಸಂಜೆ 5 ಗಂಟೆಯವರೆಗೆ ನಡೆಯಲಿದೆ. ನಗರದ ಟೌನಶೀಪಿನಲ್ಲಿರುವ ಅಂಬೇಡ್ಕರ್ ಭವನ, ಕಾಗದ ಕಾರ್ಖಾನೆಯ ರಂಗನಾಥ ಸಭಾಭವನ, ಕರ್ನಾಟಕ ಭವನ ಮತ್ತು ಹಳೆದಾಂಡೇಲಿಯ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾದ ಲಸಿಕಾ ಕೇಂದ್ರಕ್ಕೆ ಮೊದಲನೇಯ ಕೋವಿಡ್ ಲಸಿಕೆ ಪಡೆಯಲು 18 ವರ್ಷಕ್ಕಿಂತ ಮೇಲ್ಪಟ್ಟ ಫಲಾನುಭವಿಗಳು ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಬೆಳಿಗ್ಗೆಯಿಂದಲೆ ಸರತಿಯ ಸಾಲಲ್ಲಿ ನಿಂತು ಲಸಿಕೆ ಪಡೆದುಕೊಳ್ಳಲು ಉತ್ಸುಕರಾಗಿರುವುದು ಕಂಡುಬಂತು.
ನಗರದ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ: ರಾಜೇಶ ಪ್ರಸಾದ ಅವರ ನೇತೃತ್ವದಲ್ಲಿ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಕಾಗದ ಕಾರ್ಖಾನೆಯ ರಂಗನಾಥ ಸಭಾಭವನದಲ್ಲಿ ಕಾರ್ಖಾನೆಯ ಆಸ್ಪತ್ರೆ ವೈದ್ಯರಾದ ಡಾ: ಸುಮೀತ್ ಅಗ್ನಿಹೋತ್ರಿಯವರ ತಂಡ ಲಸಿಕೆ ನೀಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ನಾಲ್ಕು ಕೋಂದ್ರಗಳಿಗೂ ಪೊಲೀಸರನ್ನು ನಿಯೋಜಿಸಲಾಗಿದೆ. ಒಂದೊಂದು ಕೇಂದ್ರದಲ್ಲಿ ಇಂದು ತಲಾ 250 ಜನರಿಗೆ ಲಸಿಕೆ ನೀಡಲಾಗುತ್ತದೆ. ತಹಶೀಲ್ದಾರ್ ಶೈಲೇಶ ಪರಮಾನಂದ, ಪೌರಾಯುಕ್ತರಾದ ಆರ್.ಎಸ್.ಪವಾರ್, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ: ರಾಜೇಶಪ್ರಸಾದ ಅವರು ನಾಲ್ಕು ಲಸಿಕಾ ಕೇಂದ್ರಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ :ಪಣಜಿ : ಹರವಳೆ ಜಲಪಾತದಲ್ಲಿ ಬಿದ್ದು ಪಂಜಾಬ್ ಮೂಲದ ವ್ಯಕ್ತಿ ಸಾವು
ನಗರದ ನಾಲ್ಕು ಕೋವಿಡ್ ಲಸಿಕೆ ಕೇಂದ್ರಗಳಲ್ಲಿಯೂ ಜನಜಾತ್ರೆಯಾಗಿದ್ದು, ನಿಗಧಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಜನ ಆಗಮಿಸಿದ್ದಾರೆ. ಇಂದಿನ ಜನಜಾತ್ರೆಯನ್ನು ನೋಡಿದಾಗ ಸತತ ವಾರಗಳವರೆಗೆ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯ ಮುಂದುವರಿಸಿದ್ದಲ್ಲಿ ಮತ್ತು ಆ ಬಗ್ಗೆ ಈಗಲೆ ಸೂಚನೆ ನೀಡಿದ್ದಲ್ಲಿ ಮಾತ್ರ ಜನಜಂಗುಲಿಯನ್ನು ತಪ್ಪಿಸಬಹುದಾಗಿದೆ. ಇನ್ನೂ ಜನರು ಸಹ ಸಾರ್ವಜನಿಕ ಆರೋಗ್ಯ ಇಲಾಖೆಯ ಈ ಕಾರ್ಯಕ್ಕೆ ಗದ್ದಲ ಮಾಡದೇ ಜನಜಾತ್ರೆಯಾಗದಂತೆ ಸಹಕರಿಸಬೇಕಾಗಿದೆ.