Advertisement
ಕೋಲಾರ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಜಗದೀಶ್, ಈ ವರ್ಷದ ಮೊದಲ ಮಳೆಗೆ ಚೆಕ್ ಡ್ಯಾಂಗಳು ತುಂಬಿರುವುದು ಮತ್ತು ಕೆಲವೆಡೆ ಅಲ್ಪಸ್ವಲ್ಪ ಮಳೆ ನೀರು ನಿಂತಿರುವ ಫೋಟೋಗಳನ್ನು ತಮ್ಮ ಫೇಸ್‌ಬುಕ್ ಖಾತೆಯ ಮೂಲಕ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.
Related Articles
Advertisement
ಕೋಲಾರ ಲೋಕಸಭಾ ಚುನಾವಣೆಯ ಒಂದು ತಿಂಗಳಿನ ಚುನಾವಣೆಯ ಕಾವು ತಂಪೆರೆಯುವಂತೆ ಗುರುವಾರ ರಾತ್ರಿ ಹತ್ತೂವರೆ ನಂತರ ಜಿಲ್ಲೆಯಲ್ಲಿ ವಿವಿಧ ತಾಲೂಕುಗಳಲ್ಲಿ ಭಾರೀ ಗುಡುಗು, ಮಿಂಚು ಸಮೇತ ಅಕಾಲಿಕ ಬೇಸಿಗೆ ಮಳೆ ಸುರಿಯಿತು. ಗಂಟೆ ಕಾಲ ಬಿರುಸಿನಿಂದಲೇ ಮಳೆ ಬಂದಿತ್ತು. ಮಧ್ಯರಾತ್ರಿಯವರೆಗೂ ಮಳೆ ಸುರಿಯುತ್ತಲೇ ಇತ್ತು.
ಚುನಾವಣಾ ಕೆಲಸ ಕಾರ್ಯಪೂರ್ಣಗೊಳಿಸಿ ಅಧಿಕಾರಿಗಳು ನಿರಾಳವಾಗುತ್ತಿರುವಾಗಲೇ ಸುರಿದ ಮಳೆ ನೀರಿಗೆ ಎಷ್ಟು ಚೆಕ್‌ಡ್ಯಾಂಗಳಲ್ಲಿ ನೀರು ತುಂಬಿರಬಹುದು ಎಂಬ ಕುತೂಹಲ ಜಿಪಂ ಸಿಇಒರಿಗೆ ಮೂಡಿತ್ತು. ತಮ್ಮ ಪಿಡಿಒಗಳಿಗೆ ಚೆಕ್‌ಡ್ಯಾಂಗಳು ತಂಬಿರುವ ಚಿತ್ರಗಳನ್ನು ವಾಟ್ಸ್‌ಆ್ಯಪ್‌ಗೆ ಅಪ್‌ಲೋಡ್ ಮಾಡುವಂತೆ ಸೂಚಿಸಿದ್ದರು.
ಬಂಗಾರಪೇಟೆ ತಾಲೂಕಿನಲ್ಲಿ ನರೇಗಾ ಯೋಜನೆಯಡಿ 150ಕ್ಕೂ ಹೆಚ್ಚು ಚೆಕ್‌ಡ್ಯಾಂಗಳನ್ನು ನಿರ್ಮಾಣ ಮಾಡಲಾಗಿದ್ದು, ಗುರುವಾರ ರಾತ್ರಿ ಸುರಿದ ಮಳೆ ನೀರಿಗೆ ಕೆಲವು ತುಂಬಿದ್ದರೆ, ಕೆಲವು ಚೆಕ್‌ಡ್ಯಾಂಗಳಲ್ಲಿ ಅರ್ಧ, ಕಾಲು ಭಾಗ ನೀರು ನಿಲ್ಲುವಂತಾಗಿದೆ.
ಡ್ಯಾಂ ತುಂಬಿರುವುದು ಸಂತಸ ತಂದಿದೆ: ಜಿಪಿ ಸಿಇಒ ಜಗದೀಶ್ತಾವು ಮಾಡಿದ ಕಾರ್ಯ ಮೊದಲ ಮಳೆಗೆ ಸಾರ್ಥಕವಾಗಿರುವುದನ್ನು ಗಮನಿಸಿ ಸಂತಸ ವ್ಯಕ್ತಪಡಿಸಿದ ಜಿಪಿ ಸಿಇಒ ಜಗದೀಶ್, ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿ, ನರೇಗಾ ಯೋಜನೆಯಡಿ ನಿರ್ಮಾಣ ಮಾಡಿರುವ ಚೆಕ್ ಡ್ಯಾಂಗಳು ತುಂಬಿರುವುದು ತಮಗೆ ಅಪಾರ ಸಂತಸ ತಂದಿದೆ. ಸದ್ಯಕ್ಕೆ ಬಂಗಾರಪೇಟೆ ತಾಲೂಕಿನ ಚೆಕ್‌ಡ್ಯಾಂಗಳ ಚಿತ್ರಗಳು ತಮಗೆ ದೊರೆತಿದ್ದು, ಇನ್ನುಳಿದ ತಾಲೂಕುಗಳಲ್ಲಿಯೂ ತುಂಬಿರುವ ಸಾಧ್ಯತೆಗಳಿವೆ. ಚುನಾವಣಾ ಕಾರ್ಯದಲ್ಲಿರುವ ಪಿಡಿಒಗಳು ತಡವಾಗಿ ಮಾಹಿತಿ ನೀಡಬಹುದು ಎಂದರು. ಬರಪೀಡಿತ ಜಿಲ್ಲೆಯಲ್ಲಿ ಸುರಿಯುವ ಒಂದೊಂದು ಮಳೆ ನೀರಿನ ಹನಿಗೂ ಮಹತ್ವವಿದ್ದು, ನೀರಿನ ತಜ್ಞರು ಹೇಳುವಂತೆ ಓಡುವ ನೀರನ್ನು ನಡೆಯುವಂತೆ ಮಾಡಿ, ನಡೆಯುವ ನೀರನ್ನು ತೆವಳುವಂತೆ ಮಾಡಿ, ತೆವಳುವ ನೀರನ್ನು ಭೂಮಿಗೆ ಇಂಗಿಸುವ ಕೆಲಸ ಮಾಡಲು ಚೆಕ್‌ಡ್ಯಾಂಗಳನ್ನು ನಿರ್ಮಾಣ ಮಾಡಿದ್ದು ಸಾರ್ಥಕವಾಗುವಂತಾಗಿದೆ. ಬಿರು ಬೇಸಿಗೆಯಲ್ಲಿ ದನಕರು, ಪಶುಗಳಿಗೆ ವನ್ಯ ಜೀವಿಗಳಿಗೂ ಟ್ಯಾಂಕರ್ ಮೂಲಕ ತೊಟ್ಟಿಗಳಿಗೆ ನೀರು ತುಂಬಿಸಿ ನೀಡುತ್ತಿದ್ದ ಕೋಲಾರ ಜಿಲ್ಲೆಯಲ್ಲಿ ನರೇಗಾ ಚೆಕ್ ಡ್ಯಾಂಗಳಲ್ಲಿ ನೀರು ನಿಂತಿರುವುದು ಅಂತರ್ಜಲ ಹೆಚ್ಚಳದ ಜೊತೆಗೆ, ದನಕರು, ವನ್ಯ ಜೀವಿಗಳಿಗೆ ಕುಡಿಯಲು ಸಹಕಾರಿಯಾಗಲಿದೆ.