ತುಮಕೂರು: ಪರಿಶಿಷ್ಟ ಜಾತಿ ಹಾಗೂ ಪಂಗಡ ನಿಗಮಗಳ ವತಿಯಿಂದ ಗಂಗಾ ಕಲ್ಯಾಣ, ಸ್ವಯಂ ಉದ್ಯೋಗಕ್ಕೆ ಸಹಾಯಧನ ಮತ್ತಿತರ ಸೌಲಭ್ಯ ಗಳನ್ನು ಅರ್ಹತೆಗನುಗುಣವಾಗಿ ನೀಡುವಂತೆ ಒತ್ತಾಯಿಸಿ ಹಾಗೂ ದಲಿತ ಮೇಲಿನ ಹಲ್ಲೆ, ದೌರ್ಜನ್ಯ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ಶಿಕ್ಷೆ ನೀಡಿ: ದಲಿತ ಹಕ್ಕುಗಳ ಸಮಿತಿ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ, ಜಿಲ್ಲೆಯ ಮಲ್ಲೇಕಾವು ಗ್ರಾಮದಲ್ಲಿ ದಲಿತರು ದೇವಾಲಯಕ್ಕೆ ಪ್ರವೇಶ ಮಾಡಿದರೆಂದು ಜಗದೀಶ್ ಎಂಬವರ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಲಾಗಿದೆ. ಆದರೂ ಆರೋಪಿಗಳನ್ನು ಇದುವರೆಗೂ ಬಂಧಿಸಿಲ್ಲ. ಕೂಡಲೇ ಆರೋಪಿಗಳನ್ನು ಬಂಧಿಸ ಬೇಕು ಎಂದು ಆಗ್ರಹಿಸಿದರು.
ಸೌಲಭ್ಯ ವಿತರಿಸಿ: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ದಲಿತರ ಮೇಲೆ ಹಲ್ಲೆ, ಅಸ್ಪೃಶ್ಯತಾ ಆಚರಣೆ ಜಾರಿಯಲ್ಲಿದ್ದು ಸರ್ಕಾರ ಇದನ್ನು ತಡೆಗಟ್ಟುವಲ್ಲಿ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಸರ್ಕಾರ ದಲಿತರ ವಿಶೇಷ ಸಭೆ ಕರೆದು ಮುಂದೆ ಬರುವ ಅಧಿವೇಶನದಲ್ಲಿ ಚರ್ಚೆ ಮಾಡಿ ದೌರ್ಜನ್ಯ ನಡೆಯದಂತೆ ಕ್ರಮ ಕೈಗೊಳ್ಳಬೇಕು. ಅರ್ಜಿ ಸಲ್ಲಿಸಿದ ಎಲ್ಲಾ ಬಡವರಿಗೂ ಗಂಗಾ ಕಲ್ಯಾಣ ಯೋಜನೆ, ಭೂಒಡೆತನ ಸ್ವಾಧೀನ, ಸ್ವಯಂ ಉದ್ಯೋಗ ಈ ರೀತಿ ಯೋಜನೆಗಳು ದಲಿತರ ಅಭಿವೃದ್ಧಿಗಾಗಿ ಇದ್ದು ಅರ್ಹ ಫಲಾನುಭವಿಗಳಿಗೆ ನಿಗಮ ಮಂಡಳಿಗಳ ಮೂಲಕ ಸಮರ್ಪ ಸೌಲಭ್ಯ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.
ಹೋರಾಟ ಅವಶ್ಯ: ಎಸ್‌ಎಫ್ಐ ಜಿಲ್ಲಾಧ್ಯಕ್ಷ ಈ.ಶಿವಣ್ಣ, ಹೋರಾಟದ ಮೂಲಕ ದೌರ್ಜನ್ಯ ಹಿಮ್ಮೆಟ್ಟಿಸಬೇಕು, ನಿಗಮ ಮಂಡಳಿಗಳ ಮೂಲಕ ದಲಿತರ ಅಭಿವೃದ್ಧಿಗಾಗಿ ಇರುವ ಸೌಲಭ್ಯಗಳನ್ನು ಹೋರಾಟದ ಮೂಲಕ ಪಡೆಯಬೇಕು ಎಂದರು.
ಕೋಮುವಾದ ವಿರೋಧಿಸಿ: ಡಿವೈಎಫ್ಐ ಜಿಲ್ಲಾ ಧ್ಯಕ್ಷ ಎಸ್.ರಾಘವೇಂದ್ರ ಮಾತನಾಡಿ, ದೇಶದ ಅಭಿವೃದ್ಧಿಗಿಂತ ಮುಖ್ಯವಾಗಿ ಧಾರ್ಮಿಕತೆ ಹೆಸರಿ ನಲ್ಲಿ ಕೋಮುವಾದವನ್ನು ಪ್ರಬಲವಾಗಿ ಬೆಳೆಸಲಾ ಗುತ್ತಿದೆ. ಹೆಚ್ಚು ಸಂಘಟನಾತ್ಮಕವಾಗಿ ಹೋರಾಟ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರಾಂತ ರೈತ ಸಂಘದ ಸಹ ಸಂಚಾಲಕ ಬಿ.ಉಮೇಶ್, ರೈತರು-ದಲಿತರ ಸಮಸ್ಯೆಗಳು ಒಂದೇ ರೀತಿಯವಾದರೂ ದಲಿತರ ಸಮಸ್ಯೆಗಳು ಜಾತಿ ಆಧಾರದ ಮೇಲೆ ಪರಿಗಣಿಸುವುದು ತಪ್ಪು ಎಂದರು. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಹ್ಮಣ್ಯ, ನಮ್ಮ ಸಮಸ್ಯೆ ಪರಿಹರಿಸಲು ಹೋರಾಟವೊಂದೇ ಮಾರ್ಗ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಸಂಚಾಲಕರಾದ ರಾಜಣ್ಣ, ಜಗದೀಶ್, ರಾಜು ವೆಂಕಟಪ್ಪ, ನಾಗಣ್ಣ, ಸುರೇಶ, ಎಸ್.ಡಿ.ಪಾರ್ವತಮ್ಮ, ಮಮತಾ, ಮದಲೇಟಪ್ಪ, ನರಸಿಂಹಮೂರ್ತಿ ಮತ್ತಿತರರು ಅಪರ ಜಿಲ್ಲಾಧಿ ಕಾರಿ ಸಹಾಯಕರಿಗೆ ಮನವಿ ಪತ್ರ ಸಲ್ಲಿಸಿ ದಲಿತರ ಕುಂದುಕೊರತೆ ವಿಶೇಷ ಸಭೆ ಕರೆಯುವಂತೆ ಮನವಿ ಮಾಡಿದರು.