Advertisement

ಸರ್ವಿಸ್‌ ರಸ್ತೆಯ ಕೂಡು ರಸ್ತೆಗಳಿಗಾಯ್ತು ಡಾಮರು

10:13 AM May 17, 2022 | Team Udayavani |

ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯ ಗುತ್ತಿಗೆದಾರ ಸಂಸ್ಥೆ ನವಯುಗ ಸಂಸ್ಥೆ ಕೊನೆಗೂ ಕುಂದಾಪುರ ನಗರದ ಸರ್ವಿಸ್‌ ರಸ್ತೆಯ ಕೂಡು ರಸ್ತೆಗಳ ಪ್ರವೇಶಗಳಿಗೆ ಡಾಮರು ಹಾಕಿದೆ.

Advertisement

ಸರ್ವಿಸ್‌ ರಸ್ತೆಯನ್ನು ಕೂಡುವ ಪುರಸಭೆ ವ್ಯಾಪ್ತಿಯ ರಸ್ತೆಗಳು ಸರಿಯಾಗಿ ವಾಹನ ಸಾಗದಂತೆ ಆಗಿತ್ತು. ಹೆಸರಿಗಷ್ಟೇ ಕೂಡು ರಸ್ತೆಗಳಾಗಿದ್ದು ಸರ್ವಿಸ್‌ ರಸ್ತೆಗೆ ಕೂಡುವಲ್ಲಿ ವಾಹನಗಳನ್ನು ಸರ್ವಿಸ್‌ ರಸ್ತೆಯಿಂದ ಇನ್ನೊಂದು ರಸ್ತೆಗೆ ಇಳಿಸುವಂತಿರಲಿಲ್ಲ, ಕೂಡು ರಸ್ತೆಯಿಂದ ಸರ್ವಿಸ್‌ ರಸ್ತೆಗೆ ವಾಹನ ಸುಲಭದಲ್ಲಿ ಕೊಂಡೊಯ್ಯುವಂತಿಲ್ಲ ಎಂಬಂತಹ ಸ್ಥಿತಿ ಇತ್ತು. ಅತೀ ಹೆಚ್ಚು ವಾಹನಗಳು ಓಡಾಟ ನಡೆಸುವ, ವ್ಯಾಸರಾಜ ಮಂದಿರವೂ ಸೇರಿದಂತೆ, ಮೆಸ್ಕಾಂ, ಎಲ್‌ಐಸಿ ಮೊದಲಾದ ಹತ್ತಾರು ಸರಕಾರಿ ಕಚೇರಿಗಳಿರುವ ಎಲ್‌ಐಸಿ ರಸ್ತೆಯ ಅಭಿವೃದ್ಧಿ ಕನಸು ನನಸಾದಂತೆ ಡಾಮರು ಹಾಸಲಾಗಿದೆ. ಇಲ್ಲಿ ಸರ್ವಿಸ್‌ ರಸ್ತೆಗೆ ಕೂಡುವಲ್ಲಿ ಹದಗೆಟ್ಟು ಅದೆಷ್ಟೋ ಸಮಯಗಳಾಗಿತ್ತು. ಅನೇಕ ಸಾಮಾನ್ಯ ಸಭೆಗಳಲ್ಲಿ ಪುರಸಭೆ ಸದಸ್ಯರ ಮೂಲಕ ಚರ್ಚೆಗಳಾಗಿತ್ತು. ರಸ್ತೆ ಕಾಮಗಾರಿ ಪುರಸಭೆ ನಡೆಸಿದ್ದರೂ ಸರ್ವಿಸ್‌ ರಸ್ತೆ ಸೇರುವಲ್ಲಿ ಬಾಕಿಯಾಗಿತ್ತು. ಸಿಡಿಪಿಒ ಕಚೇರಿಗೆ ತೆರಳುವಲ್ಲಿನ ರಸ್ತೆಗೂ ಡಾಮರು ಹಾಕಲಾಗಿದೆ.

ಸಂಕಷ್ಟ

ಕುಂದೇಶ್ವರ ದ್ವಾರದ ಎದುರು ರಾಧಾ ಮೆಡಿಕಲ್‌ ಬಳಿಯಿಂದ ಹೋಗಿ ಸರ್ವಿಸ್‌ ರಸ್ತೆಗೆ ಕೂಡುವ ರಸ್ತೆಯ ಲ್ಲಂತೂ ಸರ್ವಿಸ್‌ ರಸ್ತೆಗೆ ಹೋಗುವುದು/ ಸರ್ವಿಸ್‌ ರಸ್ತೆಯಿಂದ ಇಳಿಸುವುದು ಶಾಪವೇ ಆಗಿತ್ತು.

ರಿಕ್ಷಾದವರಂತೂ ಯಾಕಾದರೂ ಪ್ರಯಾಣಿಕರು ಈ ರಸ್ತೆ ಮೂಲಕ ಪ್ರಯಾಣ ಅಪೇಕ್ಷಿಸುತ್ತಾರೋ ಎಂದು ಶಾಪ ಹಾಕುವಂತಾಗಿತ್ತು. ದ್ವಿಚಕ್ರ ವಾಹನಗಳು ಆಯ ತಪ್ಪಿ ಅಪಘಾತಕ್ಕೀಡಾಗುತ್ತಿತ್ತು. ಮುಕ್ಕಾಲು ಅಡಿಗಿಂತ ಹೆಚ್ಚು ಎತ್ತರದ ಕಾಂಕ್ರೀಟ್‌ ರಸ್ತೆ ತುಂಡಾಗಿ ಎಲ್ಲ ಬಗೆಯ ವಾಹನಗಳ ಅಡಿತಪ್ಪುತ್ತಿತ್ತು. ಇಲ್ಲಿಗೆ ಪುರಸಭೆಯೇ ಕಾಂಕ್ರಿಟ್‌ ಹಾಕುವ ಮೂಲಕ ಎಲ್ಲ ಅನಾಹುತಗಳಿಗೆ ತೆರೆ ಎಳೆದಿದೆ. ಹೆದ್ದಾರಿಯ ಕ್ಯಾಟಲ್‌ ಅಂಡರ್‌ಪಾಸ್‌ ಎದುರು ಇರುವ ನಂದಿಬೆಟ್ಟು ರಸ್ತೆಯ ಸಂಪರ್ಕವೂ ಸರ್ವಿಸ್‌ ರಸ್ತೆಯಿಂದ ತೀರಾ ನಾದುರಸ್ತಿಯಲ್ಲಿದ್ದುದನ್ನು ಪುರಸಭೆಯೇ ಕಾಂಕ್ರೀಟ್‌ ಹಾಕಿಸುವ ಮೂಲಕ ಸಮಸ್ಯೆ ನಿವಾರಿಸಿದೆ.

Advertisement

ಮೆಸ್ಕಾಂಗೆ ಅರ್ಜಿ

ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೂ ಕುಂದಾಪುರ ಪುರಸಭೆಗೂ ಅಷ್ಟಕ್ಕಷ್ಟೇ ಎಂಬಂತಿದೆ. ಪುರಸಭೆ ಆಡಳಿತ ಹೇಳಿದ ಯಾವ ಮಾತಿಗೂ, ಮನವಿಗೂ, ಬೇಡಿಕೆಗೂ ಹೆದ್ದಾರಿ ಪ್ರಾಧಿಕಾರ ಬೆಲೆಯೇ ನೀಡುತ್ತಿಲ್ಲ. ಇದರಿಂದಾಗಿ ಜನರ ಗೋಳಿಗೆ ಪರಿಹಾರ ವಿಳಂಬವಾಗುತ್ತಿದೆ. ಹೆದ್ದಾರಿಗೆ ದೀಪ ಹಾಕುವ ಕಾಮಗಾರಿ ಇನ್ನೂ ಬಾಕಿಯಲ್ಲಿದೆ. ಮಾರ್ಚ್‌ ತಿಂಗಳಿನಲ್ಲಿಯೇ ಮೆಸ್ಕಾಂಗೆ ಅರ್ಜಿ ಸಲ್ಲಿಸಿದ್ದೇವೆ ಎಂದು ಗುತ್ತಿಗೆದಾರ ಸಂಸ್ಥೆಯ ಪ್ರತಿನಿಧಿ ಸಹಾಯಕ ಕಮಿಷನರ್‌ ಅವರ ಸಭೆಯಲ್ಲಿ ಹೇಳಿದ್ದರು. ಆದರೆ ಮಾಣಿ ರಂಜನ್‌ ಅವರು ಸರಕಾರದ ಮುಖ್ಯ ಕಾರ್ಯದರ್ಶಿಗೆ, ಮೆಸ್ಕಾಂಗೆ ದೂರು ಸಲ್ಲಿಸಿದಾಗ ತಿಳಿದ ಮಾಹಿತಿ ಏನೆಂದರೆ ಗುತ್ತಿಗೆದಾರ ಸಂಸ್ಥೆ ಮೆಸ್ಕಾಂಗೆ ಅರ್ಜಿ ಸಲ್ಲಿಸಿದ್ದೇ ಮೇ ಮೊದಲ ವಾರದಲ್ಲಿ. ಹೀಗೆ ಹೆಜ್ಜೆ ಹೆಜ್ಜೆಗೂ ಸುಳ್ಳು ಹೇಳುತ್ತಾ ಇದ್ದ ಗುತ್ತಿಗೆದಾರ ಸಂಸ್ಥೆ ಈಗ ಶಾಸ್ತ್ರಿ ಸರ್ಕಲ್‌ ಬಳಿಯೆಲ್ಲ ಡಾಮರು ಹಾಕಿದ್ದು ಕೂಡು ರಸ್ತೆಗಳ ಪ್ರವೇಶಗಳಲ್ಲೂ ಡಾಮರು ಹಾಕಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next