ದಾಂಡೇಲಿ: ಹತ್ತಿರ ದ್ವಿಚಕ್ರ ವಾಹನವೊಂದು ಸ್ಕಿಡ್ ಆಗಿ ಓರ್ವ ಗಂಭೀರ ಗಾಯಗೊಂಡ ಘಟನೆ ನಗರದ ಸೋಮಾನಿ ವೃತ್ತದ ಬಳಿ ಜೂ.5ರ ಸೋಮವಾರ ತಡರಾತ್ರಿ ನಡೆದಿದೆ.
ಗಾಂಧಿನಗರದ ನಿವಾಸಿ 37 ವರ್ಷದ ನೌಷದ್ ಮಹಮ್ಮದ್ ಆಶಮ್ ಸವಣೂರು ಗಾಯಗೊಂಡ ವ್ಯಕ್ತಿ.
ಬಾಂಬೂ ಗೇಟ್ ನಿಂದ ಬರುತ್ತಿದ್ದ ದ್ವಿಚಕ್ರ ವಾಹನ ಸೋಮಾನಿ ವೃತ್ತದ ಬಳಿ ಸ್ಕಿಡ್ ಆಗಿ ಬಿದ್ದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ನೌಷದ್ ಎಂಬಾತನ ಕಾಲಿನ ಗಂಟಿಗೆ ಮತ್ತು ಕಾಲಿಗೆ ತೀವ್ರ ಸ್ವರೂಪದ ಗಾಯವಾಗಿದೆ. ತಕ್ಷಣ ಸ್ಥಳೀಯರು ಆತನನ್ನು ಆಂಬುಲೆನ್ಸ್ ಮೂಲಕ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದಾರೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.
Related Articles
ಸ್ಥಳೀಯರ ಮಾಹಿತಿ ಪ್ರಕಾರ ಸೋಮಾನಿ ವೃತ್ತದಲ್ಲಿ ಬ್ಯಾನರ್ ಒಂದನ್ನು ಹಾಕಲಾಗಿದ್ದು, ಆ ಬ್ಯಾನರ್‌ನ ಕೆಳತುದಿಯ ಎರಡು ಕಡೆಗಳಲ್ಲಿ ಇಟ್ಟಂಗಿ ತುಂಡುಗಳನ್ನು ಕಟ್ಟಿ ಹಾಕಿರುವುದರಿಂದ ದ್ವಿಚಕ್ರ ವಾಹನ ಬರುತ್ತಿರುವ ಸಂದರ್ಭದಲ್ಲಿ ವಾಹನ ಸವಾರನಿಗೆ ಇಟ್ಟಂಗಿ ಕಾಣದೇ ಇದ್ದುದ್ದರಿಂದ ಬೈಕ್ ಸ್ಕಿಡ್ ಆಗಿದೆ.
ಈ ಸಂದರ್ಭದಲ್ಲಿ ಸೋಮಾನಿ ವೃತ್ತದ ಸುತ್ತಲು ಆಳವಡಿಸಲಾದ ರಾಡ್ ಕಾಲಿನ ಗಂಟಿಗೆ ಬಲವಾಗಿ ಬಿದ್ದಿದ್ದರಿಂದ ಗಂಭೀರ ಗಾಯವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಗಾಯಗೊಂಡ ವ್ಯಕ್ತಿ ದ್ವಿ ಚಕ್ರ ವಾಹನವನ್ನು ಚಲಾಯಿಸುತ್ತಿದ್ದಾನೆಯೇ ಅಥವಾ ಹಿಂಬದಿ ಸವಾರನಾಗಿದ್ದನೇ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ.
ದಾಂಡೇಲಿ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳ ಸ್ಪಂದನೆಗೆ ಮತ್ತು ಮಾನವೀಯ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಸೋಮಾನಿ ವೃತ್ತದಲ್ಲಿ ಯಾವುದೇ ರೀತಿಯ ಬ್ಯಾನರ್, ನಾಮಫಲಕವನ್ನು ಅತೀ ಕೆಳಗೆ ಕಟ್ಟದಂತೆ ನಗರ ಸಭೆಯವರು ಅಗತ್ಯ ಕ್ರಮವನ್ನು ಕೈಗೊಳ್ಳಬೇಕು. ಇಲ್ಲವಾದಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ನಡೆಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.