ದಾಂಡೇಲಿ: ಚಲಿಸುತ್ತಿದ್ದ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದು ಮಹಿಳೆಯೋರ್ವರು ಸಾವನ್ನಪ್ಪಿದ ಘಟನೆ ನಗರದ ಬರ್ಚಿ ರಸ್ತೆಯ ಪೆಟ್ರೋಲ್ ಬಂಕ್ ಬಳಿ ಜು.24ರ ಸೋಮವಾರ ನಡೆದಿದೆ.
ನಗರದ ಬಂಗೂರ ನಗರದ ವೈಟೈಪ್ ನಿವಾಸಿ ಪ್ರಭಾವತಿ ರಾಂಬಾಬು ಶರ್ಮಾ (61 ವರ್ಷ) ಮೃತಪಟ್ಟ ದುರ್ದೈವಿ.
ಪ್ರಭಾವತಿ ತನ್ನ ಮಗ ಮಾಯಾಂಕ್ ಶರ್ಮಾ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಕುಳಗಿ ರಸ್ತೆಯಲ್ಲಿರುವ ಶಿವಮಂದಿರಕ್ಕೆ ಹೋಗುತ್ತಿದ್ದ ವೇಳೆ ಅವರ ಕೈಯಲ್ಲಿದ್ದ ಕೊಡೆ ಒಮ್ಮೆಲೆ ಗಾಳಿಗೆ ಬಲವಾಗಿ ಎಳೆದಂತೆ ಆಗಿದ್ದು, ಈ ಸಮಯದಲ್ಲಿ ಪ್ರಭಾವತಿ ಅವರು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಈ ಪರಿಣಾಮ ತಲೆಗೆ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೂಡಲೇ ಆಂಬುಲೆನ್ಸ್ ಮೂಲಕ ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಗಿದೆಯಾದರೂ ಪ್ರಭಾವತಿ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.
ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಶವಗಾರದಲ್ಲಿ ಇರಿಸಲಾಗಿದೆ. ಸ್ಥಳಕ್ಕೆ ಮತ್ತು ಸಾರ್ವಜನಿಕ ಆಸ್ಪತ್ರೆಗೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.