ಕೊರಟಗೆರೆ:ಸರ್ಕಾರಕ್ಕೆ ದಾಖಲಾತಿ ನೀಡಲು ನಾಮಕಾವಸ್ಥೆಗೆ ದಲಿತರ ಕುಂದು ಕೊರತೆ ಸಭೆ ಮಾಡುತ್ತಿರುವ ಎಲ್ಲಾ ಇಲಾಖಾ ಅಧಿಕಾರಿಗಳು ಸಭೆಯನ್ನು ಮೊಟಕುಗೊಳಿಸಿ ಸಭೆಯಿಂದ ಹೊರನಡೆಯಿರಿ ಎಂದು ಅಧಿಕಾರಿಗಳ ವಿರುದ್ದ ಪಟ್ಟಣ ಪಂಚಾಯತಿ ಸದಸ್ಯ ಹಾಗೂ ದಲಿತ ಯುವ ಮುಖಂಡ ನಂದೀಶ್ ಆಕ್ರೋಶ ವ್ಯಕ್ತಪಡಿಸಿದರು.
ಅವರು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಮಧುಗಿರಿಯ ಉಪಾವಿಭಾಗಾಧಿಕಾರಿ ಅದ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ಕುಂದು ಕೊರತೆ ಸಭೆಯಲ್ಲಿ ಮಾತನಾಡಿ ನಾನು ದಲಿತನಾಗಿದ್ದು ಮತ್ತು ಪಟ್ಟಣ ಪಂಚಾಯತಿ ಸದಸ್ಯನಾಗಿದ್ದು ನನಗೆ ಇಂದು ನಡೆಯುವ ಕುಂದು ಕೊರತೆ ಸಭೆಗೆ ಅಹ್ವಾನ ನೀಡಿಲ್ಲ ಎಂದು ಏರು ಧ್ವನಿಯಲ್ಲಿ ಉಪವಿಭಾಗಾ ಧಿಕಾರಿಗಳನ್ನು ಪ್ರಶ್ನಿಸಿ ಮತ್ತೆ ಯಾರಿಗೆ ನೀಡಿದ್ದೀರಿ ದಲಿತ ಚುನಾಯಿತ ಜನಪ್ರತಿನಿಧಿಗಳಿಗೆ ಬೆಲೆ ಇಲ್ಲವೇ ತಿಳಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತೋವಿನಕೆರೆ ದಲಿತ ಮುಖಂಡ ಸಿದ್ದಪ್ಪ ಸಭೆಯಲ್ಲಿ ಮಾತನಾಡಿ, ಪ್ರಶ್ನಿಸುವವರಿಗೆ ಸಭೆಗೆ ಅಹ್ವಾನವಿರುವುದಿಲ್ಲ ಎಂದು ಉಪವಿಭಾಗಾಧಿಕಾರಿಗಳಿಗೆ ದೂರು ನೀಡಿ ತಾಲ್ಲೂಕಿನಲ್ಲಿ ದಂಡಾಧಿಕಾರಿಗಳು ಹಾಗೂ ಅರಣ್ಯಾಧಿಕಾರಿಗಳು ದಲಿತ ವಿರೋಧಿ ಕೆಲಸ ಮಾಡುತ್ತಿದ್ದಾರೆ.ತೋವಿನಕೆರೆ ವ್ಯಾಪ್ತಿಯಲ್ಲಿ ದಲಿತರು ಅಕ್ರಮವಾಗಿ ಉಳುಮೆ ಮಾಡುತ್ತಿರುವ ಜಮೀನುಗಳಿಗೆ ಸಾಗುವಳಿ ಚೀಟಿ ನೀಡುತ್ತಿಲ್ಲ. ಬಗರ್ ಹುಕುಂ ಅಡಿಯಲ್ಲಿ ಉಳುಮೆ ಮಾಡುತ್ತಿರುವ ಸುಮಾರು ಮಾಲೀಕರಿಗೆ ಸಾಗುವಳಿ ಚೀಟಿ ನೀಡಿ ಖಾತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು
ಮಂಜುನಾಥ್ ಎಂಬುವರು ಅರಣ್ಯ ಇಲಾಖೆಗೆ ಸೇರಿದ ಜಮೀನನ್ನು ಅಕ್ರಮವಾಗಿ ಉಳುಮೆ ಮಾಡುವ ಸಲುವಾಗಿ ಅರಣ್ಯ ಇಲಾಖೆಗೆ ಸೇರಿದ ಸುಮಾರು 3ಸಾವಿರ ಗಿಡಗಳನ್ನು ನಾಶ ಮಾಡಿದ್ದಾರೆ.ಅದರೆ ಇವರ ಮೇಲೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ.ಇದನ್ನು ನೋಡಿದರೆ ಅರಣ್ಯ ಇಲಾಖೆ ಅಧಿಕಾರಿಗಳು ಅವರೊಂದಿಗೆ ಶಾಮೀಲಾಗಿದ್ದಾರೆ ಎಂಬ ಅನುಮಾನವಿದೆ ಎಂದು ತಿಳಿಸಿದರು.
ತಾಲ್ಲೂಕಿನ ರಾಯವಾರ ಗ್ರಾಮದಲ್ಲಿ ದಲಿತರಿಗೆ ಸ್ಮಶಾನ ಮಂಜೂರು ಮಾಡುವಂತೆ ಹಾಗೂ ಕೊರಟಗೆರೆ ಪಟ್ಟಣದಲ್ಲಿ ಅಂಬೇಡ್ಕರ್ ಪ್ರತಿಮೆ ನಿಲ್ಲಿಸುವಂತೆ,ಅಲ್ಲದೆ ತಾಲ್ಲೂಕಿನಾದ್ಯಂತ ದಲಿತರು 53 ಮತ್ತು57 ರಲ್ಲಿ ಬಗರ್ ಹುಕುಂ ಅರ್ಜಿ ಸಲ್ಲಿಸಿರುವವರಿಗೆ ಅದಷ್ಟು ಬೇಗ ಖಾತೆ, ಪಹಣಿ ಮಾಡಿ ಕೊಡುವಂತೆ ಅರ್ಜಿ ಸಲ್ಲಿಸಿದರು.
ಸಭೆಯಲ್ಲಿ ಸೋಮಪ್ಪ ಕಡಕೋಳ, ತಹಶಿಲ್ದಾರ್ ನಾಹಿದಾ ಜಮ್ ಜಮ್ ತಾಪಂ ಕಾರ್ಯನಿರ್ವಹಣಾಧಿಕಾರಿ ಡೊಡ್ಡಸಿದ್ದಯ್ಯ,ಸಮಾಜ ಕಲ್ಯಾಣಾಧಿಕಾರಿ ಉಮಾದೇವಿ,ಪಪಂ ಮುಖ್ಯಾಧಿಕಾರಿ ಭಾಗ್ಯಮ್ಮ,ಸಹಾಯಕ ಕೃಷಿ ನಿರ್ದೇಶಕ ನಾಗರಾಜ.ಹೆಚ್,ದಲಿತ ಮುಖಂಡರುಗಳಾದ ವೆಂಕಟೇಶ್, ಚಿಕ್ಕರಂಗಯ್ಯ,ಜಯರಾಮ್ ,ಗಂಗಣ್ಣ,ಕೆ.ಆರ್ ಓಬಳರಾಜು, ಕೆ.ವಿ. ಮಂಜುನಾಥ್,ನರಸಿಂಹಮೂರ್ತಿ,ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.