ಯಲಹಂಕ: ಇಲ್ಲಿನ ಸಂದೀಪ್ ಉನ್ನೀಕೃಷ್ಣನ್ ರಸ್ತೆಯಲ್ಲಿ ಬರುವ ವೀರಸಾವರ್ಕರ್ ಮೇಲ್ಸೇತುವೆ ಮೇಲೆ ಅಳವಡಿಸಿದ್ದ “ವೀರಸಾವರ್ಕರ್ ಹೆಸರಿನ ನಾಮಫಲಕ’ಕ್ಕೆ ಮಸಿ ಬಳಿದಿರುವ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ಘಟನೆ ಸಂಬಂದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಯಲಹಂಕದಿಂದ ಯಶವಂತಪುರಕ್ಕೆ ಹೋಗುವ ರಸ್ತೆಯ ಡೈರಿ ವೃತ್ತದಲ್ಲಿ ಬರುವ ಮೇಲ್ಸೇತುವೆ ಮೇಲೆ ಸುಮಾರು 12 ಅಡಿ ಎತ್ತರದಲ್ಲಿ ಅಳವಡಿಸಿದ್ದ ನಾಮಫಲಕಕ್ಕೆ ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ(ಎನ್‌ಎಸ್‌ಯುಐ) ಕಾರ್ಯಕರ್ತರು ಎನ್ನಲಾಗಿದ್ದು ಏಳೆಂಟು ಜನ ಯುವಕರ ಗುಂಪು ಘೋಷಣೆ ಕೂಗುತ್ತಾ ವೀರಸಾವರ್ಕರ್ ಹೆಸರಿಗೆ ಮಸಿ ಬಳಿದು ಇಳಿದಿದ್ದಾರೆ
ಸದಾ ಟ್ರಾಫಿಕ್ ದಟ್ಟಣೆಯಿಂದ ಕೂಡಿದ್ದ ಮೇಲ್ಸೇ ತುವೆ ಮೇಲೆ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಮಸಿ ಬಳಿದು, ಇದೇ ವೇಳೆ ವೀರ ಸಾವರ್ಕರ್ ಹೆಸರು ಬದಲಿಸಿ ಭಗತ್ ಸಿಂಗ್ ಹೆಸರಿಡುವಂತೆ ಆಗ್ರಹಿಸಿದ್ದಾರೆ. ಬಳಿಕ ಭಗತ್‌ಸಿಂಗ್ ಮೇಲ್ಸೇತುವೆ ಹೆಸರಿನ ಬ್ಯಾನರ್ ಹಾಕಿದ್ದಾರೆ. ಬಳಿಕ ಕೂಗಳತೆ ದೂರದಲ್ಲಿದ್ದ ಯಲಹಂಕ ಉಪನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರವೀಣ್, ರಕ್ಷರಾಜ್ ಹಾಗೂ ನಿಶ್ಚಿತ್‌ಗೌಡ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ.
ಘಟನೆ ಖಂಡಿಸಿ ಬಿಜೆಪಿ ಪ್ರತಿಭಟನೆ: ವೀರ ಸಾವರ್ಕರ್ ಮೇಲ್ಸೇತುವೆಗೆ ಮಸಿ ಬಳಿದಿರುವುದನ್ನು ಖಂಡಿಸಿ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್, ಬಿಜೆಪಿ ಕಾರ್ಯಕರ್ತರು, ಹಿಂದೂ ಪರ ಸಂಘಟನೆಗಳು ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಎಸ್.ಆರ್.ವಿಶ್ವನಾಥ್ ಮಾತ ನಾಡಿ, ಸರ್ಕಾರದಿಂದ ಕಾನೂನಾತ್ಮಕವಾಗಿ ಸಾವರ್ಕರ್ ಹೆಸರನ್ನು ಅನುಮೋದನೆ ಪಡೆದು ನಾಮಫಲಕ ಅಳವಡಿಸಲಾಗಿದೆ. ಐದಾರು ವರ್ಷದಿಂದ ಯಾವುದೇ ಅಹಿತಕರ ಘಟನೆ ನಡೆದಿರಲಿಲ್ಲ. ಇದೀಗ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಈ ಘಟನೆ ನಡೆದಿದೆ. ಕಾಂಗ್ರೆಸ್ ನಾಯಕರಿರುವ ಫೋಟೋಗಳು ಯಲಹಂಕದಲ್ಲಿವೆ. ಆದರೆ ನಾವು ಯಾವುದೇ ಪೋಟೋಗಳಿಗೂ ಮಸಿ ಬಳಿದಿಲ್ಲ. ವೀರ ಸಾವರ್ಕರ್ ಇತಿಹಾಸವನ್ನು ಕಾಂಗ್ರೆಸ್‌ನವರು ತಿಳಿದುಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೀರಸಾವರ್ಕರ್ ಜಯಂತಿ: ಸಂಜೆ 6ಗಂಟೆಯ ವೇಳೆಗೆ ಬಿಜೆಪಿ ಕಾರ್ಯಕರ್ತರು ಹೂವಿನ ಹಾರ ಹಾಕಿ ಸ್ಥಳದಲ್ಲೇ ವೀರಸಾವರ್ಕರ್ ಫೋಟೋ ಇಟ್ಟು ರಾಷ್ಟ್ರಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿ ಜಯಂತಿಯನ್ನು ಆಚರಿಸಿದರು.
ದೇಶದ್ರೋಹದಡಿ ಪ್ರಕರಣ ದಾಖಲಿಸಿ: ವಿಶ್ವನಾಥ್
ಇದೇ ವೇಳೆ ಮಾತನಾಡಿದ ಎಸ್.ಆರ್.ವಿಶ್ವನಾಥ್, ಈ ದುಷ್ಕೃತ್ಯ ಎಸಗಿದ ಆರೋಪಿಗಳ ಮೇಲೆ ರಾಷ್ಟ್ರದ್ರೋಹದಡಿ ಪ್ರಕರಣ ದಾಖಲಿಸಿ, ಬುಧವಾರ(ನಾಳೆ) 10 ಗಂಟೆಯ ಒಳಗೆ ಬಂಧಿಸಬೇಕು. ಕಿಡಿಗೇಡಿಗಳು ಮಸಿ ಬಳಿದಿರುವ ವಿಡಿಯೋ ಇದ್ದು, ಇದರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಮಸಿ ಬಳಿದಿರುವ ಫಲಕ ತೆಗೆದು ಹೆಸರು ಬರೆದು ಸರಿಪಡಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಯಲಹಂಕದಲ್ಲಿ ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಆಗುವ ಅನಾಹುತಕ್ಕೆ ಸರ್ಕಾರವೇ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.