Advertisement

ನೀರಿನ ಪೈಪ್‌ಲೈನ್‌ಗೆ ಹಾನಿ: ರಸ್ತೆ ಬಿರುಕು

12:15 PM Jun 29, 2022 | Team Udayavani |

ಪಂಪ್‌ವೆಲ್‌: ನಗರದ ಪಂಪ್‌ವೆಲ್‌ ಮೇಲ್ಸೇತುವೆ ಬಳಿ ಮಂಗಳವಾರ ಮಧ್ಯಾಹ್ನ ವೇಳೆ ನೀರಿನ ಪೈಪ್‌ಲೈನ್‌ ಗೆ ಹಾನಿ ಉಂಟಾದ ಪರಿಣಾಮ ಏಕಾಏಕಿ ರಸ್ತೆ ಬಿರುಕು ಬಿಟ್ಟ ಘಟನೆ ನಡೆದಿದೆ.

Advertisement

ಪಡೀಲಿನಿಂದ ಕರಾವಳಿ ರೇಚಕ ಸ್ಥಾವರಕ್ಕೆ ನೀರು ಸರಬರಾಜು ಆಗುವ ಪೈಪ್‌ಲೈನ್‌ಗೆ ಮಂಗಳವಾರ ಮಧ್ಯಾಹ್ನ ವೇಳೆ ಹಾನಿ ಉಂಟಾಗಿತ್ತು. ಈ ವೇಳೆ ರಸ್ತೆಯ ಮೇಲಿಂದ ನೀರು ಚಿಮ್ಮಿದ್ದು, ಸುತ್ತಲಿನ ಮಂದಿಗೆ ಒಮ್ಮೆಲ್ಲೇ ಗಾಬರಿ ಉಂಟಾಗಿತ್ತು. ಸಂಚಾರ ವ್ಯವಸ್ಥೆ ಅಸ್ತವ್ಯಸ್ಥ ಗೊಂಡಿದ್ದು, ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ, ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿದರು. ನಂತೂರು ಕಡೆಯಿಂದ ಪಂಪ್‌ವೆಲ್‌ ಪ್ರವೇಶಿಸುವ ಸರ್ವೀಸ್‌ ರಸ್ತೆಯನ್ನು ಕಾಮಗಾರಿ ವೇಳೆ ಬಂದ್‌ ಮಾಡಲಾಗಿತ್ತು. ಪರಿಣಾಮ ಪಂಪ್‌ವೆಲ್‌ ಫ್ಲೈ ಓವರ್‌ನಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ಸುಮಾರು 60 ವರ್ಷಗಳ ಹಿಂದಿನ ಪೈಪ್‌ಲೈನ್‌ ಇದಾಗಿದ್ದು, ರಸ್ತೆ ಮಟ್ಟದಿಂದ ಸುಮಾರು 17 ಅಡಿ ಆಳದಲ್ಲಿದೆ. ಪೈಪ್‌ ಲೈನ್‌ ಬಿರುಕು ಬಿಟ್ಟ ಪ್ರದೇಶವನ್ನು ಹುಡುಕುವ ಉದ್ದೇಶದಿಂದ ಎರಡು ಜೆಸಿಬಿ ಮುಖೇನ ತತ್‌ಕ್ಷಣವೇ ಕಾಮಗಾರಿ ಆರಂಭಗೊಂಡಿತ್ತು. ಮುಖ್ಯ ಕೊಳವೆ ಮಾರ್ಗಗಳು ಕೆಲವು ಬಾರಿ ಒಡೆದಾಗ ದುರಸ್ತಿಗೊಳಿಸಲು ಸಮಯ ತಗಲುತ್ತದೆ. ತುಂಬೆಯಲ್ಲಿ ನೀರು ಪೂರೈಕೆ ಸ್ಥಗಿತಗೊಳಿಸಿದರೂ, ಕೊಳವೆಯಲ್ಲಿ ನೀರಿನ ಹರಿವು ಇರುತ್ತದೆ. ಈ ನೀರನ್ನು ಸಂಪೂರ್ಣ ಖಾಲಿ ಮಾಡಿ, ಆ ಬಳಿಕವಷ್ಟೇ ವೆಲ್ಡಿಂಗ್‌ ಮೂಲಕ ಪೈಪ್‌ ಒಡೆದಿರುವ ಜಾಗ ದುರಸ್ತಿಗೊಳಿಸಬೇಕು.

1956ರ ಮುಖ್ಯ ಕೊಳವೆ

ಪಡೀಲ್‌ನಿಂದ ಪಂಪ್‌ವೆಲ್‌ ಮುಖೇನ ಕರಾವಳಿ ರೇಚಕ ಸ್ಥಾವರಕ್ಕೆ ಹಾದುಹೋಗುವ ಈ ಪೈಪ್‌ಲೈನ್‌ ಸುಮಾರು 1956ನೇ ವರ್ಷದ್ದು. ಹಳೆಯ ಪೈಪ್‌ಲೈನ್‌ ಆದ ಕಾರಣ ಹಲವು ಬಾರಿ ಬಿರುಕು ಬಿಡುತ್ತಿದೆ. ಸುಮಾರು 900 ಎಂ.ಎಂ. ವ್ಯಾಸದ ಮುಖ್ಯ ಕೊಳವೆ ಇದಾಗಿದ್ದು, ನೀರು ಹರಿಯುವ ಸಾಮರ್ಥ್ಯ ಇದೆ ಎಂಬ ಕಾರಣಕ್ಕೆ ಎಡಿಬಿ-1 ಯೋಜನೆಯಲ್ಲಿಯೂ ಇದನ್ನು ಬದಲಾವಣೆ ಮಾಡಿರಲಿಲ್ಲ. ಇದೀಗ ಈ ಭಾಗದಲ್ಲಿ ಪೈಪ್‌ಲೈನ್‌ ಬದಲಾವಣೆ ಮಾಡಲು ಪಾಲಿಕೆ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಟೆಂಡರ್‌ ಕರೆಯಲಾಗಿದೆ. ಶೀಘ್ರವೇ ಕಾಮಗಾರಿ ಆರಂಭಗೊಳ್ಳಲಿದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

Advertisement

ಏಳು ತಿಂಗಳಲ್ಲಿ ಹತ್ತು ಕಡೆ ಪೈಪ್‌ಲೈನ್‌ ಬಿರುಕು

ತುಂಬೆ ಅಣೆಕಟ್ಟಿನಿಂದ ಮಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಯಾಗುವ ಪೈಪ್‌ಲೈನ್‌ನ ಹಲವು ಕಡೆ ಹಾನಿ ಉಂಟಾಗಿ, ನೀರು ಸರಬರಾಜಿನಲ್ಲಿ ತೊಂದರೆಯಾಗುತ್ತಿದೆ. ಕಳೆದ ಏಳು ತಿಂಗಳಿನಲ್ಲಿ ನಗರದ 10 ಕಡೆ ಪೈಪ್‌ಲೈನ್‌ ಬಿರುಕು ಬಿಟ್ಟಿದೆ. ನ.4ರಂದು ಅಡ್ಯಾರ್‌ ಕಟ್ಟೆ ಬಳಿ ಪೈಪ್‌ ಬಿರುಕು, ಫೆ.16ರಂದು ಕೊಟ್ಟಾರಚೌಕಿ 4ನೇ ಮೈಲ್‌, ಮಾ.28: ಮಲ್ಲಿಕಟ್ಟೆ ಸಿಟಿ ಆಸ್ಪತ್ರೆ ಬಳಿ, ಎ.11ರಂದು ಅಡ್ಯಾರು ನಾಗನಕಟ್ಟೆ ಬಳಿ, ಎ.14ರಂದು ಎಂಸಿಎಫ್ ಬಳಿ ಒಡೆದ ಕೊಳವೆಮಾರ್ಗ, ಎ.24ರಂದು ಪಣಂಬೂರು ಕೆಐಒಸಿಎಲ್‌ ಗೇಟ್‌, ಜೂ.7ರಂದು ಬೆಂದೂರ್‌ ವೆಲ್‌ ನೀರು ಶುದ್ದೀಕರಣ ಘಟಕ, ಜೂ.8ರಂದು ಮಲ್ಲಿಕಟ್ಟೆಯಲ್ಲಿ ಪೈಪ್‌ಲೈನ್‌ ಗೆ ಹಾನಿ, ಜೂ.13: ಕೆಐಒಸಿಎಲ್‌ ಗೇಟ್‌ ಬಳಿ ಪೈಪ್‌ಲೈನ್‌ಗೆ ಹಾನಿ ಮತ್ತೆ ಇದೀಗ ಜೂ.28ರಂದು ಪಂಪ್‌ವೆಲ್‌ನಲ್ಲಿ ಪೈಪ್‌ ಲೈನ್‌ಗೆ ಹಾನಿ ಉಂಟಾಗಿದೆ.

ಎಲ್ಲೆಲ್ಲಿ ನೀರಿಲ್ಲ

ಪಂಪ್‌ವೆಲ್‌ನಲ್ಲಿ ಜೂ.28ರಂದು ಪೈಪ್‌ಲೈನ್‌ ಬಿರುಕು ಬಿಟ್ಟ ಪರಿಣಾಮ ನಗರದ ಕೊಟ್ಟಾರ, ಕೊಟ್ಟಾರ ಚೌಕಿ, ಅಶೋಕನಗರ, ಕೋಡಿಕಲ್‌, ಉರ್ವ, ಮಣ್ಣಗುಡ್ಡೆ, ಚಿಲಿಂಬಿ, ದೇರೆಬೈಲ್‌ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಜೂ.29ರಂದೂ ದುರಸ್ತಿ ಸಾಗಲಿದ್ದು, ಬಳಿಕವಷ್ಟೇ ನೀರು ಸರಬರಾಜು ಸರಾಗವಾಗಲಿದೆ. ಕೆಲವೊಂದು ಪ್ರದೇಶಕ್ಕೆ ಟ್ಯಾಂಕರ್‌ ಮುಖೇನ ನೀರು ಸರಬರಾಜು ಮಾಡಲಾಗುವುದು ಎಂದು ಹೇಳುತ್ತಾರೆ ಪಾಲಿಕೆ ಆಧಿಕಾರಿಗಳು.

ಇಂದು ದುರಸಿಗೊಳ್ಳುವ ಸಾಧ್ಯತೆ: ಪಂಪ್‌ವೆಲ್‌ನಲ್ಲಿ ಹಾದುಹೋಗುವ ಹಳೆಯ ಪೈಪ್‌ಲೈನ್‌ ತುಂಬಾ ಹಳೆಯದಾಗಿದ್ದ ಪರಿಣಾಮ ಬಿರುಕು ಬಿಟ್ಟಿದೆ. ವಿಷಯ ತಿಳಿದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಕಾಮಗಾರಿ ಈಗಾಗಲೇ ಆರಂಭಗೊಂಡಿದ್ದು, ಜೂ.29ಕ್ಕೆ ಕಾಮಗಾರಿ ಪೂರ್ಣಗೊಂಡು ನೀರು ಸರಬರಾಜು ಎಂದಿನಂತೆ ಆರಂಭಗೊಳ್ಳುವ ನಿರೀಕ್ಷೆ ಇದೆ. –ಡಿ. ವೇದವ್ಯಾಸ ಕಾಮತ್‌, ಶಾಸಕರು

ಆದ್ಯತೆ ಮೇರೆಗೆ ಕಾಮಗಾರಿ; ತುಂಬಾ ಹಳೆಯ ಕೊಳವೆ ಇದಾಗಿದ್ದು, ಮಂಗಳವಾರ ಪೈಪ್‌ಲೈನ್‌ ಒಡೆದಿದೆ. ಪರಿಣಾಮ ನಗರದ ಕೆಲವೊದು ಪ್ರದೇಶಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಮುಖ್ಯ ರಸ್ತೆ ಇದಾಗಿದ್ದು, ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಶೀಘ್ರದಲ್ಲಿ ಸರಿಪಡಿಸಲಾಗುವುದು. ಈಗಾಗಲೇ ಕಾಮಗಾರಿ ಆರಂಭಗೊಂಡಿದ್ದು, ಜೂ.29ರ ವೇಳೆಗೆ ನೀರು ಸರಬರಾಜು ಎಂದಿನಂತೆ ಆರಂಭಗೊಳ್ಳುವ ಸಾಧ್ಯತೆ ಇದೆ. –ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್‌

 

Advertisement

Udayavani is now on Telegram. Click here to join our channel and stay updated with the latest news.

Next