Advertisement
ಕುಕ್ಕುಂದೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಕ್ಕುಂದೂರು ನಕ್ರೆ ಭಾಗಕ್ಕೆ ಸಂಪರ್ಕಿಸುವ 2 ಕಿ. ಮೀ. ದೂರದ ಡಾಮರು ರಸ್ತೆಯನ್ನು 75 ಲಕ್ಷ ರೂ. ವೆಚ್ಚದಲ್ಲಿ ಮರು ಡಾಮರು ಕಾಮಗಾರಿ ಮಾಡಲಾಗುತ್ತಿದೆ. ಕಳೆದೆರಡು ದಿನಗಳಿಂದ ಕಾಮಗಾರಿ ನಡೆಯುತ್ತಿದೆ. ಒಂದು ಗುಂಡಿಯೂ ಇಲ್ಲದ ರಸ್ತೆಯಲ್ಲಿ ನಡೆಯುವ ಈ ಕಾಮಗಾರಿ ಗುಣಮಟ್ಟದ ಬಗ್ಗೆ ಸಾರ್ವಜನಿಕರಲ್ಲಿ ಸಂಶಯ ಮೂಡಿಸಿದೆ.
Related Articles
Advertisement
ಎ.13ರಂದು ಕಾಮಗಾರಿ ನಡೆಸುವ ವೇಳೆ ಹಳೆಯ ರಸ್ತೆಯನ್ನು ಸ್ವತ್ಛಗೊಳಿಸದೆ ಇದ್ದ ಹಾಗೆ ಅದರ ಮೇಲೆಯೇ ಡಾಮರು ಹಾಕಲಾಗುತ್ತಿತ್ತು. ಈ ವಿಚಾರ ಪ್ರಭಾರ ಎಇಇ ಸೋಮಶೇಖರ್ ಅವರ ಗಮನಕ್ಕೆ ಬಂದ ತತ್‌ಕ್ಷಣ ಅವರು ಸ್ಥಳಕ್ಕೆ ತೆರಳಿ ಪರಿಶೀಲಿಸಿ, ಲೋಪವಾಗದಂತೆ ಸೂಚನೆ ನೀಡಿದ್ದಾರೆ. ಕಾಮಗಾರಿ ಗುಣಮಟ್ಟದ ಬಗ್ಗೆ ಜನರಲ್ಲಿ ಆರಂಭದಲ್ಲೇ ಸಂಶಯವಿದೆ.
ಗುಣಮಟ್ಟಕ್ಕೆ ನಾನೇ ಖಾತರಿ ಎಂದ ಎಂಜಿನಿಯರ್!
ಈ ಮಾರ್ಗದ ತಿರುವಿನಲ್ಲಿ ರಸ್ತೆ ಹಾಳಾಗುತ್ತ ಬಂದಿತ್ತು. ಇನ್ನು ಒಂದು ವರ್ಷ ಹೋದರೆ ಪೂರ್ಣ ಹಾಳಾಗುತ್ತಿತ್ತು. 2013ರಲ್ಲಿ ರಿನೀವಲ್ ಆಗಿದ್ದು. ಈಗ ನಡೆಯುತ್ತಿರುವ ಕಾಮಗಾರಿ ಗುಣಮಟ್ಟದ ಬಗ್ಗೆ ಎಂಜಿನಿಯರ್ ಆಗಿ ನಾನು ಖಾತರಿ ಕೊಡುತ್ತಿದ್ದೇನೆ. ಮುಂದಿನ 3 ವರ್ಷದ ವರೆಗೆ ರಸ್ತೆ ಏನೂ ಹಾಳಾಗಲ್ಲ. ನಾನಿದ್ದೇನಲ್ಲ ಎಂದು ಲೋಕೋಪಯೋಗಿ ಇಲಾಖೆ ಜೂ. ಎಂಜಿನಿಯರ್ ಸಂದೀಪ್ ಲೋಯಿಡ್ ಡಿ’ಸಿಲ್ವ ಪ್ರತಿಕ್ರಿಯಿಸಿದ್ದಾರೆ.
ಯಾವುದು ಸತ್ಯ, ಮಿತ್ಯ ಪ್ರಶ್ನೆ
ಇಲಾಖೆಗೆ ಯೋಜನಾ ವೆಚ್ಚದ ಬಗ್ಗೆ ಸ್ಪಷ್ಟ ಮಾಹಿತಿ ಯಿಲ್ಲ. ಎಇಇ 50 ಲಕ್ಷ ರೂ. ಹೇಳಿದರೆ, ಇಲಾಖಾ ಎಂಜಿನಿಯರ್ 75 ಲಕ್ಷ ರೂ. ಎಂದು ಹೇಳುತ್ತಾರೆ. ಗುತ್ತಿಗೆದಾರರು 2 ಕೋ.ರೂ. ಕಾಮಗಾರಿ ಎಂದು ಹೇಳುತ್ತಿದ್ದಾರೆ. ಯಾವುದು ಸತ್ಯ ಯಾವುದು ಮಿಥ್ಯ. ಗೋಪಾಲ ಭಂಡಾರಿ ಶಾಸಕತ್ವದ ಅವಧಿಯಲ್ಲಿ ಸ್ಥಳೀಯ ಭೂಮಾಲಕರ ಮನವೊಲಿಸಿ ಸೇತುವೆಯ ಸಂಪರ್ಕ ರಸ್ತೆಯನ್ನು ವಿಸ್ತರಣೆ ಮಾಡಲಾಗಿತ್ತು. ದಟ್ಟ ವಾಹನ ಸಂಚಾರದ ಈ ರಸ್ತೆಗೆ ಮರುಡಾಮರು ಕಾಮಗಾರಿಗಿಂತ ಮುಖ್ಯವಾಗಿ ಸೇತುವೆ ವಿಸ್ತರಣೆ ಅಗತ್ಯವಿತ್ತು. -ಬಿಪಿನ್‌ಚಂದ್ರಪಾಲ್ ನಕ್ರೆ, ಸ್ಥಳೀಯರು