Advertisement
ಕಾಪು: ಮಧ್ವಾಚಾರ್ಯರ ದಂಡದಿಂದ ಉದಿಸಿದ ಕ್ಷೇತ್ರ ದಂಡತೀರ್ಥ. ಉಡುಪಿ ಪರ್ಯಾಯ ಸರ್ವಜ್ಞ ಪೀಠವನ್ನೇರುವ ಮುನ್ನ ಪೀಠಾಧಿಪತಿಗಳು ದಂಡತೀರ್ಥ ಕೆರೆಯಲ್ಲಿ ಸ್ನಾನ ಮಾಡಿ ಬರುವುದು ಸಂಪ್ರದಾಯ. ಇಂತಹ ಧಾರ್ಮಿಕ ಮತ್ತು ಐತಿಹಾಸಿಕ ಪ್ರಸಿದ್ಧಿಗೆ ಕಾರಣವಾಗಿರುವ ಕಾಪು ಸಮೀಪದ ದಂಡತೀರ್ಥದಲ್ಲಿ ಹಿರಿಯ ಗಾಂಧೀವಾದಿ ದಿ| ಮುದ್ದಣ್ಣ ಶೆಟ್ಟಿ ಅವರು 1917ರಲ್ಲಿ ಸ್ಥಾಪಿಸಿದ ದಂಡತೀರ್ಥ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಪೂರೈಸಿದ ಸಂಭ್ರಮದಲ್ಲಿದೆ.
1917ರಲ್ಲಿ ಪ್ರಾರಂಭಗೊಂಡಿದ್ದ ದಂಡತೀರ್ಥ ಕನ್ನಡ ಮಾಧ್ಯಮ ಶಾಲೆಯು ಸಾವಿರಾರು ಮಂದಿ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಕಾರಣವಾಗಿದ್ದು, 1954ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿತು. ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ಆಂಗ್ಲ ಮಾ. ಪ್ರೌ. ಶಾಲೆ, ದಂಡತೀರ್ಥ ಪಿಯು ಕಾಲೇಜು ಮತ್ತು ಪ್ರಶಾಂತ್ ಪ್ಯಾರಾ ಮೆಡಿಕಲ್ ಕಾಲೇಜು ಕೂಡಾ ಇಲ್ಲಿ ತಲೆ ಎತ್ತಿದೆ.
Related Articles
Advertisement
ಟ್ರಸ್ಟ್‌ನ ಪೂರ್ಣ ಬೆಂಬಲಸಂಸ್ಥೆಯ ಸಂಸ್ಥಾಪಕ ದಿ| ಮುದ್ದಣ್ಣ ಶೆಟ್ಟಿ ಅವರ ನಿಧನಾನಂತರ ಅವರ ಪತ್ನಿ ಗಿರಿಜಾ ಎಂ. ಶೆಟ್ಟಿ, ಅಳಿಯ ಗೋವಿಂದ ಶೆಟ್ಟಿ, ನಂತರ ಗೋವಿಂದ ಶೆಟ್ರ ಪತ್ನಿ ವಸಂತಿ ಜಿ. ಶೆಟ್ಟಿ ಶಾಲಾ ಸಂಚಾಲಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ನಂತರ ಅವರ ಅಳಿಯ ಡಾ| ಕೆ. ಪ್ರಭಾಕರ ಶೆಟ್ಟಿ ಅವರ ನೇತೃತ್ವದಲ್ಲಿ ಉಳಿಯಾರಗೋಳಿ ಪದ್ದಕ್ಕ ಕೋಟಿ ಶೆಟ್ಟಿ ಮೆಮೋರಿಯಲ್ ಟ್ರಸ್ಟ್‌ನ ಮೂಲಕ ಸಂಸ್ಥೆಯು ಪ್ರಬಲವಾಗಿ ಮುನ್ನಡೆದಿದೆ. ಪ್ರಸ್ತುತ ಅವರ ಮಗ ಡಾ| ಕೆ. ಪ್ರಶಾಂತ್ ಶೆಟ್ಟಿ ಸಂಸ್ಥೆಯ ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೆಮ್ಮೆಯ ಶಿಕ್ಷಕರು
ಅಗಳಿ ರಾಮರಾವ್ ಇಲ್ಲಿನ ಪ್ರಥಮ ಮುಖ್ಯೋಪಾಧ್ಯಾಯರಾಗಿದ್ದು, ಉಳಿದಂತೆ ಸಹದೇವ ಅಮಣ್ಣ, ಯು. ಗೋವಿಂದ, ಪಾಂಗಾಳ ಸುಬ್ಟಾ ರಾಬ್ ಮತ್ತು ಜಯಾ ಬಾೖ ಅವರು ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಗುರುತಿಸಲ್ಪಡುವಂತಹ ಸಾಧನೆಗೈದಿದ್ದಾರೆ. ಇವರಲ್ಲಿ ನಿವೃತ್ತ ಮುಖ್ಯೋಪಾಧ್ಯಾಯಿನಿ ಜಯಾ ಬಾೖ, ಪ್ರಸ್ತುತ ಮಖ್ಯೋಪಾಧ್ಯಾಯಿನಿ ವಾರಿಜಾ ಟೀಚರ್ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯೂ ದೊರಕಿದೆ. ಹೆಮ್ಮೆಯ ಹಳೇ ವಿದ್ಯಾರ್ಥಿಗಳು
ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯ ನಿವೃತ್ತ ಡೀನ್ ಡಾ| ಕೆ. ಆರ್. ಶೆಟ್ಟಿ, ಅಂತಾರಾಷ್ಟ್ರೀಯ ಖ್ಯಾತಿಯ ಮೂಳೆರೋಗ ತಜ್ಞ ಡಾ| ವಿಜಯ್, ಅಮೆರಿಕಾದ ವೈದ್ಯ ಡಾ| ಸೀತಾರಾಮ ಭಟ್, ಬೆಂಗಳೂರು ವಿವಿ ಪ್ರೊಫೆಸರ್ ಡಾ| ಜಯ ಶೆಟ್ಟಿ, ಕರ್ನಾಟಕ ಹಾಲು ಒಕ್ಕೂಟದ ನಿರ್ದೇಶಕ ಕಾಪು ದಿವಾಕರ ಶೆಟ್ಟಿ ಸಹಿತ ಹಲವು ಮಂದಿ ರಾಜಕೀಯ, ಶೈಕ್ಷಣಿಕ, ವೈದ್ಯಕೀಯ ಕ್ಷೇತ್ರದ ಸಾಧಕರುಗಳನ್ನು ಬೆಳೆಸಿರುವುದು ದಂಡತೀರ್ಥ ಶಾಲೆಯ ಹೆಗ್ಗಳಿಕೆಯಾಗಿದೆ. ಆಡಳಿತ ಮಂಡಳಿ, ಸಂಚಾಲಕರ ಪ್ರೋತ್ಸಾಹ ದಿಂದಾಗಿ ಇಲ್ಲಿನ ಮಕ್ಕಳನ್ನು ಉತ್ತಮ ರೀತಿಯಲ್ಲಿ ಬೆಳೆಸಲು ಸಾಧ್ಯವಾಗಿದೆ. ಆಂಗ್ಲ ಮಾಧ್ಯಮ ಶಾಲೆಗೆ ಸಮಾನವಾಗಿ ಮಕ್ಕಳಿಗೆ ವಿವಿಧ ಸೌಲಭ್ಯಗಳನ್ನು ಜೋಡಿಸಲಾಗಿದ್ದು, ಸರಕಾರದ ಎಲ್ಲ ಸವಲತ್ತುಗಳು ನಮ್ಮ ಶಾಲಾ ಮಕ್ಕಳಿಗೂ ದೊರಕುವಂತಾಗಬೇಕು.
-ವಾರಿಜಾ ಟೀಚರ್, ಮುಖ್ಯೋಪಾಧ್ಯಾಯಿನಿ ಶತಮಾನ ಪೂರೈಸಿದ ಕನ್ನಡ ಮಾಧ್ಯಮ ಶಾಲೆಗೆ ಶತಮಾನೋತ್ಸವದ ನೆನಪಿಗಾಗಿ 1.50 ಕೋಟಿ ರೂ. ವೆಚ್ಚದ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿ ಕೊಡಲಾಗಿದೆ. ಇಲ್ಲಿನ ದಂಡತೀರ್ಥ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪಡೆಯುವ ರೀತಿಯದ್ದೇ ಎಲ್ಲಾ ಸವಲತ್ತುಗಳನ್ನು ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೂ ಒದಗಿಸಿಕೊಡಲಾಗುತ್ತಿದೆ.
-ಶೋಭಾ ಪ್ರಭಾಕರ ಶೆಟ್ಟಿ,
ಹಳೇ ವಿದ್ಯಾರ್ಥಿನಿ -ರಾಕೇಶ್ ಕುಂಜೂರು