ಹುಣಸೂರು: ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ನಗರದ ಸಂತ ಜೋಸೆಫರ ವಿದ್ಯಾಸಂಸ್ಥೆಯಲ್ಲಿ ಏಸುಕ್ರಿಸ್ತನ ಜನನ, ಸಂದೇಶಗಳ ಕುರಿತ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಶಾಲಾ ಮಕ್ಕಳು ಹಬ್ಬದ ಸಂದೇಶ ಸಾರಿದರು.
ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳು ಏಸು ಕ್ರಿಸ್ತನ ಜನನ ಕುರಿತು ನೃತ್ಯರೂಪಕ ಪ್ರದರ್ಶಿಸಿದರು. ಸಾಂತಾಕ್ಲಾಸ್‌ನ ಹಾಡುಗಳು ಹಾಗೂ ನೃತ್ಯ ಕಣ್ಮನ ಸೆಳೆಯಿತು. ಈ ವೇಳೆ ಕೇಕ್ ಕತ್ತರಿಸಿ ಎಲ್ಲರಿಗೂ ಸಿಹಿ ವಿತರಿಸಿದರು.
ಫಾದರ್ ಜೆ.ರಾಯಪ್ಪ ಮಾತನಾಡಿ, ಯಾವ ಧರ್ಮ ಮನುಷ್ಯರಲ್ಲಿ ಜೀವನ ಪ್ರೇಮ, ಆಂತರಿಕ ಶಿಸ್ತು ಹಾಗೂ ನೈತಿಕ ಮೌಲ್ಯ ಪ್ರೇರೇಪಿಸುವುದೋ ಅದು ನಿಜವಾದ ಅರ್ಥದಲ್ಲಿ ಮಾನವ ಧರ್ಮವೆನಿಸುತ್ತದೆ ಎಂದು ಹೇಳಿದರು. ಧರ್ಮಗಳ ನಡುವಿನ ಸಾಮರಸ್ಯದಿಂದ ನಮ್ಮಲ್ಲಿರುವ ಶಂಕೆ, ಸಂಕುಚಿತ ಮನೋಭಾವ, ಧರ್ಮಾಂಧತೆ, ಕೌರ್ಯ ಮತ್ತಿತರ ಗುಣಗಳನ್ನು ನಾಶಪಡಿಸಬಹುದು ಎಂದರು.
ಶಿಕ್ಷಣ ಸಂಯೋಜಕ ಜೆ.ಮಹದೇವ್ ಕಲ್ಕುಣಿಕೆ, ಯಾವುದೇ ಧರ್ಮ ಮನುಷ್ಯರ ನಡುವೆ ಸಂಘರ್ಷ ಅಥವಾ ವಿಭಜನೆ ಬಗ್ಗೆ ಹೇಳಿಲ್ಲ. ನಮ್ಮೆಲ್ಲರ ನಡುವಿನ ಅನುಮಾನದ ಗೋಡೆಗಳು ನಾಶವಾಗಿ ಅನುರಾಗದ ಸೇತುವೆಗಳು ನಿರ್ಮಾಣವಾಗಬೇಕೆಂದರು.
ಕೊಡಗು ಜಿಲ್ಲಾ ಮುಸ್ಲಿಂ ಅಸೋಷಿಯೇಷನ್ ಕೆ.ಎಂ.ಖಾನ್, ಕ್ರೈಸ್ತಧರ್ಮವು ಶಾಂತಿ, ಕ್ಷಮಾಗುಣ, ಸಮಾನತೆ ಮೌಲ್ಯಗಳನ್ನು ವಿಶ್ವದಾದ್ಯಂತ ಪಸರಿಸುತ್ತಿದೆ. ಏಸುಕ್ರಿಸ್ತ ಬೋಧಿಸಿದ ಸಂದೇಶಗಳಲ್ಲಿ ಇಂದಿನ ಸಮಾಜದ ಜಾತಿ-ಧರ್ಮಾಧಾರಿತ ಕ್ಷೊàಭೆ, ಗೊಂದಲಗಳಿಗೆ ಪರಿಹಾರೋಪಾಯಗಳಿವೆ ಎಂದು ತಿಳಿಸಿದರು.
ಸಿಆರ್‌ಪಿ ಮಾಧುಪ್ರಸಾದ್ ಮಾತನಾಡಿದರು. ಅರ್ಸುಲೆನ್ ಫ್ರಾನ್ಸಿಸ್ಕನ್ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ತೆರೇಸಾ ಡಿ ಸೋಜಾ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲಾ ಮುಖ್ಯ ಶಿಕ್ಷಕಿ ಲೀನಾಮಸ್ಕರೇನಸ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಫಿಲೋಮಿನಾ ನರೋನ್ಹಾ, ಕಾಲೇಜು ವಿಭಾಗಗಳ ಮುಖ್ಯಸ್ಥರು, ಶಿಕ್ಷಕ ವಂದ ಇದ್ದರು.