ಉಳ್ಳಾಲ: ಉಚ್ಚಿಲದಲ್ಲಿ ಸಮುದ್ರ ಕೊರೆತವಿದ್ದರೂ ಹಲವು ಬಾರಿ ಕಲ್ಲುಗಳನ್ನು ಹಾಕಲಾಗಿದೆ. ಎಡಿಬಿಯಿಂದ ನಡೆಸಿದ ಶಾಶ್ವತ ಕಾಮಗಾರಿಯ ಅಂಗವಾಗಿ ಸಮುದ್ರದ ಮಧ್ಯದಲ್ಲೇ ಅಲೆಗಳ ರಭಸಕ್ಕೆ ಬ್ರೇಕ್ ಹಾಕಿ ಸಮುದ್ರ ತೀರದ ಮನೆಗಳನ್ನು ರಕ್ಷಿಸುವ ಉದ್ದೇಶದಿಂದ ರೀಫ್ಗಳನ್ನು ಅಳವಡಿಸಿದ್ದು, ಅವೈಜ್ಞಾ ನಿಕವಾಗಿ ಕಾಮಗಾರಿ ನಡೆದ ಪರಿಣಾಮ ಸ್ಥಳೀಯರನ್ನು ಗಣನೆಗೆ ತೆಗೆದುಕೊಳ್ಳದೆ ಕಾಮಗಾರಿ ನಿರ್ವಹಿಸಿದ್ದರಿಂದ ರಸ್ತೆ ಸಮೇತ ಸಮುದ್ರ ತೀರ ಕೊಚ್ಚಿ ಹೋಗಿವೆ ಎಂದು ಉಚ್ಚಿಲ ಬೀಚ್, ಬಟ್ಟಪ್ಪಾಡಿ ನಿವಾಸಿಗಳು ಆರೋಪಿಸಿದರು.
ಸಮುದ್ರ ಕೊರೆತ ಪ್ರದೇಶವಾದ ಸೋಮೇಶ್ವರ ಉಚ್ಚಿಲ ಮತ್ತು ಉಳ್ಳಾಲ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿದ ಭರವಸೆ ಸಮಿತಿಯ ಅಧ್ಯಕ್ಷ ಬಿ.ಎಂ. ಫಾರೂಕ್ ಅವರಿಗೆ ಸ್ಥಳೀಯ ನಿವಾಸಿಗಳು ದೂರು ನೀಡಿದರು. ಎರಡು ವರ್ಷದ ಹಿಂದೆ ಬೃಹತ್ ಗಾತ್ರದಲ್ಲಿ ಮರಳು ಶೇಖರಣೆ ಮಾಡಿ ಕಡಲ್ಕೊರೆತ ತಡೆಗೆ ಅವೈಜ್ಞಾನಿಕ ಕಾಮಗಾರಿ ನಡೆಸಿದ್ದರು. ಆದರೆ ಮಳೆಗಾಲದಲ್ಲಿ ಮರಳು ಸಮುದ್ರ ಪಾಲಾಗಿ ಕೇರಳ ಭಾಗದಲ್ಲಿ ಶೇಖರಣೆಗೊಂಡಿದೆ. ಇಲ್ಲಿ ಅಧಿಕಾರಿ, ಜನಪ್ರತಿನಿಧಿಗಳು ಪ್ರತೀ ವರ್ಷ ಬಂದು ಕಡಲ್ಕೊರೆತವನ್ನು ವೀಕ್ಷಿಸಿ ಹೋಗುತ್ತಾರೆ. ಭರವಸೆ ನೀಡುತ್ತಾರೆ. ಆದರೆ ನಾವು ಮಾತ್ರ ಇಲ್ಲಿ ಪ್ರತಿನಿತ್ಯ ಆತಂಕದಲ್ಲೇ ದಿನ ಕಳೆಯುತ್ತಿದ್ದೇವೆ. ಈ ಬಾರಿ ನಮ್ಮ ಮನೆಗಳೂ ಸಮುದ್ರ ಪಾಲಾಗುವ ಆತಂಕವನ್ನು ಎದುರಿಸುತ್ತಿದ್ದೇವೆ ಎಂದು ಸ್ಥಳೀಯರು ಅಳಲು ತೋಡಿಕೊಂಡರು.
ಸಮಿತಿಯ ಅಧ್ಯಕ್ಷ ಬಿ.ಎಂ. ಫಾರೂಕ್ ಅಧಿಕಾರಿಗಳ ಜತೆ ಮಾತನಾಡಿ, ಪ್ರತೀ ವರ್ಷ ಇಲ್ಲಿ ಮಳೆಗಾಲದ ಸಂದರ್ಭ ಕಡಲ್ಕೊರೆತಕ್ಕೆ ರಸ್ತೆಗಳು ಸಮುದ್ರ ಪಾಲಾಗುತ್ತವೆ. ಮತ್ತೆ ಕೋಟಿಗಟ್ಟಲೆ ಹಣ ವ್ಯಯಿಸಿ ರಸ್ತೆ ನಿರ್ಮಿಸಲಾಗುತ್ತದೆ. ಆದರೆ ಒಂದೇ ವರ್ಷದಲ್ಲಿ ಅದು ಕಡಲ್ಕೊರೆತಕ್ಕೆ ಕೊಚ್ಚಿ ಹೋಗುತ್ತವೆ. ಇಲ್ಲಿ ಸಮುದ್ರದ ಅಲೆಯನ್ನು ತಡೆಯಲು ಶಾಶ್ವತ ಕ್ರಮ ವಹಿಸದೆ ರಸ್ತೆ ಮಾಡಿ ಏನೂ ಪ್ರಯೋಜನವಿಲ್ಲ ಎಂದರು. ಇಲ್ಲಿ ಕೇವಲ ಕಲ್ಲುಹಾಕುವುದರಿಂದ ಪ್ರಯೋಜನವಾಗದು. ಅದನ್ನು ಪರಿಶೀಲಿಸುವುದಕ್ಕಾಗಿಯೇ ನಾವು ಬಂದಿದ್ದೇವೆ ಎಂದು ಬಿ.ಎಂ. ಫಾರೂಕ್ ಜನರ ಮನವಿಗೆ ಪ್ರತಿಕ್ರಿಯಿಸಿದರು.
ಸಮಿತಿ ಸದಸ್ಯರಾದ ಯು.ಬಿ. ವೆಂಕಟೇಶ್, ಶಶೀಲ್ ಜಿ. ನಮೋಶಿ, ಕೆ.ಟಿ. ಶ್ರೀಕಂಠೇಗೌಡ, ಡಿಸಿ ಡಾ| ರಾಜೇಂದ್ರ ಕುಮಾರ್, ಜಿ.ಪಂ. ಸಿಇಒ ಡಾ|ಕುಮಾರ, ಸಹಾಯಕ ಆಯುಕ್ತ ಮದನ್ ಮೋಹನ್ ಮೊದಲಾದವರಿದ್ದರು.
Related Articles
ಅನುಮತಿ ಪಡೆಯದೇ ಕಾಮಗಾರಿ
ಉಳ್ಳಾಲದ ಎಸ್‌ಟಿಪಿ (ಒಳಚರಂಡಿ ಸಂಸ್ಕರಣೆ ಘಟಕ)ಗೆ ಸಮಿತಿ ಭೇಟಿ ನೀಡಿದ ವೇಳೆ ಸ್ಥಳೀಯರು ಅಲ್ಲಿನ ಒಳಚರಂಡಿ ವ್ಯವಸ್ಥೆಗಳ ಬಗ್ಗೆ ಗಮನ ಸೆಳೆದರು. 2009ರಲ್ಲಿ ಆರಂಭವಾದ ಎಸ್‌ಟಿಪಿ ಕಾಮಗಾರಿಗೆ ಸುಮಾರು 16 ವರ್ಷಗಳ ಬಳಿಕ ರಾಷ್ಟ್ರೀಯ ಹಸುರು ನ್ಯಾಯಮಂಡಳಿ (ಎನ್‌ಜಿಟಿ)ಯಿಂದ ಒಂದೆರಡು ವರ್ಷದ ಹಿಂದಷ್ಟೇ ಅನುಮತಿ ಪಡೆಯಲಾಗಿದೆ. ಕಾಮಗಾರಿ ಆರಂಭವಾಗುವ ಮೊದಲು ಸರ್ವೇ ಆರಂಭದಲ್ಲಿಯೇ ಈ ಅನುಮತಿಯನ್ನು ಪಡೆಯಬೇಕಾಗಿದ್ದರೂ ಅದನ್ನು ಪಡೆಯದೇ ಕಾಮಗಾರಿ ಆರಂಭಿಸಲಾಗಿದೆ. ಇದು ಯಾವ ಆಧಾರದಲ್ಲಿ ಮಾಡಿರುವುದು ಎಂದು ಬಿ.ಎಂ. ಫಾರೂಕ್ ಅಧಿಕಾರಿಗಳನ್ನು ಪ್ರಶ್ನಿಸಿದರು. ಎಸ್‌ಟಿಪಿ ಸಮುದ್ರ ದಡದಲ್ಲಿ ಕಾಣುವಂತೆ ನಿರ್ಮಾಣವಾಗಿರುವುದನ್ನು ಸ್ಥಳೀಯ ಹಿರಿಯರೊಬ್ಬರು ಅಧಿಕಾರಿಗಳಿಲ್ಲಿ ಆತಂಕವ್ಯಕ್ತಪಡಿಸಿದರು.